ಡಿಎಂಕೆ ನೂತನ ಅಧ್ಯಕ್ಷರಾಗಿ ಎಂ.ಕೆ.ಸ್ಟಾಲಿನ್ ಅವಿರೋಧ ಆಯ್ಕೆ

ಚೆನ್ನೈ: 50 ವರ್ಷಗಳ ಬಳಿಕ ಡಿಎಂಕೆ ಅಧ್ಯಕ್ಷರಾಗಿ ಎಂ.ಕೆ ಸ್ಟಾಲಿನ್ ಅವರನ್ನು ಅವಿರೋಧವಾಗಿ ಆಯ್ಕೆಮಾಡಲಾಗಿದ್ದು, ಈ ಮೂಲಕ ತಂದೆಯ ಕನಸನ್ನು ನನಸು ಮಾಡುವತ್ತ ಸ್ಟಾಲಿನ್ ಮುಂದಡಿಯಿಟ್ಟಿದ್ದಾರೆ.

1969 ಜುಲೈ 29ರಲ್ಲಿ ಕರುಣಾನಿಧಿ ಅವರು ಡಿಎಂಕೆ ಪಕ್ಷದ ಅಧ್ಯಕ್ಷ ಪಟ್ಟ ಅಲಂಕರಿಸಿ, ನಿಧನರಾಗುವವರೆಗೂ ಅಂದರೆ ಬರೋಬ್ಬರಿ 49 ವರ್ಷಗಳ ಸುದೀರ್ಘ‌ ಕಾಲ ಡಿಎಂಕೆ ಪಕ್ಷದ ಅಧ್ಯಕ್ಷರಾಗಿದ್ದರು. ಇದೀಗ ಆ ಸ್ಥಾನಕ್ಕೆ ಅವರ ಕಿರಿಯ ಪುತ್ರ ಎಂ.ಕೆ.ಸ್ಟಾಲಿನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಸ್ಟಾಲಿನ್‌ ಅವರ ಏಕೈಕ ನಾಮಪತ್ರವನ್ನು ಪಕ್ಷದ ಎಲ್ಲ 65 ಜಿಲ್ಲಾ ಕಾರ್ಯದರ್ಶಿಗಳು ಸರ್ವಾನುಮತದಿಂದ ಅನುಮೋದಿಸಿ ಅವರನ್ನು ಪಕ್ಷಾಧ್ಯಕ್ಷರನ್ನಾಗಿ ಚುನಾಯಿಸಿದರು. ಸ್ಟಾಲಿನ್‌ ಅವರು ಡಿಎಂಕೆ ಪಕ್ಷದ ಎರಡನೇ ಅಧ್ಯಕ್ಷರಾಗಿದ್ದಾರೆ.

ಡಿಎಂಕೆ ಅಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಸ್ಟಾಲಿನ್ ಹೊರತುಪಡಿಸಿ ಬೇರಾರೂ ನಾಮಪತ್ರ ಸಲ್ಲಿಸಿರಲಿಲ್ಲ. ಈ ಹಿನ್ನಲೆಯಲ್ಲಿ ಸ್ಟಾಲಿನ್ ಅವಿರೋಧವಾಗಿ ಆಯ್ಕೆಯಾದರು. ಈ ಮೂಲಕ 50 ವರ್ಷಗಳ ಬಳಿಕ ಪಕ್ಷದ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ.

ತಮ್ಮ 14 ವರ್ಷದಲ್ಲೇ ತಂದೆಯ ಪರ ಪ್ರಚಾರ ಕೆಲಸದಲ್ಲಿ ಭಾಗಿಯಾಗುವ ಮೂಲಕ ಸ್ಟಾಲಿನ್ ರಾಜಕೀಯ ಜೀವನ ಪ್ರವೇಶಿಸಿದರು. ತಂದೆಯ ನೆರಳಿನಲ್ಲಿಯೇ ರಾಜಕೀಯ ಆರಂಭಿಸಿದ ಸ್ಟಾಲಿನ್​ಗೆ ಡಿಎಂಕೆ ಪಕ್ಷದಲ್ಲಿ ಕರುಣಾನಿಧಿ ಒಂದು ಸ್ಥಾನ ಕಲ್ಪಿಸಿದ್ದರು. ತಮ್ಮ ರಾಜಕೀಯ ಉತ್ತರಾಧಿಕಾರಿಯಾಗಿ ಬಿಂಬಿಸಿದ್ದರು. 1977ರ ತುರ್ತುಪರಿಸ್ಥಿತಿ ವೇಳೆ ಸ್ಟಾಲಿನ್ ಬಂಧನಕ್ಕೆ ಒಳಗಾಗಿದ್ದರು. ಆದಾದ 12 ವರ್ಷಗಳ ಬಳಿಕ 1989ರಲ್ಲಿ ವಿಧಾನಸಭೆ ಪ್ರವೇಶಿದರು. ನಂತರದ ಎರಡು ವರ್ಷದಲ್ಲೇ ನಡೆದ ಹಠಾತ್ ಚುನಾವಣೆಯಲ್ಲಿ ಸ್ಟಾಲಿನ್ ಸೋಲು ಕಂಡರು.

ಕರುಣಾನಿಧಿ ಅವರ ಅನಾರೋಗ್ಯದ ಕಾರಣ ಸ್ಟಾಲಿನ್‌ ಅವರು 2017ರ ಜನವರಿಯಿಂದ ಪಕ್ಷದ ಕಾರ್ಯಾಧ್ಯಕ್ಷರಾಗಿ ದುಡಿಯುತ್ತಿದ್ದರು.

MK Stalin, elected DMK president, unopposed,

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ