ಚೀನಾ ; ಶಾಲಾ-ಕಾಲೇಜು ಸೇರಿದ ವೃದ್ದರ ಸಂಖ್ಯೆ 80 ಲಕ್ಷ…

ಬೀಜಿಂಗ್, ಆ.27-ಕಲಿಕೆಗೆ ವಯಸ್ಸು ಅಡ್ಡಿಯಾಗದು. ಈ ಮಾತು ಚೀನಾ ದೇಶಕ್ಕೆ ಈಗ ಸಮರ್ಥವಾಗಿ ಅನ್ವಯಿಸುತ್ತದೆ. ಕಾರಣ ಅಲ್ಲಿ ಕಳೆದ ವರ್ಷ ಶಾಲಾ-ಕಾಲೇಜು ಸೇರಿದ ವೃದ್ದರ ಸಂಖ್ಯೆ 80 ಲಕ್ಷ… ದಿನೇ ದಿನೇ ಅಲ್ಲಿನ ಅಜ್ಜ-ಅಜ್ಜಿಯಂದಿರಿಗೆ ಕಲಿಕಾ ಆಸಕ್ತಿ ಹೆಚ್ಚಾಗುತ್ತಿದ್ದು, ಶಿಕ್ಷಣ ಸಂಸ್ಥೆಗಳನ್ನು ಸೇರುತ್ತಿರುವವರ ಪ್ರಮಾಣವು ವೃದ್ದಿಯಾಗುತ್ತಿದೆ.. ಇದಕ್ಕೆ ಕಾರಣವೇನು..?
ಚೀನಾ ರಾಜಧಾನಿ ಬೀಜಿಂಗ್, ಶಾಂಘೈ ಸೇರಿದಂತೆ ಅನೇಕ ನಗರಗಳ ಶಾಲಾ-ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ವಯೋವೃದ್ದ ಸಂಖ್ಯೆ ಗಮನಾರ್ಹವಾಗಿ ಹೆಚ್ಚಾಗುತ್ತಿದೆ. ಇದಕ್ಕಾಗಿಯೇ ಚೀನಾದಲ್ಲಿ 70,000ಕ್ಕೂ ಹೆಚ್ಚು ವೃದ್ಧರ ಶಿಕ್ಷಣ ಸಂಸ್ಥೆಗಳಿವೆ.
ಚೀನಾದಲ್ಲೀಗ ವೃದ್ದರ ಸಂಖ್ಯೆ ಹೆಚ್ಚಾಗುತ್ತಿರುವುದು ಕೂಡ ಇದಕ್ಕೆ ಕಾರಣ. ಹಿರಿಯ ನಾಗರಿಕರಲ್ಲಿ ಶಿಕ್ಷಣದ ಮಹತ್ವ, ಸಾಮಾಜಿಕ ಕ್ಷೇತ್ರಗಳಲ್ಲಿ ಸೇವೆ, ಆರೋಗ್ಯ ರಕ್ಷಣೆ, ಅರೆಕಾಲಿಕ ಉದ್ಯೋಗ-ಈ ಉದ್ದೇಶಗಳಿಂದಾಗಿ ವೃದ್ದರಿಗಾಗಿ ಶಾಲೆಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ.
ಚೀನಾದ ನಿವೃತ್ತ ಉದ್ಯೋಗಿಗಳು, ಪಿಂಚಣಿದಾರರು ಇಂಥ ಶಾಲೆಗಳಲ್ಲಿ ಅನೇಕ ವಿಷಯಗಳ ಬಗ್ಗೆ ತರಬೇತಿ ಪಡೆಯುತ್ತಿದ್ದಾರೆ. ಇಂಗ್ಲೀಷ್, ಆನ್‍ಲೈನ್ ಟ್ರೇಡಿಂಗ್, ಆನ್‍ಲೈನ್ ಶಾಪಿಂಗ್, ಅರೆಕಾಲಿಕ ವೃತ್ತಿಪರ ಕೋರ್ಸ್‍ಗಳು. ಯೋಗ, ನೃತ್ಯ, ಆರೋಗ್ಯ ಶಿಕ್ಷಣ ಮೊದಲಾದ ಕೋರ್ಸ್‍ಗಳು ಇಲ್ಲಿ ಲಭ್ಯ. ಇವುಗಳಿಗೆ ಹೆಚ್ಚಿನ ಬೇಡಿಕೆ ಇರುವುದರಿಂದ ಶಾಲಾ-ಕಾಲೇಜುಗಳ ಸಂಖ್ಯೆಯೊಂದಿಗೆ ಕಲಿಕಾ ಆಸಕ್ತಿಯ ಹಿರಿಯ ಪೌರರ ಪ್ರಮಾಣವು ಹೆಚ್ಚಾಗಿದೆ.
ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಚೀನಾದಲ್ಲಿ ಕಳೆದ ವರ್ಷ 80 ಲಕ್ಷ ವೃದ್ದರು ಇಂಥ ಶಾಲೆಗಳಲ್ಲಿ ವಿದ್ಯಾರ್ಥಿಗಳಾಗಿರುವುದು ಇಲ್ಲಿ ಗಮನಾರ್ಹ. ಇದು ದೇಶದ 60 ವರ್ಷಗಳನ್ನು ಮೀರಿದ ಜನರ ಸಂಖ್ಯೆಯಲ್ಲಿ ಶೇ.3ರಷ್ಟು ಪ್ರಮಾಣವಾಗಿದೆ. ದೇಶದ ಪ್ರತಿಯೊಂದು ಕೌಂಟಿ(ತಾಲ್ಲೂಕು)ಗಳಲ್ಲೂ ಇಂಥ ಶಾಲೆಗಳನ್ನು ತೆರೆಯುವುದು ಹಾಗೂ ಅವರನ್ನು ಕ್ರಿಯಾಶೀಲರನ್ನಾಗಿ ಮಾಡುವುದು ಸರ್ಕಾರದ ಉದ್ದೇಶವಾಗಿದೆ.
1970ರಲ್ಲಿ ಚೀನಾದಲ್ಲಿ ವಯೋವೃದ್ಧರಿಗಾಗಿ ಪ್ರಥಮ ಶಿಕ್ಷಣ ಸಂಸ್ಥೆ ಆರಂಭವಾಗಿತ್ತು. ಆಗ ಅದು ಕಮ್ಯೂನಿಷ್ಟ್ ಪಕ್ಷದವರಿಗೆ ಮಾತ್ರ ಸೀಮಿತವಾಗಿತ್ತು. ಈಗ ಇದು ಎಲ್ಲರಿಗೂ ಲಭ್ಯವಾಗುತ್ತಿದೆ.
ಕೆಲವು ವೃದ್ಧರು ಏಕಾಂಗಿತನದ ನೋವು ಹಾಗೂ ಬೇಸರ ಕಳೆಯಲು ಇಂಥ ಶಾಲಾ-ಕಾಲೇಜುಗಳಿಗೆ ಸೇರುತ್ತಿದ್ದಾರೆ. 2017ರಿಂದ ಈ ಪರಿಪಾಠ ಹೆಚ್ಚಾಗುತ್ತಿದೆ. 2020ರ ವೇಳೆಗೆ ಮತ್ತಷ್ಟು ಶಿಕ್ಷಣಸಂಸ್ಥೆಗಳು ಹಿರಿಯ ನಾಗರಿಕರಿಗಾಗಿಯೇ ತಲೆ ಎತ್ತಲಿವೆ. 2050ರ ಹೊತ್ತಿಗೆ 4.97 ಕೋಟಿ ಮಂದಿ ಸೇರ್ಪಡೆಯಾಗುವ ನಿರೀಕ್ಷೆ ಇದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ