ಹಿಂಬಡ್ತಿಗೊಳಗಾದ ಅಧಿಕಾರಿಗಳು ಮತ್ತು ನೌಕರರಿಗೆ ನಿರ್ವಹಿಸುತ್ತಿದ್ದ ಹುದ್ದೆಯ ವೇತನವನ್ನು ತಾತ್ಕಾಲಿಕ ಪರಿಹಾರವಾಗಿ ಪಾವತಿಸಲು ಸೂಚನೆ

ಬೆಂಗಳೂರು,ಆ.29- ಸುಪ್ರೀಂಕೋರ್ಟ್ ತೀರ್ಪಿನ ಅನ್ವಯ ಹಿಂಬಡ್ತಿಗೊಳಗಾದ ಅಧಿಕಾರಿಗಳು ಮತ್ತು ನೌಕರರಿಗೆ ಹಿಂಬಡ್ತಿಗೊಳ್ಳುವುದಕ್ಕೆ ಮುನ್ನ ನಿರ್ವಹಿಸುತ್ತಿದ್ದ ಹುದ್ದೆಯ ವೇತನವನ್ನು ಅಡ್-ಹಾಕ್ ವೇತನವಾಗಿ(ತಾತ್ಕಾಲಿಕ ಪರಿಹಾರ) ಪಾವತಿಸಲು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಮುಖ್ಯ ಕಾರ್ಯದರ್ಶಿ ಪಿ.ಎಂ.ವಿಜಯಭಾಸ್ಕರ್ ಸೂಚಿಸಿದ್ದಾರೆ.

ರಾಜ್ಯ ಅಡ್ವೋಕೇಟ್ ಜನರಲ್ ನೀಡಿರುವ ಸಲಹೆ, ಆರ್ಥಿಕ ಇಲಾಖೆ ನೀಡಿರುವ ಸಹಮತಿ ಅನ್ವಯ ಹಾಗೂ ಸರ್ವೋಚ್ಛ ನ್ಯಾಯಾಲಯ ನೀಡಿರುವ ಅಂತಿಮ ಆದೇಶವನ್ನು ಪಾಲಿಸಿ ವೇತನ ನೀಡುವಂತೆ ತಿಳಿಸಿದ್ದಾರೆ.
ಸಂಬಂಧಪಟ್ಟ ಎಲ್ಲ ಬಟಾವಡೆ ಮಾಡುವ ಅಧಿಕಾರಿಗಳು ಹಿಂಬಡ್ತಿ ಪಡೆದು ಅಧಿಕಾರಿ ಮತ್ತು ನೌಕರರಿಗೆ ವೇತನ ಪಾವತಿಸುವಂತೆ ಸೂಚಿಸಿದ್ದಾರೆ.

ಒಂದು ವೇಳೆ ಅಡ್-ಹಾಕ್ ವೇತನವನ್ನು ಎಚ್‍ಆರ್‍ಎಂಎಸ್ ಮೂಲಕ ಪಾವತಿಸಲು ಸಾಧ್ಯವಾಗದಿದ್ದರೆ ಭೌತಿಕವಾಗಿ ವೇತನದ ಬಿಲ್‍ಗಳನ್ನು ಸಿದ್ಧಪಡಿಸಿ ಕ್ರಮಗಳನ್ನು ಕೈಗೊಳ್ಳಬೇಕು. ಈ ವಿಚಾರವಾಗಿ ಸರ್ಕಾರದ ಎಲ್ಲಾ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು , ವಿಶ್ವವಿದ್ಯಾನಿಲಯಗಳು, ಸಾರ್ವಜನಿಕ ಉದ್ದಿಮೆಗಳು, ನಿಗಮ ಮಂಡಳಿ ಆಯೋಗಗಳು ಸೇರಿದಂತೆ ವಿವಿಧ ಸಂಸ್ಥೆಗಳ ಮುಖ್ಯಸ್ಥರು ಈ ಸೂಚನೆಯನ್ನು ಪಾಲಿಸುವಂತೆ ಸುತ್ತೋಲೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಪರಿಶಿಷ್ಟ ಜಾತಿ/ಪಂಗಡಗಳ ನೌಕರರ ಸಮನ್ವಯ ಸಮಿತಿ ಮನವಿ ಸಲ್ಲಿಸಿ ಹಿಂಬಡ್ತಿಗೊಳಗಾದ ಅಧಿಕಾರಿ ಮತ್ತು ನೌಕರರು ಹಿಂಬಡ್ತಿಗೊಳ್ಳುವ ಮುನ್ನ ನಿರ್ವಹಿಸುತ್ತಿದ್ದ ವೇತನವನ್ನು ಪಾವತಿಸುವಂತೆ ಕೋರಿದ್ದ ಹಿನ್ನೆಲೆಯಲ್ಲಿ ಮುಖ್ಯ ಕಾರ್ಯದರ್ಶಿ ಈ ಕ್ರಮ ಕೈಗೊಂಡಿದ್ದಾರೆ.

ಸಮಿತಿ ರಚನೆ:
ಈಗಾಗಲೇ ಇಲಾಖಾವಾರು ಪ್ರಕಟಿಸಲಾದ ಜ್ಯೇಷ್ಠತಾ ಪಟ್ಟಿಗಳಲ್ಲಿನ ನ್ಯೂನತೆಗಳನ್ನು ಸರಿಪಡಿಸಲು ನಾಲ್ವರು ಸದಸ್ಯರನ್ನು ಒಳಗೊಂಡ ಸಮಾಲೋಚನಾ ಸಮಿತಿಯೊಂದನ್ನು ರಚಿಸಿದೆ.
ಪ್ರಕಟಿಸಲಾಗಿರುವ ಜ್ಯೇಷ್ಠತಾ ಪಟ್ಟಿಯಲ್ಲಿನ ಲೋಪಗಳನ್ನು ಸರಿಪಡಿಸುವಂತೆ ನೌಕರರು ಸಲ್ಲಿಸಿರುವ ಆಕ್ಷೇಪಣೆಗಳನ್ನು ನಿಯಮಾನುಸಾರ ದಾಖಲೆಗಳೊಂದಿಗೆ ಕೂಲಂಕುಷವಾಗಿ ಪರಿಶೀಲಿಸಿ ಸೂಕ್ತ ಸಲಹೆ ಅಭಿಪ್ರಾಯವನ್ನು ನೀಡಲು ಸಮತಿಯನ್ನು ರಚಿಸಲಾಗಿದೆ.
ನಿವೃತ್ತ ವಿಶೇಷ ಕಾರ್ಯದರ್ಶಿ ಅಬ್ದುಲ್ ಖದೀರ್ , ಸಮಾಜ ಕಲ್ಯಾಣ ಇಲಾಖೆ, ಕೇಂದ್ರ ಪರಿಹಾರ ಸಮಿತಿ ಕಾರ್ಯದರ್ಶಿ ಯು.ಚಂದ್ರನಾಯಕ್, ನಿವೃತ್ತ ಉಪಕಾರ್ಯದರ್ಶಿಗಳಾದ ಪಿ.ರಾಮನಾಥ್, ದೇವರಾಜ್ ಅವರನ್ನೊಳಗೊಂಡ ಸಮಿತಿಯನ್ನು ರಚಿಸಲಾಗಿದೆ.
ಈ ಸಮಿತಿಗೆ ಪರಿಷ್ಕøತ ಅಂತಿಮ ಜ್ಯೇಷ್ಠತಾ ಪಟ್ಟಿಗಳಿಗೆ ಸಂಬಂಧಿಸಿದ ಮನವಿಗಳನ್ನು ಆಯಾಯ ಇಲಾಖೆ ಮುಖ್ಯಸ್ಥರು ಸಲ್ಲಿಸಬೇಕು. ಸಮಿತಿಯು ನಿಯಮಾನುಸಾರ ಮನವಿಗಳನ್ನು ಪರಿಶೀಲಿಸಿ ನಿರ್ದಿಷ್ಟ ಅಭಿಪ್ರಾಯ ಹಾಗೂ ಸಲಹೆಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಕಳಹಿಸಲು ಆದೇಶಿಸಲಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ