ಕಾಂಗ್ರೆಸ್‍ನ ಮೂವರು ಹಿರಿಯ ಸಚಿವರ ಖಾತೆ ಬದಲಾವಣೆ…?

 

ಬೆಂಗಳೂರು, ಆ.28-ಕಾಂಗ್ರೆಸ್‍ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಅಪಸ್ವರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಮೂಡಿಸಿದ ಸಂಚಲನದ ನಡುವೆಯೇ ಕಾಂಗ್ರೆಸ್‍ನ ಮೂವರು ಹಿರಿಯ ಸಚಿವರ ಖಾತೆ ಬದಲಾವಣೆಯ ಮಾತು ಕೇಳಿಬಂದಿದೆ.
ಮುಂದಿನ ಮುಖ್ಯಮಂತ್ರಿ ನಾನೇ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡಿಸಿದ ಬಾಂಬ್ ರಾಜಕೀಯ ವಲಯದಲ್ಲಿ ಈಗ ಬಿರುಗಾಳಿ ಸೃಷ್ಟಿಸಿದೆ. ಸ್ವತಃ ಅವರು ಹಾಗೂ ಅವರ ಬೆಂಬಲಿಗರು ಸ್ಪಷ್ಟನೆ ನೀಡಿದರೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರಕ್ಕೆ ಕಂಟಕವಾಗುತ್ತದೆ ಎಂಬ ಊಹಾಪೆÇೀಹಗಳು ಪ್ರವಾಹದಂತೆ ಹರಿದಾಡುತ್ತಿವೆ.

ಈ ನಡುವೆ ಕಾಂಗ್ರೆಸ್ ಹಿರಿಯ ಸಚಿವರಾದ ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್ ಮತ್ತು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರ ಖಾತೆಗಳನ್ನು ಬದಲಾವಣೆ ಮಾಡಬೇಕೆಂದು ಸಿದ್ದರಾಮಯ್ಯ ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂದು ತಿಳಿದುಬಂದಿದೆ.
ಬೆಂಗಳೂರು ನಗರಾಭಿವೃದ್ಧಿ ಹಾಗೂ ಬೆಂಗಳೂರು ಉಸ್ತುವಾರಿ ಹೊಂದಿರುವ ಡಾ.ಜಿ.ಪರಮೇಶ್ವರ್ ಅವರ ಖಾತೆಯನ್ನು ಕೆ.ಜೆ.ಜಾರ್ಜ್ ಅವರಿಗೆ ವರ್ಗಾಯಿಸಬೇಕು. ಕೆ.ಜೆ.ಜಾರ್ಜ್ ಅವರ ಬೃಹತ್ ಕೈಗಾರಿಕೆ ಖಾತೆಯನ್ನು ಆರ್.ವಿ.ದೇಶಪಾಂಡೆ ಅವರಿಗೆ ನೀಡಬೇಕು. ಆರ್.ವಿ.ದೇಶಪಾಂಡೆ ಬಳಿಯಿರುವ ಕಂದಾಯ ಖಾತೆಯನ್ನು ಪರಮೇಶ್ವರ್ ಅವರಿಗೆ ವಹಿಸಿಕೊಡಬೇಕೆಂಬ ಬೇಡಿಕೆಯನ್ನು ಹೈಕಮಾಂಡ್ ಮುಂದೆ ಇಟ್ಟಿದ್ದಾರೆ ಎನ್ನಲಾಗಿದೆ.
ತಮ್ಮ ಪರಮಾಪ್ತರಾದ ಜಾರ್ಜ್ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ಹಾಗೂ ಉಸ್ತುವಾರಿಯನ್ನು ವಹಿಸಬೇಕೆಂಬುದು ಮೊದಲಿನಿಂದಲೂ ಸಿದ್ದರಾಮಯ್ಯನವರ ಆಶಯವಾಗಿತ್ತು. ಆದರೆ ಸಂಪುಟ ರಚನೆ ಸಂದರ್ಭದಲ್ಲಿ ಇದು ಕೈಗೂಡಿರಲಿಲ್ಲ. ಈಗ ಒದಗಿ ಬಂದಿರುವ ಸಂದರ್ಭವನ್ನು ಬಳಸಿಕೊಂಡು ಈ ಬೇಡಿಕೆಯನ್ನು ಅವರು ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ಉಪಮುಖ್ಯಮಂತ್ರಿಯಾಗಿರುವ ಪರಮೇಶ್ವರ್ ಅವರು ಗೃಹ ಖಾತೆಯನ್ನು ಹೊಂದಿದ್ದಾರೆ. ಅಲ್ಲದೆ ಬೆಂಗಳೂರು ನಗರ ಅಭಿವೃದ್ಧಿ ಖಾತೆ, ಯುವಜನ ಸೇವಾ ಮತ್ತು ಕ್ರೀಡಾ ಖಾತೆ ಅವರ ಬಳಿಯೇ ಇದೆ. ಬೆಂಗಳೂರು ನಗರ ಶಾಸಕರಾಗಿರುವವರು ಬೆಂಗಳೂರು ಉಸ್ತುವಾರಿಯಾದರೆ ಸೂಕ್ತ. ಹೀಗಾಗಿ ಜಾರ್ಜ್ ಅವರಿಗೆ ಬೆಂಗಳೂರು ನಗರ ಅಭಿವೃದ್ಧಿ ಖಾತೆ ವಹಿಸಿಕೊಟ್ಟು ಉಸ್ತುವಾರಿಯನ್ನೂ ವಹಿಸಿಕೊಡಬೇಕೆಂಬುದು ಅವರ ಆಗ್ರಹವಾಗಿದೆ.
ಪಕ್ಷದ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಸೆ.1 ಅಥವಾ 2 ರಂದು ನಗರಕ್ಕೆ ಆಗಮಿಸಲಿದ್ದು, ಅಂದು ಸಂಪುಟ ವಿಸ್ತರಣೆ, ಖಾತೆ ಬದಲಾವಣೆ, ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕ, ಸಚಿವರ ಕಾರ್ಯವೈಖರಿ ಮುಂತಾದ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಬಿಬಿಎಂಪಿ ಮೇಯರ್ ಚುನಾವಣೆ ಎದುರಾಗಲಿದ್ದು, ಈ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದವರು ಆಡಳಿತ ಹಿಡಿಯಬೇಕಾಗಿದೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮೇಯರ್ ಆಗಬೇಕಿದ್ದು, ಈ ನಿಟ್ಟಿನಲ್ಲಿ ನಗರ ಕಾಂಗ್ರೆಸ್ ಶಾಸಕರು, ಪಾಲಿಕೆ ಸದಸ್ಯರು ಸಭೆ ನಡೆಸಿ ಚರ್ಚಿಸಿದ್ದಾರೆ.
ಈ ನಡುವೆ ಬೆಂಗಳೂರು ನಗರ ಅಭಿವೃದ್ಧಿ ಹಾಗೂ ಉಸ್ತುವಾರಿ ಸಚಿವರ ಖಾತೆ ಬದಲಾವಣೆಯ ಮಾತು ಕೇಳಿ ಬಂದಿದೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಈ ರಾಜಕೀಯ ಪಟ್ಟುಗಳಿಗೆ ಮಣಿಯುತ್ತಾರೆಯೇ, ಖಾತೆ ಬದಲಾವಣೆ ಮಾಡುತ್ತಾರೆಯೇ, ಕಾಂಗ್ರೆಸ್ ಹೈಕಮಾಂಡ್ ಈ ಬೇಡಿಕೆಗೆ ಒಪ್ಪಿಗೆ ನೀಡುತ್ತದೆಯೇ ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ