ಬೆಂಗಳೂರು,ಆ.29-ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ನನ್ನದೂ ಸೇರಿದಂತೆ ಅನೇಕ ನಾಯಕರ ದೂರವಾಣಿ ಕರೆಗಳನ್ನು ರಾಜ್ಯ ಸರ್ಕಾರ ಕದ್ದಾಲಿಕೆ ಮಾಡುತ್ತಿದೆ. ತಕ್ಷಣವೇ ಇದನ್ನು ನಿಲ್ಲಿಸದಿದ್ದರೆ ಹಿಂದೆ ಇದೇ ಪ್ರಕರಣದಲ್ಲಿ ಏನಾಗಿತ್ತು ಎಂಬುದನ್ನು ನೆನಪಿಟ್ಟುಕೊಳ್ಳಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದ್ದಾರೆ.
ನೂರಕ್ಕೆ ನೂರರಷ್ಟು ಸಿದ್ಧರಾಮಯ್ಯ ಹಾಗೂ ನನ್ನ ದೂರವಾಣಿ ಕರೆಗಳನ್ನು ಕದ್ದಾಲಿಕೆ ಮಾಡಲಾಗುತ್ತಿದೆ. ಇದರಲ್ಲಿ ಯಾವ ಸಂಶಯವೂ ಇಲ್ಲ. ಹಿಂದೆ ಪ್ರತಿಪಕ್ಷಗಳ ನಾಯಕರುಗಳ ದೂರವಾಣಿ ಕರೆಗಳನ್ನು ಕದ್ದಾಲಿಸಿದವರ ಪರಿಸ್ಥಿತಿ ಏನಾಯಿತು ಎಂದು ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಹೆಸರು ಹೇಳದೆ ಸರ್ಕಾರಕ್ಕೆ ಎಚ್ಚರಿಕೆ ಕೊಟ್ಟರು.
ಪಕ್ಷದ ಕಚೇರಿಯಲ್ಲಿ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ನಂತರ ಮಾತನಾಡಿದ ಯಡಿಯೂರಪ್ಪ, ದೂರವಾಣಿ ಕದ್ದಾಲಿಕೆ ಪ್ರಕರಣ ಕುರಿತಂತೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕು, ತಪ್ಪಿತಸ್ಥರು ಯಾರೇ ಆಗಿರಲಿ ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂದು ನಾಳೆಗೆ 100 ದಿನ ಪೂರೈಸಲಿದೆ. ಸರ್ಕಾರ ಅಸ್ತಿತ್ವದಲ್ಲಿದೆ ಎಂಬ ಭಾವನೆಯೇ ಜನರಲ್ಲಿ ಬಂದಿಲ್ಲ. ಒಂದು ಕಡೆ ಅತಿವೃಷ್ಟಿ ಮತ್ತೊಂದು ಕಡೆ ಬರ ಪರಿಸ್ಥಿತಿ ತಾಂಡವವಾಡುತ್ತಿದೆ. ಜನರ ಸಂಕಷ್ಟವನ್ನು ಕೇಳುವವರೆ ಇಲ್ಲ ಎಂದು ಹರಿಹಾಯ್ದರು.
ವಿಧಾನಸೌಧಕ್ಕೆ ಒಬ್ಬ ಸಚಿವರೂ ಬರುತ್ತಿಲ್ಲ. ಪ್ರವಾಹಪೀಡಿತ ಜಿಲ್ಲೆಗಳಲ್ಲಿ ಹಾಗೂ ಬರಪೀಡಿತ ಪ್ರದೇಶಗಳಲ್ಲಿ ಅಭಿವೃದ್ದಿ ಕಾಮಗಾರಿಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಇಂತಹ ಪುರುಷಾರ್ಥಕ್ಕೆ ಏಕೆ ಸರ್ಕಾರ ರಚಿಸಬೇಕಿತ್ತು ಎಂದು ಖಾರವಾಗಿ ಪ್ರಶ್ನಿಸಿದರು.
ಕೊಡಗಿನಲ್ಲಿ ಅಪಾರ ಪ್ರಮಾಣದ ಆಸ್ತಿ-ಪಾಸ್ತಿ ಬೆಳೆ ಸೇರಿದಂತೆ ಎಲ್ಲವನ್ನು ಕಳೆದುಕೊಂಡು ಜನ ನಿರ್ಗತಿಕರಾಗಿದ್ದಾರೆ. ಅವರ ಸಂಕಷ್ಟಗಳು ಹೇಳತೀರದಾಗಿದೆ. ಕೇವಲ ಅಧಿಕಾರಿಗಳ ವರ್ಗಾವಣೆಯಲ್ಲಿ ಸರ್ಕಾರ ಕಾಲ ಕಳೆಯುತ್ತಿದೆ ಎಂದು ಯಡಿಯೂರಪ್ಪ ದೂರಿದರು.
ಪ್ರವಾಹ ಪೀಡಿತ ಜಿಲ್ಲೆಗಳಿಗೆ ಹೆಚ್ಚಿನ ಹಣಕಾಸಿನ ನೆರವು ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಖುದ್ದು ನಾನೇ ಪತ್ರ ಬರೆದಿದ್ದೇನೆ. ಕೇಂದ್ರ ರಕ್ಷಣಾ ಸಚಿವರಾದ ನಿರ್ಮಲ ಸೀತಾರಾಮನ್ ಅವರು ಕೊಡಗಿಗೆ ಬಂದು ವಸ್ತುಸ್ಥಿತಿ ಅಧ್ಯಯನ ಮಾಡಿದ್ದಾರೆ. ಮೂರ್ನಾಲ್ಕು ದಿನUಳಲ್ಲಿ ಕೇಂದ್ರದಿಂದ ರಾಜ್ಯಕ್ಕೆ ಹೆಚ್ಚುವರಿ ಆರ್ಥಿಕ ನೆರವು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬಾಬುರಾವ್ ಚಿಂಚನಸೂರ್ ಪಕ್ಷಕ್ಕೆ ಸೇರ್ಪಡೆಗೊಂಡಿರುವುದು ನಮಗೆ ಆನೆ ಬಲ ಬಂದಂತಾಗಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸಿ ಗೆದ್ದೇ ಗೆಲ್ಲುತ್ತೇವೆ ಎಂದು ಬಿಎಸ್ವೈ ಹೇಳಿದರು.
ಬಿಜೆಪಿಗೆ ಸೇರ್ಪಡೆಯಾದ ಬಾಬುರಾವ್ ಚಿಂಚನಸೂರ್ ಮಾತನಾಡಿ, ನನ್ನನ್ನು ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್ನವರು ಸೋಲಿಸಲಿಲ್ಲ. ಕಾಂಗ್ರೆಸ್ನವರ ಕುತಂತ್ರದಿಂದಲೇ ನನಗೆ ಸೋಲುಂಟಾಯಿತು. ಇದಕ್ಕೆ ಲೋಕಸಭೆ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುವೆ ಎಂದು ಎಚ್ಚರಿಸಿದರು.
ನಾನು ಐದು ಬಾರಿ ಶಾಸಕನಾಗಿ, ಎರಡು ಬಾರಿ ಸಚಿವನಾಗಿ ಉತ್ತಮ ಕೆಲಸ ಮಾಡಿದ್ದೆ. ಹೈದರಾಬಾದ್ ಕರ್ನಾಟಕದ ಕೋಲಿ ಸಮಾಜಕ್ಕೆ ನನ್ನದೇ ಆದ ಸೇವೆ ಮಾಡುತ್ತಾ ಬಂದಿದ್ದೇನೆ. ಇದನ್ನು ಸಹಿಸದವರು ಷಡ್ಯಂತ್ರ ಮಾಡಿ ನನ್ನನ್ನು ಸೋಲಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಇದರ ಪ್ರತಿಫಲ ಅನುಭವಿಸಲಿದ್ದಾರೆಂದು ಪರೋಕ್ಷವಾಗಿ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಚಿಂಚನಸೂರ್ ಕಿಡಿಕಾರಿದರು.
ಮಾಜಿ ಶಾಸಕ ಮಾಲಿಕಯ್ಯ ಗುತ್ತೆದಾರ್ ಮಾತನಾಡಿ, ಹೈದರಾಬಾದ್ -ಕರ್ನಾಟಕದಲ್ಲಿ ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್ ಪಕ್ಷವನ್ನು ತಮ್ಮ ಕುಟುಂಬದ ಆಸ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಅವರಿಗೆ ಮಗನನ್ನು ಹೊರತುಪಡಿಸಿ ಬೇರೊಬ್ಬರು ಬೆಳೆಯಬಾರದೆಂಬ ದುರಾಸೆ ಇದೆ. ಇದಕ್ಕಾಗಿ ಬಾಬುರಾವ್ ಚಿಂಚನಸೂರ್ ಹಾಗೂ ನನ್ನನ್ನು ಸೇರಿ ಅನೇಕರನ್ನು ಬಲಿಕೊಟ್ಟರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಖರ್ಗೆಯನ್ನು ಸೋಲಿಸುವುದೇ ನಮ್ಮ ಏಕೈಕ ಗುರಿ ಎಂದು ಶಪಥ ಮಾಡಿದರು.
ಐದು ಬಾರಿ ಶಾಸಕನಾಗಿದ್ದ ನನ್ನನ್ನು ಸಂಪುಟಕ್ಕೆ ತೆಗೆದುಕೊಳ್ಳಲು ಸಿದ್ಧರಾಮಯ್ಯನವರು ಮುಂದಾಗಿದ್ದರು. ಖರ್ಗೆ ತಮ್ಮ ಮಗನ ಭವಿಷ್ಯಕ್ಕೆ ನಾವು ಅಡ್ಡಿಯಾಗಬಹುದೆಂಬಕಾರಣಕ್ಕೆ ಷಡ್ಯಂತ್ರ ನಡೆಸಿ ನಮ್ಮನ್ನುದೂರ ಇಟ್ಟರು.ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಮಾಲಿಕಯ್ಯ ಗುತ್ತೇದಾರ್ ಭವಿಷ್ಯ ನುಡಿದರು.
ಕೇಂದ್ರ ಸಚಿವರಾದ ಜ್ಯೋತಿ ನಿರಂಜನ್ ಕುಮಾರ್ ಸಾದ್ವಿ, ವಿಧಾನ ಪರಿಷತ್ಸದಸ್ಯರವಿಕುಮಾರ್ ಹಾಗೂ ಚಿಂಚನಸೂರ್ ಪತ್ನಿ ಉಪಸ್ಥಿತರಿದ್ದರು.