ಕೊಡಗಿನಲ್ಲಿ ಮಳೆಗೆ 14 ಮಂದಿ ಬಲಿ: ಒಂದೇ ದಿನ ನಾಲ್ವರ ಮೃತದೇಹ ಪತ್ತೆ, 5 ಮಂದಿಗೆ ಶೋಧ

ಕೊಡಗು: ಮಹಾಮಳೆ ಈವರೆಗೆ ಒಟ್ಟು 14 ಮಂದಿಯನ್ನು ಬಲಿ ಪಡೆದಿದೆ. ಶನಿವಾರ ಒಂದೇ ದಿನ 4 ಮೃತದೇಹಗಳು ಪತ್ತೆಯಾಗಿದೆ. ರಣಮಳೆಯ ಪ್ರವಾಹಕ್ಕೆ ನಲುಗಿಹೋಗಿದ್ದ ಕೊಡಗು ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದೆ. ಹೀಗಿರುವಾಗಲೇ ಮಡಿಕೇರಿಗೆ ಮತ್ತೆ ಮಳೆಯಯಾಗುವ ಎಚ್ಚರಿಕೆ ರವಾನೆಯಾಗಿದೆ.
ಕೊಡಗಿನಲ್ಲಿ ವರುಣನ ಆರ್ಭಟ ಕೊಂಚ ಕಡಿಮೆಯಾಗಿದ್ದು, ಮಡಿಕೇರಿ ಸಹಜ ಸ್ಥಿತಿಯತ್ತ ಮರಳುತ್ತಿದೆ. ಆದರೆ ಆ ರಣಭೀಕರ ಮಳೆ ಸೃಷ್ಠಿಸಿದ ಅವಾಂತರ ಅಷ್ಟಿಷ್ಟಲ್ಲ. ಯಾಕೆಂದರೆ ಜಲಪ್ರಳಯದಿಂದ ಸತ್ತವರ ಸಂಖ್ಯೆ 14ಕ್ಕೆ ಏರಿಕೆಯಾಗಿದೆ. ಪ್ರಕೃತಿ ವಿಕೋಪದಲ್ಲಿ ಸಿಲುಕಿ ಸಾವನ್ನಪ್ಪಿದ್ದ ನಾಲ್ಕು ಮಂದಿಯ ಮೃತದೇಹ ಶನಿವಾರ ಪತ್ತೆಯಾಗಿದೆ. ಮಡಿಕೇರಿ ತಾಲೂಕಿನ ಮಕ್ಕಂದೂರು ಸಮೀಪ ಉದಯಗಿರಿಯಲ್ಲಿ ಬಾಬು ಎಂಬವರ ಮೃತದೇಹವನ್ನು ಗರುಡ ತಂಡದ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಹೆಬ್ಬೆಟ್ಟಗೇರಿಯ ನಿವಾಸಿ ಚಂದ್ರಪ್ಪರ ಮೃತದೇಹವನ್ನು ಎನ್ಡಿಆರ್ಎಫ್ ಸಿಬ್ಬಂದಿ ಪತ್ತೆ ಹಚ್ಚಿದರು. ಹಟ್ಟಿಹೊಳೆಯ ಫ್ರಾನ್ಸಿಸ್, ಕಾಟಕೇರಿಯಲ್ಲಿ ಗಿಲ್ಬರ್ಟ್ ಎಂಬವವರ ಮೃತದೇಹ ಸಹ ಪತ್ತೆಯಾಗಿದೆ.
ಮಹಾಮಳೆಯಿಂದ ಅದೆಷ್ಟು ಮಂದಿ ನಾಪತ್ತೆಯಾಗಿದ್ದಾರೆ ಅನ್ನೋ ಮಾಹಿತಿ ಯಾರಿಗೂ ನಿಖರವಾಗಿ ಸಿಕ್ಕಿಲ್ಲ. ಕುಟುಂಬಸ್ಥರು, ಸಂಬಂಧಿಕರು ಕೊಟ್ಟ ಮಾಹಿತಿಯನ್ವಯ 5 ಮಂದಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಮಡಿಕೇರಿ ತಾಲೂಕಿನ 34 ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದ ಹಾನಿಯಾಗಿದೆ. ನಿರಾಶ್ರಿತರ ಶಿಬಿರದಲ್ಲಿರುವ ನಾಲ್ಕು ಸಾವಿರ ಜನರಿಗೆ ಶೀಘ್ರವೇ ತಾತ್ಕಾಲಿಕ ಶೆಡ್ ಮತ್ತು ಮನೆ ಕಳೆದುಕೊಂಡವರಿಗೆ ತಾತ್ಕಾಲಿಕ ಆಶ್ರಯ ನಿರ್ಮಾಣ ಮಾಡಿಕೊಡಲಾಗುವುದು ಎಂದು ಕೊಡಗು ಡಿಸಿ ಶ್ರೀ ವಿದ್ಯಾ ಹೇಳಿದ್ದಾರೆ.
ಪ್ರಾಕೃತಿಕ ವಿಕೋಪದಿಂದ ಮನೆ ಕಳೆದುಕೊಂಡು ಪರಿಹಾರ ಕೇಂದ್ರ ಸೇರಿ ಮದುವೆಯ ಕನಸು ಕಮರಿ ಹೋಗಿದ್ದ ಇಬ್ಬರೂ ಯುವತಿಯರ ಮೊಗದಲ್ಲಿ ಮಂದಹಾಸ ಮೂಡಿದೆ. ಇಂದು ಮಂಜುಳ ಎಂಬ ಯುವತಿಯ ಮದುವೆ ನಡೆಯಲಿದೆ. ನಗರದ ಓಂಕಾರ ಸದನದಲ್ಲಿರೋ ಕಾಳಜಿ ಕೇಂದ್ರದಲ್ಲಿ ಮದುವೆ ತಯಾರಿ ನಡೆದಿದೆ. ಮೆಹೆಂದಿ ಶಾಸ್ತ್ರ ಸೇರಿದಂತೆ ಹಲವು ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಸೇರಿದಂತೆ ಹಲವರು ಭಾಗಿಯಾಗಿದ್ದರು.
ಇತ್ತ ಮಡಿಕೇರಿಯಿಂದ ಮೈಸೂರು ತೆರಳುವ ರಸ್ತೆಯಲ್ಲಿ ಬಿದ್ದಿದ್ದ ಮಣ್ಣು ತೆರವು ಕಾರ್ಯ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು, ಎಂದಿನಂತೆ ವಾಹನಗಳು ಸಂಚರಿಸುತ್ತಿವೆ. ಮಡಿಕೇರಿಯಿಂದ ಮಂಗಳೂರು ರಸ್ತೆ ಬದಿಯಲ್ಲಿ ಹಲವೆಡೆ ಗುಡ್ಡಗಳು ಕುಸಿದಿರುವ ಹಿನ್ನೆಲೆ ಸದ್ಯ ಲಘು ವಾಹನ ಸಂಚರಿಸಲು ಅನುಮತಿ ನೀಡಲಾಗಿದೆ. ಆದ್ರೆ ಪ್ರವಾಹ ಪೀಡಿತ ಕೊಡಗು ನಿಧಾನಕ್ಕೆ ಸಹಜ ಸ್ಥಿತಿಗೆ ಮರಳುತ್ತಿರೋ ಹೊತ್ತಲ್ಲಿ ಹವಾಮಾನ ಇಲಾಖೆ ಮತ್ತೊಂದು ಎಚ್ಚರಿಕೆ ರವಾನಿಸಿದೆ. ಇನ್ನು ಮೂರು ದಿನ ಕರಾವಳಿ, ಕೊಡಗು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಬಗ್ಗೆ ಎಚ್ಚರಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ