ಆ.31 ರಂದು ಕಾಂಗ್ರೆಸ್- ಜೆಡಿಎಸ್ ಸರ್ಕಾರದ ಸಮನ್ವಯ ಸಮಿತಿ ಸಭೆ

 

ಬೆಂಗಳೂರು, ಆ.28-ಸಮ್ಮಿಶ್ರ ಸರ್ಕಾರದಲ್ಲಿ ಸಮನ್ವಯತೆಯ ಕೊರತೆ ಕಾಡುತ್ತಿದೆ ಎಂಬ ಕೂಗು ಹೆಚ್ಚಾಗುತ್ತಿದ್ದ ಹಿನ್ನಲೆಯಲ್ಲಿ ಎಚ್ಚೆತ್ತ ಕಾಂಗ್ರೆಸ್- ಜೆಡಿಎಸ್ ಸರ್ಕಾರದ ಸಮನ್ವಯ ಸಮಿತಿ ಇದೇ 31 ರಂದು ಸಭೆ ಕರೆಯಲು ದಿನಾಂಕ ನಿಗದಿ ಮಾಡಿದೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸಮನ್ವಯ ಸಮಿತಿ 31 ರಂದು ಸಭೆ ಸೇರಲಿದ್ದು, ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳು ಸಮ್ಮಿಶ್ರ ಸರ್ಕಾರದ ಮೇಲೆ ಕೇಳಿ ಬಂದ ಆತಂಕದ ಛಾಯೆ, ಎರಡೂ ಪಕ್ಷಗಳ ನಾಯಕರ ಪರಸ್ಪರ ಹೇಳಿಕೆಗಳು, ಪ್ರತಿ ಹೇಳಿಕೆಗಳು, ಸಚಿವ ಸಂಪುಟ ವಿಸ್ತರಣೆ,ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಯಲಿದೆ.

ಹಾಸನದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಸಿದ್ದರಾಮಯ್ಯ ನಾನೇ ಮತ್ತೊಮ್ಮೆ ಮುಖ್ಯಮಂತ್ರಿಯಾಗುತ್ತೇನೆ ಎಂದು ನೀಡಿರುವ ಹೇಳಿಕೆ ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿತ್ತು. ಈ ಹೇಳಿಕೆ ಸಂಬಂಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ನೀಡಿದ ಪ್ರತಿಕ್ರಿಯೆ, ನಂತರ ಹಲವು ಸಚಿವರು, ಶಾಸಕರು, ಕಾಂಗ್ರೆಸ್ ನಾಯಕರು ನೀಡಿದ ಹೇಳಿಕೆಗಳು ಸಮ್ಮಿಶ್ರ ಸರ್ಕಾರದ ವಿಶ್ವಾಸಕ್ಕೆ ಧಕ್ಕೆ ತರುವಂತಿದ್ದವು.

ಎರಡೂ ಪಕ್ಷಗಳ ಸಮನ್ವಯತೆ ಕಾಪಾಡಬೇಕಿದ್ದ ಸಮನ್ವಯ ಸಮಿತಿಯ ಸಭೆಯೇ ನಡೆದಿರಲಿಲ್ಲ. ಎರಡೂ ಪಕ್ಷಗಳ ಅಧ್ಯಕ್ಷರನ್ನು ಸಮನ್ವಯ ಸಮಿತಿಗೆ ಸೇರಿಸಬೇಕೆಂಬ ಒತ್ತಾಯವೂ ಕೂಡ ಕೇಳಿಬಂದಿತ್ತು. ಜೆಡಿಎಸ್ ಅಧ್ಯಕ್ಷರಾದ ಎಚ್.ವಿಶ್ವನಾಥ್ ಅವರು ಬಹಿರಂಗವಾಗಿಯೇ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದರು.
ಸಿದ್ದರಾಮಯ್ಯನವರನ್ನು ಬೆಂಬಲಿಸಿ ಹಲವರು ಹೇಳಿಕೆ ನೀಡಿದ್ದರು. ಸಮ್ಮಿಶ್ರ ಸರ್ಕಾರದ ವಿರುದ್ಧ ಮತ್ತು ಚುನಾವಣಾ ಮೈತ್ರಿ ಸಂಬಂಧದ ಬಗ್ಗೆಯೂ ಕೂಡ ಎರಡೂ ಪಕ್ಷಗಳ ನಾಯಕರು ತದ್ವಿರುದ್ಧ ಹೇಳಿಕೆಗಳನ್ನು ಬಹಿರಂಗವಾಗಿ ನೀಡಿದ್ದರು.
ಒಂದು ಹಂತದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಕಾಂಗ್ರೆಸ್ ನಾಯಕರ ಬಾಯಿಗೆ ಬೀಗ ಹಾಕಲು ಹೈಕಮಾಂಡ್ ನಾಯಕರು ಸೂಚಿಸಿ ಇಲ್ಲದಿದ್ದರೆ ಪರಿಣಾಮ ಎದುರಿಸಿ ಎಂಬ ಸಂದೇಶವನ್ನು ತಮ್ಮ ಪಕ್ಷದ ಮುಖಂಡ ಡ್ಯಾನಿಶ್ ಆಲಿ ಮೂಲಕ ರವಾನಿಸಿದ್ದರು.
ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವ ನಿಟ್ಟಿನಲ್ಲಿ ಸಮ್ಮಿಶ್ರ ಸರ್ಕಾರ ರಚನೆ ಮಾಡಲಾಗಿದೆ. ಲಾಭ-ನಷ್ಟಗಳ ಲೆಕ್ಕಾಚಾರವನ್ನು ಹಾಕುವಂತಿಲ್ಲ. ಲೋಕಸಭೆ ಚುನಾವಣೆ ನಮಗೆ ಮುಖ್ಯವಾಗಿದ್ದು, ಅಲ್ಲಿಯವರೆಗೂ ನಾವು ಸಹಿಸಿಕೊಳ್ಳಬೇಕು ಎಂದು ಹೈಕಮಾಂಡ್ ರಾಜ್ಯ ನಾಯಕರಿಗೆ ಸ್ಪಷ್ಟ ನಿರ್ದೇಶನ ನೀಡಿದೆ.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಕೂಡ ಉತ್ತಮ ಆಡಳಿತ ನೀಡುತ್ತಿದ್ದಾರೆ. ರಾಜಕೀಯವಾಗಿ ಇದರ ಲಾಭವನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗುವಂತೆ ಪಕ್ಷದ ಮುಖಂಡರು ಕಾರ್ಯಕರ್ತರಿಗೆ ಸೂಚಿಸಿದ್ದಾರೆ.
ಆದರೆ ಇತ್ತೀಚೆಗೆ ನಡೆದ ರಾಜಕೀಯ ಬೆಳವಣಿಗೆಗಳು ಸಮ್ಮಿಶ್ರ ಸರ್ಕಾರದ ಬುಡವನ್ನೇ ಅಲುಗಾಡಿಸುತ್ತಿವೆ ಎಂಬ ಊಹಾಪೆÇೀಹಗಳು ಹಬ್ಬಿದ್ದವು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಕುಟುಂಬದವರೊಂದಿಗೆ ಕೈಗೊಂಡಿರುವ ವಿದೇಶಿ ಪ್ರವಾಸ ಮತ್ತು ಅವರ ಜೊತೆ ತೆರಳುತ್ತಿರುವ ಸಚಿವರು, ಶಾಸಕರು ಸರ್ಕಾರ ಉರುಳಿಸುವ ತಂತ್ರ ರೂಪಿಸುತ್ತಿದ್ದಾರೆ ಎಂಬಂತೆಯೇ ಬಿಂಬಿಸಲಾಗುತ್ತಿತ್ತು. ಅಲ್ಲದೆ, ಸಿದ್ದರಾಮಯ್ಯನವರನ್ನು ಹಲವರು ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಇವೆಲ್ಲವಕ್ಕೂ ಪುಷ್ಟಿ ನೀಡುವಂತಿತ್ತು.
ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಯುವ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆದರೆ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ ಎಂದು ಮನಗಂಡ ನಾಯಕರು ಕೂಡಲೇ ಸಮನ್ವಯ ಸಮಿತಿ ಸಭೆ ಕರೆದು ಸಮಸ್ಯೆ ಇತ್ಯರ್ಥಪಡಿಸಿಕೊಳ್ಳಲು ಸೂಚಿಸಿದ ಹಿನ್ನೆಲೆಯಲ್ಲಿ ಇದೇ 31 ರಂದು ಸಭೆ ನಿಗದಿಪಡಿಸಲಾಗಿದೆ.
ಇದಕ್ಕೂ ಮುನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದ ನಾಯಕರಲ್ಲಿ ಮೈತ್ರಿ ಬಗ್ಗೆ ಯಾವುದೇ ಗೊಂದಲವಿಲ್ಲ, ಸಣ್ಣಪುಟ್ಟ ಗೊಂದಲಗಳಿವೆ. ಅವುಗಳು ಬಗೆಹರಿಯುತ್ತವೆ. ಸಮ್ಮಿಶ್ರ ಸರ್ಕಾರ ಸುಗಮವಾಗಿ ಸಾಗಲಿದೆ ಎಂದು ಹೇಳಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ