ನೂತನ ಜಾಹೀರಾತು ಬೈಲಾ ರೂಪಿಸುವಲ್ಲಿ ಬಿಬಿಎಂಪಿ ಎಡವಟ್ಟು

 

ಬೆಂಗಳೂರು, ಆ.28-ನೂತನ ಜಾಹೀರಾತು ಬೈಲಾ ರೂಪಿಸುವಲ್ಲಿ ಬಿಬಿಎಂಪಿ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಯಾರ ಗಮನಕ್ಕೆ ತಾರದೆ ಪಾಲಿಕೆ ಸಭೆಯಲ್ಲೂ ಚರ್ಚೆಗೆ ಅವಕಾಶವಾಗದಂತೆ ಜಾಹೀರಾತು ಬೈಲಾನೀತಿ ಸಂಬಂಧ ನಿರ್ಣಯ ಕೈಗೊಳ್ಳುವ ಕ್ರಮಕ್ಕೆ ಮುಂದಾಗಿರುವುದು ಪಾಲಿಕೆ ಸದಸ್ಯರ ಆಕ್ರೋಶಕ್ಕೂ ಕಾರಣವಾಗಿದೆ.

ಬೆಂಗಳೂರು ನಗರದಲ್ಲಿ ಅಕ್ರಮ ಜಾಹೀರಾತುಗಳ ಹಾವಳಿ ಮಿತಿಮೀರಿ ಹೈಕೋರ್ಟ್ ಕೆಂಗಣ್ಣಿಗೆ ಗುರಿಯಾಗಿ ಕೂಡಲೇ ಈ ಎಲ್ಲವನ್ನು ತೆರವುಗೊಳಿಸಿ ಸೆ.31ರೊಳಗೆ ನೂತನ ಜಾಹೀರಾತು ನೀತಿ ಜಾರಿಗೊಳಿಸಬೇಕೆಂದು ಕಟ್ಟಪ್ಪಣೆ ಮಾಡಿರುವ ಹಿನ್ನೆಲೆಯಲ್ಲಿ ಜಾಹೀರಾತು ನೀತಿಯನ್ನು ಅಧಿಕಾರಿಗಳು ತಯಾರು ಮಾಡಿದ್ದಾರೆ. ಆದರೆ ಈ ಬೈಲಾ ನಿಯಮಾವಳಿಗಳ ಬಗ್ಗೆ ಕೌನ್ಸಿಲ್ ಸಭೆಯಲ್ಲಿ ಚರ್ಚೆಯಾಗಬೇಕು. ಒಂದು ವಾರ ಮುಂಚೆ ನೋಟೀಸ್ ನೀಡಬೇಕು.

ಇದ್ಯಾವುದನ್ನೂ ಮಾಡದೆ ಏಕಾಏಕಿ ಇಂದು ನಡೆಯುವ ಮಾಸಿಕ ಸಭೆಯ ಮುಂದೆ ತರಲು ಮುಂದಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೆ, ಇಂದು ಮಂಡಿಸಲಿರುವ ಪ್ರಸ್ತಾವನೆಯಲ್ಲಿ ಜಾಹೀರಾತು ಬೈಲಾಕ್ಕೆ ಸಂಬಂಧಪಟ್ಟ ವಿಷಯ ಇಲ್ಲ. ಆದರೆ ಹೆಚ್ಚುವರಿ ಪ್ರಸ್ತಾವನೆಯಲ್ಲಿ ಈ ವಿಷಯವನ್ನು ಅಳವಡಿಸಿ ತರಾತುರಿಯಲ್ಲಿ ಒಪ್ಪಿಗೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ.

ಹೈಕೋರ್ಟ್ ಬೀಸಿರುವ ಚಾಟಿ ಏಟಿಗೆ ಪದರಗುಟ್ಟಿ ಹೋಗಿರುವ ಅಧಿಕಾರಿಗಳು ಸಾಧಕ-ಬಾಧಕಗಳ ಬಗ್ಗೆ ಚರ್ಚಿಸದೆ ಈ ರೀತಿ ನೀತಿ-ನಿಯಮಾವಳಿಗಳನ್ನು ರೂಪಿಸಿರುವುದಕ್ಕೆ ಪಾಲಿಕೆ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದಾರಲ್ಲದೆ, ಮಹತ್ವದ ನಿರ್ಣಯ ಕೈಗೊಳ್ಳುವಾಗ ಪಾಲಿಕೆ ಸಭೆಯಲ್ಲಿ ಚರ್ಚೆಯಾಗಬೇಕಾಗುತ್ತದೆ. ಇದಕ್ಕೆ ಅವಕಾಶ ನೀಡಬೇಕು. ಇಲ್ಲ ವಿಶೇಷ ಸಭೆ ಕರೆಯಬೇಕು ಎಂದು ಕೂಡ ಒತ್ತಾಯಿಸಲು ಮುಂದಾಗಿದ್ದಾರೆ.
ಎಲ್ಲೆಂದರಲ್ಲಿ ಅನಧಿಕೃತವಾಗಿ ತಲೆ ಎತ್ತಿರುವ ಮೊಬೈಲ್ ಟವರ್‍ಗಳನ್ನು ತೆರವುಗೊಳಿಸಬೇಕಿತ್ತು. ಆದರೆ ತೆರವುಗೊಳಿಸದೆ ಅವುಗಳಿಗೆ ಎರಡೂವರೆ ಲಕ್ಷ ದಂಡ ವಿಧಿಸುವ ಹಾಗೂ ವರ್ಷಕ್ಕೆ 20 ಸಾವಿರ ರೂ. ಶುಲ್ಕ ಕಟ್ಟುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈ ತೀರ್ಮಾನವೂ ಕೂಡ ಪಾಲಿಕೆ ಸದಸ್ಯರ ಗಮನಕ್ಕೆ ಬಂದಿಲ್ಲ. ಅಧಿಕಾರಿಗಳ ಈ ತೀರ್ಮಾನಕ್ಕೆ ಸದಸ್ಯರು ಪಕ್ಷಭೇದ ಮರೆತು ವಿರೋಧ ವ್ಯಕ್ತಪಡಿಸಿದ್ದಾರೆ.
ಇಂದಿನ ಸಭೆಯಲ್ಲಿ ಈ ವಿಷಯಗಳ ಬಗ್ಗೆ ಗಂಭೀರ ಚರ್ಚೆಯಾಗಲಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ