ಬೆಂಗಳೂರು,ಆ.29-ಹೈದರಾಬಾದ್ ಕರ್ನಾಟಕ ಪ್ರದೇಶದ ಬಗ್ಗೆ ಅನುಸರಿಸುತ್ತಿರುವ ಮಲತಾಯಿ ಧೋರಣೆ ಖಂಡಿಸಿ ಪ್ರತ್ಯೇಕ ರಾಜ್ಯಕ್ಕಾಗಿ ಆಗ್ರಹಿಸಿ ಬೀದರ್ನಿಂದ ಬೆಂಗಳೂರಿನವರೆಗೆ ಅ.2ರಂದು ಪಾದಯಾತ್ರೆ ನಡೆಸುವುದಾಗಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯ ಜಾಗೃತಿ ಸಮಿತಿ ಎಚ್ಚರಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ, ಹಿಂಬಡ್ತಿ ಹೊಂದಿರುವ ಪೆÇಲೀಸ್ ಅಧಿಕಾರಿಗಳಿಗೆ ಮತ್ತು ಇತರೆ ಎಲ್ಲಾ ಅಧಿಕಾರಿಗಳಿಗೆ ನ್ಯಾಯ ಒದಗಿಸಿ ಹಾಗೂ ಕಲಂ 371 ಜೆ ಸಂಪೂರ್ಣ ಜಾರಿಗೆ ತರಬೇಕೆಂದು ತಿಳಿಸಿದರು.
ಪ್ರತಿ ಮೂರು ತಿಂಗಳಿಗೊಮ್ಮೆ ಸಚಿವ ಸಂಪುಟ ನಡೆಸಲು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕಲಬುರಗಿ ಉಪರಾಜಧಾನಿ ಘೋಷಣೆ ಮಾಡಬೇಕು. 371(ಜೆ) ಪ್ರಮಾಣ ಪತ್ರ ನೀಡುವಲ್ಲಿ ಆಗಿರುವ ದುರುಪಯೋಗದ ಕುರಿತು ಉನ್ನತಮಟ್ಟದ ತನಿಖೆ ಮಾಡಲು ಆಗ್ರಹಿಸಿ ಹೈದರಾಬಾದ್ ಕರ್ನಾಟಕದಲ್ಲಿ ಖಾಲಿ ಇರುವ ಕಲಬುರಗಿ ಕಮಿಷನರೇಟ್ ಸಂಬಂಧಿಸಿದಂತೆ ಎರಡು ಡಿವೈಎಸ್ಪಿ ಹುದ್ದೆ ಮತ್ತು ಸುರುಪುರದಲ್ಲಿ ಒಂದು ಡಿವೈಎಸ್ಪಿ ಹುದ್ದೆ ಖಾಲಿ ಬಿಟ್ಟಿದ್ದು ಶೀಘ್ರವಾಗಿ ಭರ್ತಿ ಮಾಡಬೇಕೆಂದು ಮನವಿ ಮಾಡಲಾಗುವುದು ಎಂದರು.
ಇನ್ನು ಒಂದು ತಿಂಗಳವರೆಗೆ ನ್ಯಾಯ ಒದಗಿಸದ ಪಕ್ಷದಲ್ಲಿ ಹೈ-ಕ ಭಾಗದ ಎಲ್ಲ ಉಸ್ತುವಾರಿ ಸಚಿವರ ರಾಜೀನಾಮೆಗೆ ಒತ್ತಾಯಿಸಿ ಕಲ್ಯಾಣ ಕರ್ನಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಅ.2ರಂದು ಬೀದರ್ನಿಂದ ಬೆಂಗಳೂರಿನವರಿಗೆ ಪಾದಯಾತ್ರೆ ಮಾಡಿ ವಿಧಾನಸೌಧ ಮುತ್ತಿಗೆ ಹಾಕಿ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ಹೈದರಾಬಾದ್ ಕರ್ನಾಟಕಕ್ಕೆ ಜಾರಿಯಾಗಿರುವ 371 ಜೆ ಅನ್ವಯ ಶಿಕ್ಷಣ ನೇಮಕಾತಿ ಮುಂಬಡ್ತಿಗಾಗಿ ಆ ಭಾಗದ ಅಭ್ಯರ್ಥಿಗಳಿಗೆ ಶೇ.80ರಷ್ಟು ಮೀಸಲಾತಿ ನೀಡಬೇಕು ಮತ್ತು ರಾಜ್ಯದ ಇತರ ಭಾಗಗಳಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಶೇ.8ರಷ್ಟು ಮೀಸಲಾತಿ ನೀಡಬೇಕಾಗಿದೆ. ಆದರೆ 371ನೇ ಜೆ ಕಲಂ ಸಮರ್ಪಕವಾಗಿ ಅನುಷ್ಠಾನಗೊಳ್ಳದ ಕಾರಣ ಆ ಭಾಗದ ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು.