20 ಶ್ವಾನಗಳ ಕುರಿತ ನೈಜ ಕಥೆ – ಅನುಭೂತಿ, ಭಾವೋದ್ರೇಕ ಮತ್ತು ಕಲೆಯ ಅನನ್ಯ ಮಿಶ್ರಣ… ಬಿಡುಗಡೆ

Varta Mitra News

ಬೆಂಗಳೂರು, ಆ.29- ಬೆಂಗಳೂರಿನ ಬೀದಿಗಳಲ್ಲಿ ಸಂರಕ್ಷಿಸಲ್ಪಟ್ಟ 20 ಶ್ವಾನಗಳ ಕುರಿತ ನೈಜ ಕಥೆ – ಅನುಭೂತಿ, ಭಾವೋದ್ರೇಕ ಮತ್ತು ಕಲೆಯ ಅನನ್ಯ ಮಿಶ್ರಣ ಎಂಬ ಪುಸ್ತಕ ಬಿಡುಗಡೆ, ಕಲಾ ಪ್ರದರ್ಶನ ಹಾಗೂ ಜಾಗೃತಿ ಪ್ರಚಾರ ಕಾರ್ಯಕ್ರಮದ ಉದ್ಘಾಟನೆ ಆಗಸ್ಟ್ 31ರಂದು ಸಂಜೆ ಮೆಟ್ರೋ ಕಲಾ ಕೇಂದ್ರದ ಛಾಯಾ ಆರ್ಟ್ ಗ್ಯಾಲರಿಯಲ್ಲಿ ನಡೆಯಲಿದೆ.

ಕಾಫಿ ಮಂಡಳಿಯ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ ಉದ್ಘಾಟಿಸಲಿದ್ದು, ಪ್ರಾಣಿ ಹಕ್ಕುಗಳ ಕಾರ್ಯಕರ್ತೆ ಸಂಯುಕ್ತ ಹೊರನಾಡ್ ಮತ್ತಿತರರು ಭಾಗವಹಿಸಲಿದ್ದಾರೆ.
ಎಮ್‍ಪ್ಯಾಶನ್ – ಬೀದಿಗಳಲ್ಲಿ ಸಂರಕ್ಷಿಸಲ್ಪಟ್ಟ 20 ಶ್ವಾನಗಳ ಜೀವನದ 2ನೇ ಅವಕಾಶದ ತುಡಿತ ಮತ್ತು ರಕ್ಷಿತ ಶ್ವಾನಗಳ ವರ್ಣಚಿತ್ರಗಳನ್ನು ಪುಸ್ತಕದಲ್ಲಿ ಮನ ಮಿಡಿಯುವಂತೆ ಚಿತ್ರಿಸಲಾಗಿದೆ. ಸಮಾಜದಲ್ಲಿ ಪ್ರಾಣಿ ಸಂಕುಲದ ಜೊತೆ ಏನು ಮಾಡಬೇಕು ಮತ್ತು ಏನು ಮಾಡಬಾರದು ಅಲ್ಲದೇ ಅವುಗಳ ಆರೈಕೆಯನ್ನು ಯಾವ ರೀತಿ ಮಾಡುಬೇಕು ಎಂಬುದನ್ನು ಕುರಿತು ಜಾಗೃತಿ ಅಭಿಯಾನವನ್ನೂ ಸಹ ಪ್ರದರ್ಶಿಸಲಾಗುತ್ತದೆ. ಕಲಾ ಪ್ರದರ್ಶನವು ಸೆಪ್ಟೆಂಬರ್ 2ರಂದು ಬೆಳಿಗ್ಗೆ 11 ರಿಂದ ಸಂಜೆ 7 ಗಂಟೆಯವರೆಗೆ ಇರುತ್ತದೆ.

ಎಮ್‍ಪ್ಯಾಶನ್ ಎಂಬುದು ಒಂದು ಭಾವನಾತ್ಮಕ ಮತ್ತು ತೀವ್ರ ಕುತೂಹಲದಿಂದ ಕೂಡಿರುವ ಶ್ವಾನಗಳ ರಕ್ಷಣಾ ಕಾರ್ಯಗಳನ್ನು ಸವಿವರವಾಗಿ ಹಂಚಿಕೊಳ್ಳುವ ವಿಶಿಷ್ಟ ಘಟನೆಗಳನ್ನು ಒಳಗೊಂಡ ಭಂಡರವಾಗಿದೆ. ಪ್ರಾಣಿ ಪ್ರೇಮಿಯಾಗಿರುವ ಸುಜಾಯ ಜಗದೀಶ್ ಅವರು ರಚಿಸಿರುವ ಎಮ್‍ಪ್ಯಾಶನ್ ಪುಸ್ತಕದಲ್ಲಿ ರಸ್ತೆ ಅಪಘಾತ ಹಾಗೂ ಇತರ ಘಟನೆಗಳಿಂದ ಗಾಯಗೊಂಡ 20 ಶ್ವಾನಗಳನ್ನು ರಕ್ಷಿಸಿದ ನೈಜ ಕಥೆಯನ್ನು ಈ ಕಾಫಿ ಟೇಬಲ್ ಪುಸ್ತಕದಲ್ಲಿ ಚಿತ್ರಿಸಲಾಗಿದೆ.
ಈ ಪುಸ್ತಕದಲ್ಲಿ ಬಯೋಕಾನ್ ಸಂಸ್ಥಾಪಕ ಡಾ. ಕಿರಣ್ ಜುಮ್ದಾರ್ ಶಾ, ಮಾಜಿ ಕ್ರಿಕೆಟಿಗ ಮತ್ತು ಭಾರತ ತಂಡದ ನಾಯಕ ರಾಹುಲ್ ದ್ರಾವಿಡ್, ಹೃದ್ರೋಗ ತಜ್ಞ ಪದ್ಮಶ್ರೀ ಡಾ. ರವಣ ರಾವ್, ಖ್ಯಾತ ಪಶುವೈದ್ಯ ಡಾ. ಪವನ್ ಕುಮಾರ್, ನಟಿ ಶೃತಿ ಹರಿಹರನ್ ಸೇರಿದಂತೆ ಹಲವು ವಿಜ್ಞಾನಿಗಳು ಮತ್ತು ಸ್ನೇಹಿತರು ಬರೆದ ಪ್ರಶಂಸಾ ಪತ್ರಗಳು ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ