ಬೆಂಗಳೂರು, ಆ.27- ಆಡಳಿತ ಯಂತ್ರ ಚುರುಕುಗೊಳಿಸಲು ಹಾಗೂ ಬಾಕಿ ಅರ್ಜಿಗಳ ಶೀಘ್ರ ಇತ್ಯರ್ಥಕ್ಕಾಗಿ ನೂತನವಾಗಿ ನಿರ್ಮಿಸಿರುವ ಗ್ರೂಪ್ ಟಾಕ್ ಆ್ಯಪ್‍ಗೆ ಇಂದು ಚಾಲನೆ ದೊರೆಯಿತು.
ಇಂದು ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕರಿಗೌಡ ಸೇರಿದಂತೆ ಇತರೆ ಅಧಿಕಾರಿಗಳು ಆ್ಯಪ್‍ಗೆ ಚಾಲನೆ ನೀಡಿದರು.
ವಿವಿಧ ಕಾರ್ಯಗಳಿಗೆ ಸಂಬಂಧಿಸಿದಂತೆ ಬಾಕಿ ಉಳಿದಿರುವ ಅರ್ಜಿಗಳ ಇತ್ಯರ್ಥ ಹಾಗೂ ಕಂದಾಯ ಇಲಾಖೆಯ ಕೆಲಸಗಳು ಕಾಲಮಿತಿಯಲ್ಲಿ ಪೂರ್ಣಗೊಳ್ಳಲು ಅನುವಾಗುವಂತೆ ಈ ಆ್ಯಪ್ ರೂಪಿಸಲಾಗಿದ್ದು, ಪ್ರತಿಯೊಬ್ಬ ಗ್ರಾಮ ಲೆಕ್ಕಾಧಿಕಾರಿ ತಿಂಗಳಿಗೆ ಎಷ್ಟು ಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂಬ ಗುರಿಯನ್ನು ನಿಗದಿಪಡಿಸಲಾಗಿದೆ.
ಪ್ರತಿವಾರ ಪ್ರಗತಿ ಪರಿಶೀಲನೆಗಾಗಿ ಗ್ರೂಪ್ ಟಾಕ್ ಆ್ಯಪ್ ಮೂಲಕ ಸಿಬ್ಬಂದಿಯೊಂದಿಗೆ ಕಾಲ್ ಕಾನ್ಫರೆನ್ಸ್ ನಡೆಸಲು ಅನುವಾಗುವಂತೆ ಈ ಆ್ಯಪ್ ಸಿದ್ದಗೊಂಡಿದೆ.
ಕ್ಷೇತ್ರಗಳ ಕಾರ್ಯದಲ್ಲಿ ಮಗ್ನರಾದ ಸಿಬ್ಬಂದಿ ತಾವು ಇರುವ ಸ್ಥಳದಿಂದಲೇ ಸಭೆಯಲ್ಲಿ ಪಾಲ್ಗೊಳ್ಳಬಹುದಾದಂತಹ ವ್ಯವಸ್ಥೆ ಇದಾಗಿದ್ದು, ಕೇಂದ್ರ ಕಚೇರಿಯಲ್ಲಿ ಸಭೆ ಕರೆದರೆ ಎಲ್ಲ ಸಿಬ್ಬಂದಿ ತಮ್ಮ ಒಂದು ದಿನದ ಕೆಲಸವನ್ನು ಬಿಟ್ಟು ಬಂದು ಸಭೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಇದರಿಂದ ಕೆಲಸದ ಅಪವ್ಯಯ ತಪ್ಪಿದಂತಾಗುತ್ತದೆ.
ಈ ಆ್ಯಪ್ ಮೂಲಕ ನಡೆಯುವ ಗ್ರೂಪ್ ಟಾಕ್‍ನಲ್ಲಿ ಗ್ರಾಮಾಂತರ ಜಿಲ್ಲೆಯ 174 ಗ್ರಾಮ ಲೆಕ್ಕಾಧಿಕಾರಿಗಳು ಸೇರಿ ಒಟ್ಟು 380 ಸಿಬ್ಬಂದಿ ಏಕಕಾಲಕ್ಕೆ ನೇರವಾಗಿ ಸಂವಾದ ನಡೆಸಬಹುದಾಗಿದೆ.
ಖಾತೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೂ ಅವುಗಳನ್ನು ಆರು ತಿಂಗಳಲ್ಲಿ ಇತ್ಯರ್ಥಗೊಳಿಸಲು ತೀರ್ಮಾನಿಸಿರುವ ಜಿಲ್ಲಾಡಳಿತ ತಮ್ಮ ಈ ಗುರಿಯನ್ನು ನಿರ್ದಿಷ್ಟ ಸಮಯದಲ್ಲಿ ತಲುಪಲು ತಂತ್ರಜ್ಞಾನದ ನೆರವಿನೊಂದಿಗೆ ಸಮಸ್ಯೆಗಳನ್ನು ಪರಿಹರಿಸಲು ಮುಂದಾಗಿದೆ.
ಇಷ್ಟೇ ಅಲ್ಲದೆ ಮ್ಯುಟೇಷನ್ ಬಂದ ಅರ್ಜಿಗಳನ್ನು ವಾಸ್ತವವಾಗಿ 30 ದಿನಗಳಲ್ಲಿ ವಿಲೇವಾರಿ ಮಾಡಬೇಕು. ಆದರೆ ಇದನ್ನು ಸಾಕಷ್ಟು ದೀರ್ಘಾವಧಿವರೆಗೆ ಬಾಕಿ ಉಳಿಸಿಕೊಂಡಿರುವವರು 15 ವರ್ಷಗಳಿಂದ ಹಳೆಯದಾದ ಎಲ್ಲ ಮ್ಯುಟೇಷನ್ ಪ್ರಕರಣಗಳನ್ನು ಶೀಘ್ರದಲ್ಲಿ ಇತ್ಯರ್ಥಗೊಳಿಸುವಂತೆ ನಿರ್ಧರಿಸಲಾಗಿದೆ.
ಅಲ್ಲದೆ ದೊಡ್ಡಬಳ್ಳಾಪುರ ಉಪವಿಭಾಗದ ಭೂ ವ್ಯಾಜ್ಯ ಪ್ರಕರಣಗಳು ಸಾಕಷ್ಟು ಬಾಕಿ ಇರುವ ಬಗ್ಗೆ ಮುಖ್ಯಮಂತ್ರಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಎಲ್ಲ ಪ್ರಕರಣಗಳನ್ನು ಆದಷ್ಟು ಬೇಗ ಇತ್ಯರ್ಥ ಪಡಿಸಬೇಕಿರುವುದರಿಂದ ಇಂತಹ ಯೋಜನೆ ರೂಪಿಸಿ ಕಾರ್ಯಗತಗೊಳಿಸಲಾಗಿದೆ.