ರಾಜ್ಯದ ಹಿತದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು: ಪೇಜಾವರ ಶ್ರೀ ಕರೆ

ಬೆಂಗಳೂರು, ಆ.29- ದೋಸ್ತಿ ಪಕ್ಷಗಳ ನಡುವೆ ಗೊಂದಲ ಮೂಡುತ್ತಿದೆ. ಕಾಂಗ್ರೆಸ್‍ನಲ್ಲೇ ಕೆಲವರು ಸರ್ಕಾರ ಪತನಕ್ಕೆ ಪ್ರಯತ್ನಿಸುತಿದ್ದಾರೆ. ಬಿಜೆಪಿಯೂ ಸಹ ಅದೇ ಪ್ರಯತ್ನ ಮಾಡುತ್ತಿದೆ. ರಾಜ್ಯದ ಹಿತದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕೆಂದು ಪೇಜಾವರ ಶ್ರೀಗಳು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಕಾರ್ಯವೈಖರಿ ಕುರಿತು ಅಸಮಾಧಾನ ಹೊರಹಾಕಿದ್ದಾರೆ. ಎರಡೂ ಪಕ್ಷಗಳ ನಡುವೆ ಗೊಂದಲ ಮೂಡುತ್ತಿದೆ. ಇದರಿಂದ ಅಭಿವೃದ್ಧಿ ಕುಂಠಿತವಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಪಕ್ಷಭೇದ ಹಾಗೂ ವೈಯಕ್ತಿಕ ದ್ವೇಷ ಬಿಟ್ಟು ರಾಜ್ಯದ ಹಿತಾಸಕ್ತಿ ಕಾಪಾಡಬೇಕು. ಎಲ್ಲರೂ ಒಟ್ಟಾಗಿ ರಾಜ್ಯ ಮುನ್ನಡೆಸಬೇಕಿದೆ. ಎಲ್ಲ ಪಕ್ಷಗಳ ಬಗ್ಗೆ ನನಗೆ ಬೇಸರವಿದೆ ಎಂದರು.

ಶಿರೂರು ಶ್ರೀಗಳ ಕುರಿತು ವಾಸ್ತವಾಂಶವನ್ನೇ ನಾನು ಹೇಳಿದ್ದೇನೆ. ಅವರು ಬದುಕಿದ್ದಾಗಲೂ ಟೀಕಿಸಿದ್ದೇನೆ, ಮರಣ ಹೊಂದಿದ ನಂತರವೂ ಅದೇ ವಿಚಾರ ಹೇಳಿದ್ದೇನೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಅಷ್ಟೆ. ಜನರು ನನ್ನ ಬಗ್ಗೆ ತಪ್ಪು ತಿಳಿದುಕೊಂಡಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ ಎಂದರು.
ದಕ್ಷಿಣ ಕನ್ನಡ ಮತ್ತು ಕೊಡಗಿನಲ್ಲಿ ಮಳೆ ಅನಾಹುತ ಸಂಭವಿಸುವುದಕ್ಕೆ ಹಲವು ಯೋಜನೆಗಳೇ ಕಾರಣ. ಪ್ರಮುಖವಾಗಿ ಎತ್ತಿನ ಹೊಳೆ ಯೋಜನೆಯೂ ಕಾರಣವಾಗಿರಬಹುದು. ಆದರೆ, ಈ ಯೋಜನೆ ಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಾನೇನೂ ಹೇಳಲಾರೆ. ಈ ಕುರಿತು ವಿಜ್ಞಾನಿಗಳೇ ಪರಿಶೀಲನೆ ನಡೆಸಬೇಕು. ವೈಜ್ಞಾನಿಕವಾಗಿ ಅಧ್ಯಯನ ನಡೆಸಬೇಕು ಎಂದರು.

ಕಸ್ತೂರಿ ರಂಗನ್ ವರದಿ ಬಗ್ಗೆ ತಜ್ಞರೊಂದಿಗೆ ತ್ವರಿತಗತಿಯಾಗಿ ಸಮಾಲೋಚನೆ ನಡೆಸಬೇಕು. ಅರಣ್ಯ ನಾಶದ ಬಗ್ಗೆ ಕ್ರಮ ಕೈಗೊಳ್ಳಬೇಕು. ಸರಿಯಾಗಿ ಪರಿಶೀಲಿಸಿ ಎತ್ತಿನಹೊಳೆ ಯೋಜನೆಯನ್ನು ಮುಂದುವರಿಸಬೇಕು ಎಂಬುದು ನನ್ನ ಅಭಿಪ್ರಾಯ. ವೈಜ್ಞಾನಿಕ ದೃಷ್ಟಿಕೋನವೂ ಇದಕ್ಕೆ ಬಹು ಮುಖ್ಯ. ಮಹದಾಯಿ ವಿಚಾರವೂ ಹೀಗೇ ಆಗುತ್ತಿದೆ. ದೇಶದ ಹಿತದೃಷ್ಟಿಯಿಂದ ಉತ್ತಮ ನಿರ್ಧಾರ ಕೈಗೊಳ್ಳಬೇಕು ಎಂದರು.
ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರಗಳು ಪರಿಸರ ನಾಶ ಮಾಡುತ್ತಿವೆ. ಪರಿಸರದ ಕಡೆ ಗಮನ ಕೊಡದ ಜನರೂ ಸಹ ನೆರೆ ಹಾವಳಿಗೆ ಕಾರಣರಾಗಿದ್ದಾರೆ. ಸರ್ಕಾರದ ಮೇಲೆ ಒತ್ತಡ ತಂದು ಪರಿಸರ ಸಂರಕ್ಷಣೆ ಆಂದೋಲನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಶಿರೂರು ಶ್ರೀಗಳ ಉತ್ತರಾಧಿಕಾರ ವಿಚಾರ ಮಠಕ್ಕೆ ಸೇರಿದ್ದು. ನಾನು ಬೇಕಾದಲ್ಲಿ ಅವರಿಗೆ ಸಲಹೆ ನೀಡಬಲ್ಲೆ. ಸಾವಿನ ತನಿಖೆ ವರದಿ ಇನ್ನೂ ಬಂದಿಲ್ಲ. ಅವರು ಮತ್ತು ನಾವು ತುಂಬ ಅನ್ಯೋನ್ಯವಾಗಿದ್ದೆವು ಎಂದರು.
ಮಠದ ಟ್ರಸ್ಟ್ ವತಿಯಿಂದ ಕೇರಳ ಹಾಗೂ ಕೊಡಗಿಗೆ 20 ಲಕ್ಷ ಪರಿಹಾರ ನೀಡುವುದಾಗಿ ಶ್ರೀಗಳು ಇದೇ ಸಂದರ್ಭದಲ್ಲಿ ಘೋಷಿಸಿದರು. ಪರಿಹಾರವನ್ನು ನೇರವಾಗಿ ತಲುಪಿಸುವ ಉದ್ದೇಶದಿಂದ ಕೊಡಗಿಗೆ ಖುದ್ದು ಭೇಟಿ ನೀಡಲಿದ್ದೇನೆ ಎಂದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ