ಬೆಂಗಳೂರು,ಆ.27- ಬಿಬಿಎಂಪಿಯ ಮುಂದಿನ ಮೇಯರ್ ಆಯ್ಕೆ ಕುರಿತಂತೆ ಪಾಲಿಕೆ ಸದಸ್ಯರೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇಂದಿಲ್ಲಿ ತಿಳಿಸಿದರು.
ತುಮಕೂರು ರಸ್ತೆಯಿಂದ ಮೈಸೂರು ರಸ್ತೆವರೆಗೆ ನಿರ್ಮಿಸಲು ಉದ್ದೇಶಿಸಿರುವ ಸಿಗ್ನಲ್ ಮುಕ್ತ ಕಾರಿಡಾರ್ ಕಾಮಗಾರಿಯಡಿ ಪೂರ್ಣಗೊಂಡಿರುವ ಮಂಜುನಾಥನಗರ ಮುಖ್ಯರಸ್ತೆ ಜಂಕ್ಷನ್ ಸಮೀಪದ ಮೇಲ್ಸೇತುವೆ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಮುಂದಿನ ಮೇಯರ್ ಆಯ್ಕೆ ತೀರ್ಮಾನ ಇನ್ನು ಕೈಗೊಂಡಿಲ್ಲ. ಶೀಘ್ರದಲ್ಲೇ ಪಾಲಿಕೆ ಸದಸ್ಯರೊಂದಿಗೆ ಚರ್ಚಿಸಿ ಒಮ್ಮತದ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದರು.
ಆಸ್ತಿ ತೆರಿಗೆಯಲ್ಲಿ ಶೇ.2ರಷ್ಟು ಸಾರಿಗೆ ಸೆಸ್ ವಿಧಿಸುವ ಕುರಿತಂತೆ ಪಾಲಿಕೆ ಸಭೆಯಲ್ಲಿ ನಿರ್ಣಯ ಕೈಗೊಂಡ ನಂತರ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ನಗರದ ರಸ್ತೆಗಳು ವಾಹನ ಸಂಚಾರಕ್ಕೆ ಯೋಗ್ಯವಿಲ್ಲ ಎಂಬ ಸಾರಿಗೆ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್ ಅವರು, ಈಗಾಗಲೇ ಟೆಂಡರ್‍ಶ್ಯೂರ್, ವೈಟ್‍ಟಾಪಿಂಗ್ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಶೀಘ್ರದಲ್ಲೇ ಎಲ್ಲ ರಸ್ತೆಗಳು ಸಂಚಾರಕ್ಕೆ ಯೋಗ್ಯವಾಗಲಿದೆ. ಅಲ್ಲಿಯವರೆಗೂ ತಾಳ್ಮೆಯಿಂದ ಕಾಯಬೇಕು ಎಂದು ಕಿವಿಮಾತು ಹೇಳಿದರು.
ಪಶ್ಚಿಮಕಾರ್ಡ್ ರಸ್ತೆಯಲ್ಲಿ ರಾಜಾಜಿನಗರ 10ನೇ ಕ್ರಾಸ್, ಮೋದಿ ಹಾಗೂ ಟೋಲ್ಗೇಟ್ ಜಂಕ್ಷನ್‍ಗಳಲ್ಲಿ ಮೇಲ್ಸೇತುವೆ ಮತ್ತು ಕೆಳಸೇತುವೆ ನಿರ್ಮಿಸಿ ಸಿಗ್ನಲ್ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ.
ಒಟ್ಟಾರೆ 112 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಸಮಯ ನಿಗದಿಪಡಿಸಿ:
ಯಾವುದೇ ಅಭಿವೃದ್ಧಿ ಕಾಮಗಾರಿಗಳನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಇನ್ನು ಮುಂದೆ ಕಾಮಗಾರಿಯ ಟೆಂಡರ್ ಸಮಯದಲ್ಲಿ ಗುತ್ತಿಗೆದಾರರಿಗೆ ನಿಗದಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಷರತ್ತು ವಿಧಿಸುವಂತೆ ಅವರು ಬಿಬಿಎಂಪಿ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಹಿಂದಿನ ಸರ್ಕಾರದ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿಗೆ 15 ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ. 2016-17ನೇ ಸಾಲಿನಲ್ಲಿ 7300 ಕೋಟಿ ಹಣ ಬಿಡುಗಡೆ ಮಾಡಲಾಗಿತ್ತು. ಈ ಎಲ್ಲಾ ಕಾಮಗಾರಿಗಳನ್ನು ಪೂರ್ಣಗೊಳಿಸಿದ್ದೇವೆ ಎಂದು ಅವರು ಹೇಳಿದರು.
ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ಜನ ಹೈರಾಣಾಗಿದ್ದಾರೆ. ಈ ಪರಿಸ್ಥಿತಿ ಹೋಗಲಾಡಿಸಲು ಸರ್ಕಾರ ಮತ್ತು ಬಿಬಿಎಂಪಿ ಸಮಾರೋಪಾದಿಯಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ ಎಂದರು.
ನಾನು ಉಸ್ತುವಾರಿ ಸಚಿವರಾದ ನಂತರ ಪೌರಕಾರ್ಮಿಕರಿಗೆ ಬಯೋಮೆಟ್ರಿಕ್ ಯೋಜನೆ ಜಾರಿಗೆ ತಂದು ಕಳ್ಳ ಬಿಲ್ ಪಾವತಿಗೆ ಕಡಿವಾಣ ಹಾಕಿದ್ದೇನೆ. ಅನಧಿಕೃತವಾಗಿ ಹಾಕಲಾಗಿದ್ದ 8 ಕಿ.ಮೀ ಉದ್ದದ ಓಎಫ್‍ಸಿ ಕೇಬಲ್‍ಗಳನ್ನು ತೆರವುಗೊಳಿಸಿದ್ದೇವೆ. ನಗರವನ್ನು ಫ್ಲೆಕ್ಸ್ ಮುಕ್ತ ಮಾಡಿದ್ದೇವೆ. ಯಾರೇ ಅನಧಿಕೃತ ಜಾಹಿರಾತು ಅಳವಡಿಸಿದರೆ ಅಂಥವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದೇನೆ. ಈಗಾಗಲೇ 300ಕ್ಕೂ ಹೆಚ್ಚು ಪ್ರಕರಣ ದಾಖಲಿಸಲಾಗಿದೆ.
ಅದೇ ರೀತಿ ಗೃಹ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ಅವಕಾಶ ಮಾಡಿಕೊಡದಂತೆ ಮುಂದೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಪರಮೇಶ್ವರ್ ಹೇಳಿದರು.
ಶಾಸಕ ಸುರೇಶ್‍ಕುಮಾರ್ ಮಾತನಾಡಿ, ತುಮಕೂರು ರಸ್ತೆಯಿಂದ ಮೈಸೂರು ರಸ್ತೆವರೆಗೂ ಸಿಗ್ನಲ್ ಮುಕ್ತ ಕಾರಿಡಾರ್ ರಸ್ತೆ ನಿರ್ಮಿಸಲಾಗುತ್ತಿದೆ. ಮಂಜುನಾಥ್ ನಗರದ ದ್ವಿಮುಖ ಸಂಚಾರ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಇದೇ ರೀತಿ ಬಸವೇಶ್ವರ ನಗರ ಮುಖ್ಯರಸ್ತೆಯ ಕೂಡು ಸ್ಥಳದಲ್ಲಿ ನಿರ್ಮಿಸುತ್ತಿರುವ ಏಕಮುಖ ಸಂಚಾರ ಮೇಲ್ಸೇತುವೆಯನ್ನು ದ್ವಿಮುಖ ಮೇಲ್ಸೇತುವೆಯನ್ನಾಗಿ ಪರಿವರ್ತಿಸುವಂತೆ ಅವರು ಉಪಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.
ಮೇಯರ್ ಸಂಪತ್‍ರಾಜ್, ಆಡಳಿತಪಕ್ಷದ ನಾಯಕ ಎಂ.ಶಿವರಾಜ್, ಮಾಜಿ ಮೇಯರ್ ಜಿ.ಪದ್ಮಾವತಿ, ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ಸ್ಥಳೀಯ ಬಿಬಿಎಂಪಿ ಸದಸ್ಯರು ಮತ್ತಿತರ ಅಧಿಕಾರಿಗಳು ಹಾಜರಿದ್ದರು.