ಮೇಘಾಲಯ ಮುಖ್ಯಮಂತ್ರಿ ಹಾಗೂ ಎನ್‍ಪಿಪಿ ಅಧ್ಯಕ್ಷ ಕಾನ್‍ರಾಡ್ ಕೆ.ಸಂಗ್ಮಾಗೆ ಉಪ ಚುನಾವಣೆಯಲ್ಲಿ ಜಯ

ಶಿಲ್ಲಾಂಗ್, ಅ.27-ಮೇಘಾಲಯ ಮುಖ್ಯಮಂತ್ರಿ ಹಾಗೂ ಎನ್‍ಪಿಪಿ ಅಧ್ಯಕ್ಷ ಕಾನ್‍ರಾಡ್ ಕೆ.ಸಂಗ್ಮಾ ಸೌತ್ ತುರಾ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಯ ಸಾಧಿಸಿದ್ದಾರೆ.
ಸಂಗ್ಮಾ ಅವರು ಕಾಂಗ್ರೆಸ್‍ನ ಸಮೀಪ ಪ್ರತಿಸ್ಪರ್ಧಿ ಚಾರ್ಲೊಟ್ಟೆ ಡಬ್ಲ್ಯು,. ಮೊಮಿನ್ ಅವರನ್ನು 8,400ಕ್ಕೂ ಹೆಚ್ಚು ಮತಗಳಿಂದ ಮಣಿಸಿದ್ದಾರೆ ಎಂದು ಮುಖ್ಯ ಚುನಾವಣಾ ಅಧಿಕಾರಿ(ಸಿಇಒ) ಎಫ್.ಆರ್. ಖರ್ಕೋನ್‍ಗೊರ್ ತಿಳಿಸಿದ್ದಾರೆ.
ಮೇಘಾಲಯ ಮುಖ್ಯಮಂತ್ರಿ ಅವರು ಒಟ್ಟು ಮತದಾನವಾದ 22,300 ಮತಗಳಲ್ಲಿ 13,656 ಮತಗಳನ್ನು ಪಡೆದು ಜಯಶೀಲರಾದರೆ, ಕಾಂಗ್ರೆಸ್ ಅಭ್ಯರ್ಥಿ ಮೊಮಿನ್ 8,421 ಮತಗಳನ್ನು ಗಳಿಸಿದರು.
ಸಂಗ್ಮಾ ಅವರ ಗೆಲುವಿನೊಂದಿಗೆ 60 ಸದಸ್ಯರ ಮೇಘಾಲಯ ವಿಧಾನಸಭೆಯಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್‍ಪಿಪಿ), ವಿರೋಧ ಪಕ್ಷ ಕಾಂಗ್ರೆಸ್ ಜೊತೆ 20 ಸ್ಥಾನಗಳ ಸಮಬಲ ಸಾಧಿಸಿದೆ.
ಈಶಾನ್ಯ ರಾಜ್ಯದಲ್ಲಿ ಈಗ ಎನ್‍ಪಿಪಿ ನೇತೃತ್ವದ ಆರು ಪಕ್ಷಗಳ ಮೇಘಾಲಯ ಪ್ರಜಾಸತ್ತಾತ್ಮಕ ಮೈತ್ರಿಕೂಟ(ಎಂಡಿಎ) ಸರ್ಕಾರ ಅಸ್ತಿತ್ವದಲ್ಲಿದೆ. ಎನ್‍ಪಿಪಿ ಅಲ್ಲದೇ ಎಂಡಿಎಗೆ ಬಿಜೆಪಿ(2), ಎನ್‍ಸಿಪಿ(1), ಪ್ರಾದೇಶಿಕ ಪಕ್ಷಗಳಾದ ಸಂಯುಕ್ತ ಪ್ರಜಾಸತ್ತಾತ್ಮಕ ಪಕ್ಷ(7), ಹಿಲ್ ಸ್ಟೇಟ್ ಪೀಪಲ್ಸ್ ಡೆಮೊಕ್ರಾಟಿಕ್ ಪಾರ್ಟಿ(2) ಹಾಗೂ ಇಬ್ಬರು ಪಕ್ಷೇತರರ ಬೆಂಬಲವೂ ಇದೆ.
ರಾಣಿಕೊರ್ ವಿಧಾನಸಭೆ ಉಪ ಚುನಾವಣೆಯಲ್ಲಿ ಯುಡಿಎ ಅಭ್ಯರ್ಥಿ ಪಯೋಸ್ ಮಾರ್ವಿನ್ ಅವರು ಎನ್‍ಪಿಪಿ ಹುರಿಯಾಳು ಮಾರ್ಟಿನ್ ಎನ್. ಡ್ಯಾನ್‍ಗ್ಗೋ ವಿರುದ್ಧ ಗೆಲುವು ದಾಖಲಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ