ಇಂದು ಅವರ ಜನ್ಮದಿನ. . 29.08.2017
ಕುರುಚಲು ಗಡ್ಡ, ಹೆಗಲ ಮೇಲೊಂದು ದಪ್ಪನೆ ಶಾಲು, ನಿಧಾನವಾಗಿ ಆಡುವ ತೂಕದ ಮಾತು, ಸ್ಫುಟವಾದ ಕನ್ನಡ, ಇಂಗ್ಲಿಷ್ ಮೇಲೂ ಉತ್ತಮ ಪ್ರಭುತ್ವ, ಸಣ್ಣ ಟೀಕೆಗೂ ಸ್ಪಂಧಿಸುವ ಸಂವೇದನೆಯುಳ್ಳ ವ್ಯಕ್ತಿಯನ್ನು ಮನಸ್ಸಿನಲ್ಲಿ ಒಮ್ಮೆ ಸ್ಮರಿಸಿಕೊಂಡರೆ ಕಣ್ಣೆದುರು ಬಂದು ನಿಲ್ಲುವ ಚಿತ್ರ ದೇಶ ಕಂಡ ಅಪ್ರತಿಮ ರಾಜಕಾರಣಿ ರಾಮಕೃಷ್ಣ ಹೆಗಡೆಯವರದ್ದು.
ಸಂಸದೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾರು ಬೇಕಾದರೂ ಪ್ರಧಾನಿ, ಮುಖ್ಯಮಂತ್ರಿ ಆಗಬಹುದು. ಸಂಖ್ಯಾಬಲದ ಮೇಲೆ ನಿರ್ಧಾರವಾಗುವ ರಾಜಕೀಯ ಗಾದಿ ಯಾರಿಗೆ ಬೇಕಾದರೂ ಲಭಿಸುತ್ತದೆ. ಆದರೆ ಇದೆಲ್ಲದರ ಆಧಾರ ಬಿಟ್ಟು ಕೇವಲ ಮೌಲ್ಯಗಳಿಂದ ರಾಜ್ಯದ ಅತ್ಯುನ್ನತ ಹುದ್ದೆಗೆ ಏರಿದವರು ರಾಮಕೃಷ್ಣ ಹೆಗಡೆ. 1926ರ ಆ.29ಕ್ಕೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದೊಡ್ಮನೆ ಗ್ರಾಮದಲ್ಲಿ ಜನಿಸಿದರು ರಾಮಕೃಷ್ಣ ಹೆಗಡೆ. ಹವ್ಯಕ ಬ್ರಾಹ್ಮಣರ ಕುಟುಂಬದವರಾದ ಇವರು ಕೃಷಿ ಹಿನ್ನೆಲೆ ಉಳ್ಳವರು. ಕಾಶಿ ವಿದ್ಯಾಪೀಠ, ಬನಾರಸ್ ಹಾಗೂ ಲಕ್ನೋ ವಿ.ವಿಗಳಲ್ಲಿ ಓದಿ ನ್ಯಾಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಸ್ವಾತಂತ್ರ್ಯ ಚಳವಳಿಯಲ್ಲೂ ಭಾಗವಹಿಸಿದ್ದ ಇವರು 1942 ರ ಕ್ವಿಟ್ ಇಂಡಿಯಾ ಚಳವಳಿಯ ಸಂದರ್ಭದಲ್ಲಿ ಸೆರೆಮನೆ ವಾಸವನ್ನೂ ಅನುಭವಿಸಿದ್ದರು. ತಮ್ಮ 20ನೇ ವಯಸ್ಸಿನಲ್ಲೇ ರೈತ ಚಳವಳಿಯನ್ನು ರಾಜ್ಯದಲ್ಲಿ ರೂಪಿಸಿದರು. ಶಕುಂತಲಾ ಹೆಗಡೆ ಇವರ ಪತ್ನಿ. ಪುತ್ರ ಭರತ್ ಹೆಗಡೆ, ಪುತ್ರಿಯರಾದ ಮಮತಾ ನಿಚಾನಿ ಹಾಗೂ ಸಮತಾ ಗೋಪಾಲ್ ಒಳಗೊಂಡ ಸಂತೃಪ್ತ ಕುಟುಂಬ ಹೆಗಡೆ ಅವರದ್ದು. ನಾಟಕ, ಚಲನಚಿತ್ರ, ಸಾಹಿತ್ಯ, ಸಂಗೀತ, ಚಿತ್ರಕಲೆ, ಕ್ರೀಡೆಯಲ್ಲಿ ಇವರು ತಮ್ಮನ್ನು ತೊಡಗಿಸಿಕೊಂಡಿದ್ದರು.
ಇನ್ನೊಂದು ವಿಶಿಷ್ಟ ಸಂಗತಿ ಅಂದರೆ ಹೆಗಡೆ ಪತ್ರಕರ್ತರಾಗಬೇಕೆಂದು ಬಯಸಿದ್ದರು. ಇದು ವಿದ್ಯಾರ್ಥಿದೆಸೆಯಿಂದಲೂ ಅವರು ಕಟ್ಟಿಕೊಂಡ ಕನಸು. ಆದರೆ ಮುಂದೊಂದು ದಿನ ತಾವೇ ಎಲ್ಲಾ ಪತ್ರಕರ್ತರಿಗೂ ಬೇಕಾದ ವ್ಯಕ್ತಿಯಾಗುತ್ತೇನೆ ಎಂದು ಅವರಿಗೆ ಗೊತ್ತಿರಲಿಲ್ಲವೇನೋ? ಹೆಗಡೆ ವೃತ್ತಿ ಬದುಕಿನ ಪ್ರಾರಂಭದಲ್ಲಿ ವಕೀಲರಾದರು. ನಂತರ ಕೆಲಕಾಲ ‘ಶಿರಸಿ’ ಪತ್ರಿಕೆಯಲ್ಲಿ ಕಾರ್ಯನಿರ್ವಹಿಸಿದರು. ಆಮೇಲಿನದು ಇತಿಹಾಸ.
1942ರಲ್ಲೇ ‘ಬ್ರಿಟಿಷರೇ ಭಾರತ ಬಿಟ್ಟು ತೊಲಗಿ’ ಎಂದು ಹೋರಾಡುವ ಮೂಲಕ ಜೈಲುವಾಸ ಅನುಭವಿಸಿದರು. ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷರಾಗಿ 1954 ರಲ್ಲಿ ರಾಜಕೀಯಕ್ಕೆ ಪ್ರವೇಶ ಮಾಡಿದ ಇವರು 1957ರಲ್ಲಿ ಮೊದಲ ಬಾರಿಗೆ ಶಿರಸಿಯಿಂದ ವಿಧಾನಸಭೆ ಗಾದಿಗೆ ಏರಿದರು. ಇಂದಿರಾ ಗಾಂಧಿ 1975 ರಲ್ಲಿ ರಾಷ್ಟ್ರದ ಮೇಲೆ ಹೇರಿದ ತುರ್ತು ಪರಿಸ್ಥಿತಿಯನ್ನು ವಿರೋಧಿಸಿ, ಬೆಳಗಾವಿಯ ಹಿಂಡಲಗಾ ಹಾಗೂ ಬೆಂಗಳೂರು ಕಾರಾಗೃಹದಲ್ಲಿ ಜೈಲುವಾಸವನ್ನು ಕಂಡು, ಹೊರಬಂದ ನಂತರ ಜನತಾ ಪಾರ್ಟಿಯನ್ನು ಸೇರಿದ್ದರು. 1962, 67, 83, 85 ಹಾಗೂ 89ರ ವಿಧಾನಸಭೆ ಚುನಾವಣೆಯಲ್ಲಿ ಜಯಶಾಲಿಯಾಗಿ ಹೊರ ಹೊಮ್ಮಿದರು. ಆರಂಭದಲ್ಲಿಯೇ ಅಂದರೆ 1957ರಲ್ಲಿ ಎಸ್. ನಿಜಲಿಂಗಪ್ಪನವರ ಸಂಪುಟದಲ್ಲಿ ಯೋಜನಾ ಖಾತೆ ಉಪಸಚಿವರಾಗಿ ತಮ್ಮ ಪ್ರತಿಭೆ ಮೆರೆದರು. 1958ರಲ್ಲಿ ಕಾಂಗ್ರೆಸ್ನ ಆಂತರಿಕ ಕಾರಣದಿಂದ ಎಸ್. ನಿಜಲಿಂಗಪ್ಪ ಅಧಿಕಾರ ಕಳೆದುಕೊಂಡಾಗ ಅವರೊಂದಿಗಿದ್ದು 67ರಲ್ಲಿ ಮತ್ತೆ ಮುಖ್ಯಮಂತ್ರಿ ಗಾದಿಗೆ ನಿಜಲಿಂಗಪ್ಪನವರನ್ನು ಏರಿಸಿದರು. ಈ ಪ್ರಯತ್ನದ ಫಲವೇ ನಿಜಲಿಂಗಪ್ಪನವರ ಹಾಗೂ ವೀರಶೈವ ಸಮುದಾಯದವರ ಅಪಾರ ಪ್ರೀತಿ ಗಳಿಸಿಕೊಡಲು ಕಾರಣವಾಗಿ ಸಮುದಾಯದ ನಾಯಕರನ್ನಾಗಿ ರೂಪಿಸಿತು.
ಇನ್ನು 1962ರಿಂದ 72ರ ನಡುವೆ ನಿಜಲಿಂಗಪ್ಪ, ವೀರೇಂದ್ರ ಪಾಟೀಲರ ಸರ್ಕಾರದಲ್ಲಿ ಪ್ರಮುಖ ಖಾತೆ ಪಡೆದು ಜನಪ್ರಿಯತೆ ಹೆಚ್ಚಿಸಿಕೊಂಡರು. 1983ರಲ್ಲಿ ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. 1985ರಲ್ಲಿ ನಡೆದ ರಾಜ್ಯದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಪಕ್ಷದ ಹಿನ್ನಡೆ ಸಾಧಿಸಿದ್ದಕ್ಕೆ ನೈತಿಕ ಜವಾಬ್ದಾರಿ ಹೊತ್ತು ಸ್ಥಾನಕ್ಕೆ ರಾಜಿನಾಮೆ ಕೊಟ್ಟರು ಹಾಗೂ ಆ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತದೊಂದಿಗೆ ಆರಿಸಿ ಬರುವ ಮೂಲಕ ತಾವೊಬ್ಬ ಜನನಾಯಕ ಎನ್ನುವುದನ್ನು ಮತ್ತೆ ಸಾಬೀತುಪಡಿಸಿ ತೋರಿಸಿದರು. ಮತ್ತೊಮ್ಮೆ ರಾಜ್ಯದ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಿದ ಅವರು ಮಾಡಿದ ಬದಲಾವಣೆ ಒಂದೆರಡಲ್ಲ. ಪಂಚಾಯತ್ ರಾಜ್ ಕಾನೂನಿನಲ್ಲಿ ಹೆಗಡೆಯವರ ಪಾತ್ರ ಅತ್ಯಂತ ಮಹತ್ವದ್ದು. ಇದರ ಮೂಲಕ ಅವರು ಹಿಂದುಳಿದವರು, ಬಡವರು ಹಾಗೂ ಸಣ್ಣ ಗುಂಪು, ಜಾತಿಯ ಜನರಿಗೆ ರಾಜಕೀಯದಲ್ಲಿ ಪ್ರಾತಿನಿಧ್ಯ ಗಳಿಸುವ ಶಕ್ತಿ ತುಂಬಿದರು. ಅಧಿಕಾರ ವಿಕೇಂದ್ರಿಕರಣ ಹಾಗೂ ಗ್ರಾಮ ಪಂಚಾಯಿತಿಗಳು ಇವರ ಅತ್ಯಂತ ಪ್ರಿಯ ವಿಚಾರವಾಗಿದ್ದವು. ಇವರ ಕಾಲದಲ್ಲಿ ಕರ್ನಾಟಕದಲ್ಲಿ ಪ್ರಬಲವಾಗಿ ಅನುಷ್ಠಾನಗೊಂಡ ಪಂಚಾಯತ್ ಕಾನೂನಿನಿಂದ ರಾಜೀವ್ಗಾಂಧಿ ಪ್ರಭಾವಿತರಾಗಿದ್ದಂತೂ ವಿಶೇಷ. ಇವರ ಕೃಷಿ-ತೋಟಗಾರಿಕೆ ನೀತಿಯು ‘ರಾಷ್ಟ್ರೀಯ ತೋಟಗಾರಿಕಾ ನಿಗಮ” ದ ಸ್ಥಾಪನೆಗೆ ದಾರಿ ಮಾಡಿಕೊಟ್ಟಿದ್ದು ಇನ್ನೊಂದು ಮೈಲಿಗಲ್ಲು. ಹೆಗಡೆ ಅವರು ಒಂದೆರಡು ಸಾಧನೆಗೆ ತೃಪ್ತಿ ಪಟ್ಟವರಲ್ಲ. ಇವರ ಪ್ರಗತಿ ಪಥದಲ್ಲಿ ವಿಧವಾ ಪಿಂಚಣಿ, ರಾಜ್ಯ ಅಲ್ಪಸಂಖ್ಯಾತರ ಆಯೋಗ-ಅಭಿವೃದ್ಧಿ ನಿಗಮ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರ ಅಭ್ಯುದಯಕ್ಕಾಗಿ ಆಯೋಗ ಹಾಗೂ ಅಭಿವೃದ್ಧಿ ನಿಗಮಗಳ ಸ್ಥಾಪನೆ, ಪೌರಸಭೆಗಳಲ್ಲಿ ಮಹಿಳೆಯರಿಗೆ ಶೇ. 25 ರ ಮೀಸಲು, ಲೋಕಾಯುಕ್ತ ವ್ಯವಸ್ಥೆಯನ್ನು ರಾಜ್ಯಕ್ಕೆ ಒದಗಿಸಿದ ನಿಲುವು, ರೈತರಿಗೆ ಸಾಲ ಮನ್ನಾ, ಕಡಿಮೆ ಬಡ್ಡಿ ಸಾಲ ಮುಂತಾದವು ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ.
ಇನ್ನು ಪಠ್ಯಪುಸ್ತಕ, ಬಸ್ ಪಾಸ್ ನೀಡಿಕೆ, ಸಮವಸ್ತ್ರ ವಿತರಣೆ ಸೇರಿದಂತೆ ಹಲವಾರು ಕ್ರಾಂತಿಕಾರಿ ಸಾಧನೆಗೆ ಇದೇ ಸಂದರ್ಭದಲ್ಲಿ ಮುನ್ನುಡಿ ಬರೆಯಲಾಯಿತು. ಲೋಕಾಯುಕ್ತ ವ್ಯವಸ್ಥೆ ವಿಷಯ ಬಂದಾಗ ಹೆಗಡೆಯವರ ಈ ಸಾಧನೆ ನೆನೆಸಿಕೊಳ್ಳದಿದ್ದರೆ ಅಪಚಾರ ಆದೀತು. ಹೊರ ರಾಜ್ಯದ ನ್ಯಾಯಮೂರ್ತಿಗಳನ್ನು ಈ ಸ್ಥಾನಕ್ಕೆ ತಂದು ಕೂರಿಸಿದರು. ಜತೆಗೆ ಲೋಕಾಯುಕ್ತರಿಗೆ ಸ್ವ ಇಚ್ಛೆಯಿಂದ ಮೊಕದ್ದಮೆಗಳನ್ನು ದಾಖಲಿಸಿಕೊಳ್ಳುವ ಉನ್ನತ ಅಧಿಕಾರವನ್ನು ಹೆಗಡೆ ಆಗಲೇ ನೀಡಿದ್ದರು. ಮುಖ್ಯಮಂತ್ರಿಯನ್ನೂ ಲೋಕಾಯುಕ್ತರು ಪ್ರಶ್ನಿಸಬಹುದಾಗಿತ್ತು.
‘ಮೌಲ್ಯಾಧಾರಿತ ರಾಜಕಾರಣಿ’ ಎಂಬ ಪದ ಹುಟ್ಟಿದ್ದೇ ಇವರಿಂದ ಅಂದರೆ ಅತಿಶಯೋಕ್ತಿ ಎನಿಸದು. ಇದಕ್ಕೆ ನೀಡಬಹುದಾದ ಕೆಲ ಉದಾಹರಣೆಗಳಿವೆ. ಅವುಗಳಲ್ಲಿ ಪ್ರಮುಖವಾದುದು ಬೆಂಡಿಗೇರಿಯಲ್ಲಿ ದಲಿತನಿಗೆ ಮಲ ತಿನ್ನಿಸಿದ ಪ್ರಕರಣ. ಇದನ್ನು ಹೆಗಡೆ ಎಷ್ಟು ಗಂಭೀರವಾಗಿ ಪರಿಗಣಿಸಿದರೆಂದರೆ ‘ಇನ್ನು ಮುಂದೆ ಇಂಥ ಪ್ರಕರಣ ನಡೆದರೆ ತಪ್ಪಿತಸ್ಥರಿಗೆ ದಲಿತರಿಂದಲೇ ಮಲ ತಿನ್ನಿಸುತ್ತೇನೆ’ ಎಂದಿದ್ದರು. ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮುನ್ನಾದಿನ ಎಲ್ಲಾ ಸಂಬಂಧಿಗಳನ್ನು ಕರೆದು ಊಟ ಹಾಕಿ, ನಂತರ ‘ನಾನು ಮುಖ್ಯಮಂತ್ರಿ ಗಾದಿಯಿಂದ ಕೆಳಗಿಳಿಯುವವರೆಗೂ ನಮ್ಮದು ಸಂಬಂಧ ನೆಂಟರಿಷ್ಟರು ಅನ್ನುವುದಷ್ಟಕ್ಕೇ ಸೀಮಿತವಾಗಿರಲಿ. ಅದು ಹಾಗೆಯೇ ಇದ್ದರೆ ಒಳಿತು. ಯಾರೂ ನನ್ನನ್ನು ಭೇಟಿ ಮಾಡಲು ಕಚೇರಿಗೆ ಅಥವಾ ಮನಗೆ ಬರಬೇಡಿ’ ಎಂದು ತಿಳಿಸಿದ್ದರು.
ಇವರ ಪ್ರಾಮಾಣಿಕತೆಗೊಂದು ನಿದರ್ಶನವೆಂದರೆ ವೈದ್ಯ ಸೀಟು ಕೊಡಿಸಿದ್ದಕ್ಕೆ ಪ್ರತಿಯಾಗಿ ಅವರ ಮಗ ಭರತ್ ಹೆಗಡೆ ಲಂಚ ಸ್ವೀಕರಿಸಿದ್ದಾರೆ ಎಂದು ಎ.ಕೆ. ಸುಬ್ಬಯ್ಯನವರು ಆರೋಪಿಸಿದಾಗ, ಹಿಂದೆ ಮುಂದೆ ಯೋಚಿಸದೇ ಮಗನ ವಿರುದ್ಧವೇ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದರು. ಇನ್ನು ಸಹೋದರ ಗಣೇಶ್ ಹೆಗಡೆ ಅಂತಾರಾಜ್ಯ ಅಕ್ಕಿ ಸಾಗಣೆ ದಾಸ್ತಾನಿನಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪ ಕೇಳಿ ಬಂದಾಗಲೂ ತನಿಖೆಗೆ ಸೂಚಿಸಿದ್ದರು. ಭ್ರಷ್ಟಾಚಾರದ ಆರೋಪ ಕೇಳಿ ಬಂದಾಗ ಒಂದಲ್ಲಾ ಎರಡು ಸಾರಿ ಖುದ್ದು ಪದವಿ ತ್ಯಜಿಸಿದ್ದರು.
ಯಕ್ಷಗಾನ ಕಲಾವಿದರೂ ಆಗಿದ್ದ ಹೆಗಡೆ, ಕನ್ನಡದ ಎರಡು ಸಿನಿಮಾಗಳಲ್ಲಿ ನಟಿಸಿ ಸೈ ಅನ್ನಿಸಿಕೊಂಡರು. ಕಲಾವಿದರಿಗೆ ಮಾಸಾಶನ, ಕನ್ನಡ ಚಿತ್ರಗಳಿಗೆ ಶೇಕಡಾ 50 ರ ರಿಯಾಯಿತಿ ಮುಂತಾದ ಯೋಜನೆಗಳನ್ನು ಒಂದರ ಹಿಂದೆ ಒಂದರಂತೆ ಜಾರಿಗೆ ತಂದರು. ಜನಪ್ರಿಯ ನೃತ್ಯಪಟುವಾಗಿದ್ದ ಪ್ರೋತಿಮಾ ಬೇಡಿಯ ನೃತ್ಯ ನಿಕೇತನದ ಸ್ಥಾಪನೆಗೆ ಸ್ಥಳ ನೀಡಿದ ಹೆಗಡೆಯವರ ಔದಾರ್ಯವನ್ನು ತಮ್ಮ ಆತ್ಮಕಥೆಯಲ್ಲಿ ಪ್ರೋತಿಮಾ ಬೇಡಿ ಉಲ್ಲೇಖಿಸಿದ್ದಾರೆ. ಹೆಗಡೆ ಕರ್ನಾಟಕದ ಅತ್ಯಂತ ಉತ್ತಮ ಅರ್ಥಶಾಸ್ತ್ರಜ್ಞರಲ್ಲಿ ಒಬ್ಬರಾಗಿದ್ದರು. ಕರ್ನಾಟಕದ ರಾಜಕೀಯದಲ್ಲಿ 13 ಬಾರಿ ರಾಜ್ಯ ಆಯವ್ಯಯವನ್ನು ಮಂಡಿಸಿದ ಏಕೈಕ ಅರ್ಥ ಸಚಿವ ಎಂಬ ಹೆಗ್ಗಳಿಕೆ ಇವರದ್ದು.
ಹೆಗಡೆಯವರ ಜಾತ್ಯತೀತ ನಿಲುವು ನಿಜವಾಗಿಯೂ ಮೆಚ್ಚತಕ್ಕಂತ ವಿಷಯ. ಎಲ್ಲಾ ಜಾತಿಯ ನಾಯಕರನ್ನೂ ಇವರು ಬೇಧ ತೋರದೇ ಬೆಳೆಸಿದರು. ಸಾಮೂಹಿಕ ನಾಯಕತ್ವಕ್ಕೆ ಬೆಲೆ ಕೊಟ್ಟರು. ಸಮಾಜವಾದದ ವಿಷಯದಲ್ಲಿ ಲೋಹಿಯಾರ ನಿಲುವನ್ನು ಇವರು ಮಾದರಿಯಾಗಿ ಪಾಲಿಸಿದರು. ಸಿದ್ದರಾಮಯ್ಯ ಅವರನ್ನೂ ಒಳಗೊಂಡಂತೆ ರಮೇಶ್ ಜಿಗಜಿಣಗಿ, ಆರ್.ವಿ. ದೇಶಪಾಂಡೆ, ಪಿಜಿಆರ್ ಸಿಂಧ್ಯಾ, ಜೀವರಾಜ್ ಆಳ್ವಾ, ಎಂ.ಪಿ. ಪ್ರಕಾಶ್, ನಜೀರ್ ಸಾಬ್, ಅಜಯ್ ಕುಮಾರ್ ನಾಯಕ್, ಬಿ.ಸೋಮಶೇಖರ್, ಜೀವಿಜಯ, ಎಸ್.ಆರ್. ಬೊಮ್ಮಾಯಿ, ರಾಚಯ್ಯ ಮುಂತಾದ ನಾಯಕರನ್ನು ಬೆಳೆಸಿದ ಕೀರ್ತಿ ಇವರದ್ದು. ನಾಯಕರನ್ನು ಹುಟ್ಟು ಹಾಕುವಲ್ಲಿ ಇವರು ಅರಸ್ಗಿಂತ ಒಂದು ಹೆಜ್ಜೆ ಮುಂದೆ ಇದ್ದರು.
ಹೆಗಡೆ ಒಬ್ಬ ವಿಶಿಷ್ಟ ಮುತ್ಸದ್ದಿ ಅನ್ನಿಸಿಕೊಳ್ಳುವಲ್ಲಿ ಹಲವಾರು ಅಂಶಗಳು ಸಾಕ್ಷೀಭೂತವಾಗುತ್ತವೆ. ಅದರಲ್ಲೂ ಅವರು ಹೊಂದಿದ್ದ ಫರ್ಗೆಟ್(ಮರೆಯುವ) ಹಾಗೂ ಫರ್ಗಿವ್ (ಕ್ಷಮಿಸುವ). ಇದಕ್ಕೆ ಉತ್ತಮ ಉದಾಹರಣೆ ಇವರ ಕಟ್ಟಾ ರಾಜಕೀಯ ವೈರಿ ಆಗಿ ಬೆಳೆದ ಒಂದು ಕಾಲದ ಆತ್ಮೀಯ ನಾಯಕ ಎಚ್.ಡಿ. ದೇವೇಗೌಡರು. ಗೌಡರ ವಿರುದ್ಧ ಎಷ್ಟೇ ಭಿನ್ನಾಭಿಪ್ರಾಯ ಇದ್ದರೂ, ಒಳಜಗಳವಿದ್ದರೂ ಇದಾವುದನ್ನೂ ಪರಿಗಣಿಸದೇ ಎಲ್ಲವನ್ನೂ ಮರೆತು ದೇವೇಗೌಡರ ನಾಯಕತ್ವವನ್ನು ಮತ್ತೆ ಒಪ್ಪಿ ಅವರನ್ನೇ ಮುಖ್ಯಮಂತ್ರಿ ಗಾದಿಗೆ ಏರಲು ಸಹಕಾರ ನೀಡಿದರು. ಈ ಒಂದು ತೀರ್ಮಾನ ದೇವೇಗೌಡರ ಜೀವನದಲ್ಲೇ ಬದಲಾವಣೆ ತಂದು ಅವರು ರಾಜಕೀಯ ಭವ್ಯತೆ ಮೆರೆಯಲು ಅನುವು ಮಾಡಿ ಕೊಟ್ಟಿತು. ಇದು ಹೆಗಡೆಯವರ ಉದಾರತೆಗೆ ನೀಡಬಹುದಾದ ಮಹಾ ನಿದರ್ಶನ. ತಾವೇ ಕಟ್ಟಿ ಬೆಳೆಸಿದ ಪಕ್ಷದಿಂದ ಹೆಗಡೆ ಅವರು ಉಚ್ಛಾಟಿತರಾಗಿದ್ದು ಇತಿಹಾಸದ ದೊಡ್ಡ ದುರ್ದೈವ.
ಆ ನಂತರದ ದಿನದಲ್ಲಿ ಅವರು ದಣಿದದ್ದೇ ಹೆಚ್ಚು. ಒಡನಾಡಿಗಳ ವಿರೋಧ ಹಾಗೂ ವಂಚನೆ, ಅನಾರೋಗ್ಯ, ರಾಜಕೀಯ ಹತಾಶೆಯಿಂದ ಬಳಲಿ ಹೋದರು. ದಳ ಬಣಗಳನ್ನು ವಿಲೀನಗೊಳಿಸುವ ಅವರ ಆಶಯ ಕೊನೆಗೂ ಈಡೇರಲೇ ಇಲ್ಲ. ತೀವ್ರ ಅನಾರೋಗ್ಯದಿಂದ ಹೆಗಡೆಯವರು 2004 ಜನವರಿ 12ರಂದು ಕಣ್ಣುಮುಚ್ಚಿದರು. ಈ ಮೂಲಕ ಕರ್ನಾಟಕದ ಜನತೆ ಒಬ್ಬ ಸಾಮೂಹಿಕ ನಾಯಕತ್ವದ ಹರಿಕಾರನ್ನು ಕಳೆದುಕೊಂಡಿತು.
ಇಂತಿ ನಿಮ್ಮವ,
ಡಾ. ಜರಗನಹಳ್ಳಿ ಕಾಂತರಾಜು
ಅಧ್ಯಕ್ಷರು
ಜನಹಿತ ಫೌಂಡೇಶನ್ (ರಿ.)
Ramakrishna Hegade,85th birth day