ಬೆಂಗಳೂರು, ಆ.28- ವಿದ್ಯಾರ್ಥಿಗಳಿಗೆ ಮತ್ತು ಸಾಫ್ಟ್‍ವೇರ್ ಎಂಜಿನಿಯರ್‍ಗಳಿಗೆ ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಅಂತಾರಾಜ್ಯದ ಇಬ್ಬರು ಆರೋಪಿಗಳನ್ನು ಮೈಕೋ ಲೇ ಔಟ್ ಠಾಣೆ ಪೆÇಲೀಸರು ಬಂಧಿಸಿ 20 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಒಡಿಸಾ ರಾಜ್ಯದ ಗುಡ್ಡಿಗೂಡ ಗ್ರಾಮ ನಿವಾಸಿ ಭರತ್ ಮಹಾಕೂಂಡ (27) ಮತ್ತು ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ನಿವಾಸಿ ರಘು (27) ಬಂಧಿತ ಆರೋಪಿಗಳಾಗಿದ್ದು, ಲಕ್ಷಾಂತರ ರೂ. ಮೌಲ್ಯದ 20 ಕೆ.ಜಿ. ಗಾಂಜವನ್ನು ವಶಪಡಿಸಿಕೊಂಡಿದ್ದಾರೆ.
ನಗರದಲ್ಲಿ ಮಾದಕ ವಸ್ತುವನ್ನು ವ್ಯಾಪಕವಾಗಿ ಮಾರಾಟ ಮಾಡುತ್ತಿರುವ ಜಾಲದ ಪತ್ತೆಗಾಗಿ ವಿಶೇಷ ಕಾರ್ಯಾಚರಣೆಯನ್ನು ಪೆÇಲೀಸರು ಕೈಗೊಂಡಿದ್ದು , ಮೈಕೋ ಲೇ ಔಟ್ ವ್ಯಾಪ್ತಿಯಲ್ಲಿ ಗಾಂಜಾವನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಗಳಿಬ್ಬರನ್ನು ಬಂಧಿಸಿದ್ದಾರೆ.
ಆರೋಪಿಗಳ ಪೈಕಿ ರಘು ಎಂಬಾತ ಮಾದಕ ವಸ್ತು ಗಾಂಜಾ ವ್ಯಸನಿಯಾಗಿದ್ದು, ಈತ ಗಾಂಜಾ ಸೇವನೆ ಜತೆಗೆ ಗಾಂಜಾವನ್ನು ಮಾರಾಟ ಮಾಡಿ ಹಣ ಸಂಪಾದನೆ ಮಾಡುವ ಉದ್ದೇಶದಿಂದ ಭರತ್ ಎಂಬುವನ ಜತೆ ಸೇರಿಕೊಂಡು ಒಡಿಸ್ಸಾದಿಂದ ಗಾಂಜಾವನ್ನು ತಂದು ಬೆಂಗಳೂರಿನಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾಫ್ಟ್‍ವೇರ್ ಎಂಜಿನಿಯರ್‍ಗಳಿಗೆ ಮಾರಾಟ ಮಾಡುತ್ತಿದ್ದುದು ವಿಚಾರಣೆಯಿಂದ ತಿಳಿದು ಬಂದಿದೆ.
ಆಗ್ನೇಯ ವಿಭಾಗದ ಡಿಸಿಪಿ ಡಾ.ಬೋರಲಿಂಗಯ್ಯ ಮಾರ್ಗದರ್ಶನದಲ್ಲಿ ಮೈಕೋ ಲೇ ಔಟ್ ಉಪ ವಿಭಾಗದ ಎಸಿಪಿ ಕರಿಬಸವನಗೌಡ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಆರ್.ಎಂ.ಅಜಯ್ ಮತ್ತು ಸಿಬ್ಬಂದಿ ತಂಡ ದಾಳಿ ಮಾಡಿ ಈ ಕಾರ್ಯಾಚರಣೆ ನಡೆಸಿತ್ತು.