ಬೆಂಗಳೂರು,ಆ.29-ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿಗಿಂತಲೂ ಹೆಚ್ಚಿನ ಸ್ಥಾನ ಗೆಲ್ಲಲು ಮುಂದಾಗಿರುವ ಬಿಜೆಪಿ ಸದ್ದಿಲ್ಲದೆ ಆಪರೇಷನ್ ಕಮಲ ಆರಂಭಿಸಿದೆ.
ದೋಸ್ತಿ ಸರ್ಕಾರ ರಚನೆಯಿಂದ ಅಸಮಾಧಾನಗೊಂಡ ನಿರ್ಲಕ್ಷ್ಯಕ್ಕೊಳಗಾಗಿರುವ ಪ್ರಮುಖರನ್ನು ಪಕ್ಷದತ್ತ ಸೆಳೆಯಲು ಮುಂದಾಗಿದೆ. ಈಗಾಗಲೇ ಕೋಲಿ ಸಮುದಾಯದ ಪ್ರಭಾವಿ ಮುಖಂಡ ಮಾಜಿ ಸಚಿವ ಬಾಬುರಾವ್ ಚಿಂಚನಸೂರ್ ಅವರನ್ನು ಪಕ್ಷಕ್ಕೆ ಸೆಳೆದಿರುವ ಬೆನ್ನಲ್ಲೇ ಮತ್ತೋವ ಒಕ್ಕಲಿಗ ನಾಯಕ ಹಾಸನದ ಮುಖಂಡ ಎ.ಮಂಜು ಕರೆತರಲು ಬಿಜೆಪಿ ತೆರೆಮರೆಯಲ್ಲಿ ಕಸರತ್ತು ನಡೆಸಿದೆ.
ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆಯಿಂದ ಅಸಮಾಧಾನಗೊಂಡು ಪಕ್ಷದಲ್ಲಿ ತೆರೆಮರೆಗೆ ಸರಿದಿರುವ ಎ.ಮಂಜು ಅವರನ್ನು ಬಿಜೆಪಿಗೆ ಸೆಳೆಯಲು ಖುದ್ದು ರಾಜ್ಯಾಧ್ಯಕ್ಷ ಯಡಿಯೂರಪ್ಪ ಮುಂದಾಗಿದ್ದಾರೆ.
ಈ ಸಂಬಂಧ ಮಂಜು ಜೊತೆ ಮಾತುಕತೆ ನಡೆಸಿರುವ ಬಿಎಸ್‍ವೈ ಪಕ್ಷಕ್ಕೆ ಬಂದರೆ ಹಾಸನ ಲೋಕಸಭಾ ಕ್ಷೇತ್ರದಿಂದ ಟಿಕೆಟ್ ಸೇರಿದಂತೆ ಪಕ್ಷದಲ್ಲಿ ನಿಮ್ಮ ಸಾಮಥ್ರ್ಯಕ್ಕೆ ತಕ್ಕಂತೆ ಪಕ್ಷದಲ್ಲಿ ಸ್ಥಾನಮಾನ ನೀಡುವ ಆಶ್ವಾಸನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಮೂಲತಃ ಬಿಜೆಪಿಯಿಂದಲೇ ತಮ್ಮ ರಾಜಕೀಯ ಜೀವನ ಆರಂಭಿಸಿದ್ದ ಎ.ಮಂಜು ನಂತರ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದರು. ಪಕ್ಷದ ಮಾಜಿ ಅಧ್ಯಕ್ಷ ಬಿ.ವಿ.ಶಿವಪ್ಪ ಮೂಲಕ ಬಿಜೆಪಿಯಿಂದಲೇ ಶಾಸಕರಾಗಿದ್ದ ಅವರು ಅಡ್ಡಮತದಾನ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಪಕ್ಷಬಿಡುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು.
ಇತ್ತೀಚೆಗೆ ನಡೆದ ವಿಧಾನಸಭಾ ಕ್ಷೇತ್ರದಲ್ಲಿ ಅರಕಲಗೂಡು ಕ್ಷೇತ್ರದಿಂದ ಪರಾಭವಗೊಂಡಿದ್ದರೂ ಎ.ಮಂಜು ಈಗಲೂ ಜಿಲ್ಲೆಯಲ್ಲಿ ಪ್ರಭಾವಿ ನಾಯಕ. ಹಾಸನ ಜಿಲ್ಲೆಯಲ್ಲಿ ಬಿಜೆಪಿಗೆ ಹೇಳಿಕೊಳ್ಳುವಂತಹ ನೆಲೆಯಿಲ್ಲ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಾಸನ ವಿಧಾನಸಭಾ ಕ್ಷೇತ್ರದಿಂದ ಪ್ರೀತಂ ಗೌಡ ಗೆದ್ದಿದ್ದರೆ ಸಕಲೇಶಪುರ, ಅರಕಲಗೂಡು, ಅರಸೀಕೆರೆಯಲ್ಲಿ ಪಕ್ಷ ಉತ್ತಮವಾದ ಮತ ಗಳಿಸಿದೆ.
ಅಲ್ಲದೆ ಹಾಸನ ಲೋಕಸಭಾ ಕ್ಷೇತ್ರ ವ್ಯಾಪ್ತಿಗೊಳಪಡುವ ಕಡೂರಿನಲ್ಲಿ ಬಿಜೆಪಿಯಿಂದ ಬೆಳ್ಳಿಪ್ರಕಾಶ್ ಗೆದ್ದಿದ್ದಾರೆ. ಇದೆಲ್ಲವನ್ನುಲೆಕ್ಕ ಹಾಕಿರುವ ಬಿಜೆಪಿ ನಾಯಕರು ಹಾಸನದಲ್ಲಿ ಜೆಡಿಎಸ್‍ಗೆ ಕಾಂಗ್ರೆಸ್‍ಗಿಂತ ಬಿಜೆಪಿಯೇ ಪ್ರಬಲ ಸ್ಪರ್ಧೆವೊಡ್ಡಲಿದೆ ಎಂಬ ಲೆಕ್ಕಾಚಾರದಲ್ಲಿದ್ದಾರೆ.
ಇತ್ತೀಚೆಗೆ ಎ.ಮಂಜು ಸರ್ಕಾರದ ವಿರುದ್ಧವೇ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಜಿಲ್ಲೆಯಲ್ಲಿ ತಮ್ಮ ಅಸ್ತಿತ್ವ ಉಳಿಯಬೇಕಾದರೆ ಪಕ್ಷ ತ್ಯಜಿಸುವುದು ಅನಿವಾರ್ಯವಾಗುತ್ತದೆ ಎಂದು ಅವರು ತಮ್ಮ ಆಪ್ತರ ಬಳಿ ಹೇಳಿಕೊಂಡಿದ್ದಾರೆ.
ಹಾಸನದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಜೆಡಿಎಸ್ ಪ್ರಭಾವದಿಂದ ಕಂಗೆಟ್ಟಿರುವ ಮಂಜು ಬಿಜೆಪಿ ಮೂಲಕವಾದರ ರಾಜಕೀಯ ಪುನರ್ಜನ್ಮ ಪಡೆದುಕೊಳ್ಳುವ ಚಿಂತನೆಯಲ್ಲಿದ್ದಾರೆ.
ಇನ್ನು ಬಿಜೆಪಿಯಲ್ಲಿರುವ ಪ್ರಭಾವ ಒಕ್ಕಲಿಗ ಮುಖಂಡರು ಈಗಾಗಲೇ ಮಾತುಕತೆ ನಡೆಸಿದ್ದು,ಪಕ್ಷ ಸೇರ್ಪಡೆಗೆ ವೇದಿಕೆಯನ್ನು ಸಿದ್ದಪಡಿಸುತ್ತಿದ್ದಾರೆ. ಕೇವಲ ಎ.ಮಂಜು ಮಾತ್ರವಲ್ಲದೆ ಕಾಂಗ್ರೆಸ್ ಮತ್ತು ಜೆಡಿಎಸ್‍ನಲ್ಲಿರುವ 2ನೇ ಹಂತದ ನಾಯಕರನ್ನು ಕರೆತರುವ ಆಪರೇಷನ್ ಕಮಲ ಸದ್ದಿಲ್ಲದೆ ನಡೆಯುತ್ತಿದೆ.