ಡಾ|| ಲಕ್ಷ್ಮೀವೆಂಕಟೇಶ್ ನರಗುಂದ ನಿಧನ

ಬೆಂಗಳೂರು : ದಿ|| ಡಾ|| ಲಕ್ಷ್ಮೀವೆಂಕಟೇಶ್ ನರಗುಂದ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ವಹಿಸಿ ಹಿಂದುಳಿದ ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಮತ್ತು ನರಗುಂದ ಶಿಕ್ಷಣ ಸಮೂಹ ಸಂಸ್ಥೆ ಮೂಲಕ ಬೆಂಗಳೂರು ಹೊಸಕೇರಿಹಳ್ಳಿಯಲ್ಲಿ ಫಾರ್ಮಸಿ ಶಿಕ್ಷಣ ಸಂಸ್ಥೆ ಸ್ಥಾಪಿಸುವ ಮೂಲಕ ಶಿಕ್ಷಣ ವಲಯದಲ್ಲಿ ಗಮನ ಸೆಳೆದಿದ್ದ ಡಾ|| ಲಕ್ಷ್ಮೀವೆಂಕಟೇಶ್ ನರಗುಂದ (ಡಾ|| ಎಲ್‍ವಿಜಿ) ರವರು ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ 62 ವರ್ಷವಾಗಿತ್ತು. ಬುಧವಾರ ನಿಧನರಾದ ದಿವಂಗತರಿಗೆ ಅವರ ಹಿತೈಷಿಗಳಿಂದ ಮತ್ತು ಶಿಷ್ಯ ಬಳಗದವರಿಂದ ಶನಿವಾರ ಅಶ್ರುತರ್ಪಣ ಸಲ್ಲಿಸಲಾಯಿತು.
ದಿ|| ಡಾ|| ಲಕ್ಷ್ಮೀವೆಂಕಟೇಶ್ ನರಗುಂದ (ಡಾ||. ಎಲ್‍ವಿಜಿ) ಕಿರು ಪರಿಚಯ:
ಜೂನ್ 9, 1956ರಲ್ಲಿ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ಗ್ರಾಮದಲ್ಲಿ ಜನಿಸಿದರು. ಉತ್ತರ ಕರ್ನಾಟಕದ ಮೊದಲನೇ ಎಂಬಿಬಿಎಸ್ ಪದವಿ ಪಡೆದ ಡಾ|| ಗುರುಚಾರ್ ನರಗುಂದರವರ ತೃತೀಯ ಪುತ್ರರಾಗಿದ್ದ ದಿವಂಗತರು ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾಭ್ಯಾಸವನ್ನು ಕುಷ್ಟಗಿಯಲ್ಲಿ ಪೂರೈಸಿ, ಪಿಯುಸಿ ಬಳ್ಳಾರಿಯಲ್ಲಿ ಪದವಿಯನ್ನು ಕರ್ನಾಟಕ ಕಾಲೇಜ್ ಧಾರವಾಡದಲ್ಲಿ ತದನಂತರ ಬಿ. ಫಾರ್ಮ್‍ವನ್ನು ಬೆಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಅಭ್ಯಾಸಿಸಿದ ಇವರು ಎಂ. ಫಾರ್ಮ, ಪಿ. ಹೆಚ್ಚಡಿ, ಮತ್ತು ಎಫ್‍ಐಸಿ ಪೂರೈಸಿಕೊಂಡಿದ್ದು ಇವರಿಗೆ ಮೂಲ ಸ್ಪೂರ್ತಿದಾಯಕರಾಗಿದ್ದ ದೇಶದ ಖ್ಯಾತ ಕೆಮಿಸ್ಟ್ರಿ ವಿಭಾಗದ ವಿಜ್ಞಾನಿಗಳಾದ ಡಾ|| ಕೆ. ಎನ್. ನರಗುಂದ ಮತ್ತು ಡಾ|| ಶಿಶು, ಅಹ್ಮದಾಬಾದ್ ಇವರ ಮಾರ್ಗದರ್ಶನದಂತೆ ಉತ್ತಮ ಶಿಷ್ಯರಾಗಿ ಬೆಳೆದರು. ಹುಬ್ಬಳಿಯಲ್ಲಿ ಫಾರ್ಮಸಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಪ್ರಾರಂಭಿಸಿದರು. ಇವರು ಶ್ರೀಮತಿ ಡಾ||. ಅಚಲಾ ನರಗುಂದ (ಈಗಿನ ಎಂಇಎಸ್ ಸಂಸ್ಥೆಯ ಗಣಿತ ವಿಭಾಗದ ಹೆಚ್‍ಒಡಿಯಾಗಿರುವರು) ರವರೊಂದಿಗೆ ವಿವಾಹವಾದರು. ಇಬ್ಬರು ಗಂಡು ಮಕ್ಕಳಾದ ಡಾ|| ಸಚೀಂದ್ರ ಮತ್ತು ಶ್ರವಣ ನರಗುಂದ (ಇವರು ಕೂಡ ಡಾ|| ಎಲ್‍ವಿಜಿ ಮಾರ್ಗದರ್ಶನದಂತೆ ತಂದೆಯ ಸ್ಥಾಪಿಸಿದ ಕಾಲೇಜಿನಲ್ಲಿ ಸಹ ಶಿಕ್ಷಕರಾಗಿಯೂ ಮತ್ತು ನರಗುಂದ ಶಿಕ್ಷಣ ಸಂಸ್ಥೆಯ ಮಾಲೀಕತ್ವದಲ್ಲಿ ಸದಸ್ಯರಾಗಿದ್ದಾರೆ.) ಪ್ರೀತಿಯ ಪುತ್ರರನ್ನು ಹೊಂದಿದ್ದರು.
ಫಾರ್ಮಸಿ ಕಾಲೇಜ್‍ನಲ್ಲಿ ಉಪನ್ಯಾಸಕರಾಗಿದ್ದಾಗ ಹುಬ್ಬಳಿಯಲ್ಲಿ ಒಂದು ಫಾರ್ಮಸಿ ಕಾಲೇಜ್‍ನ್ನು ಪ್ರಾರಂಭಿಸಲು ಪ್ರಯತ್ನ ಪಟ್ಟರು. ಅದು ಆಗದಾಗ ಬೆಂಗಳೂರುನಲ್ಲಿ ಉದ್ಯೋಗ ಅರಸಿಕೊಂಡು ಬಂದು ಇವರು ಇಲ್ಲಿಯೂ ಫಾರ್ಮಸಿ ಕಾಲೇಜ್ ಪ್ರಾರಂಭಿಸಲು ಕನಸು ಕಂಡರು. ಹಿರಿಯರ ಕೃಪೆಯಿಂದ ಅವರು 1991ರಲ್ಲಿ ಬೆಂಗಳೂರಿನ ಬ್ಯಾಂಕ್ ಕಾಲೋನಿಯಲ್ಲಿ ಒಂದು ಸಣ್ಣ ಕಟ್ಟಡದಲ್ಲಿ ಫಾರ್ಮಿಸಿ ಕಾಲೇಜ್ ಪ್ರಾರಂಭಿಸುವದರೊಂದಿಗೆ ಫಾರ್ಮಸಿ ಶಿಕ್ಷಣ ಕ್ಷೇತ್ರದಲ್ಲಿ ಮುಂದಾದರು. ತದ ನಂತರ ಬನಶಂಕರಿ 3ನೇ ಹಂತ ಹೊಸ್ಕೇರಿ ಹಳ್ಳಿಯಲ್ಲಿ ಸ್ವಂತ ಕಟ್ಟಡದಲ್ಲಿ ಬೃಹತ್ತಾದ ಫಾರ್ಮಸಿ ಕಾಲೇಜ್ ಪ್ರಾರಂಭಿಸಿ ಡಿ. ಫಾರ್ಮ, ಬಿ. ಫಾರ್ಮ ತದನಂತರ ಎಂ. ಫಾರ್ಮ ಮತ್ತು ಫಾರ್ಮ್-ಡಿ ಕೋರ್ಸ್‍ಗಳನ್ನು ರಾಜ್ಯದ ಮತ್ತು ದೇಶದ ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಪ್ರಾರಂಭಿಸಿದರು. ಜೊತೆ ಜೊತೆಗೆ ನರಗುಂದ್ ಇಂಟರ್‍ನ್ಯಾಷನಲ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜ್‍ಗಳನ್ನು ಬಡ ಮತ್ತು ಮಧ್ಯಮ ಜನಾಂಗಕ್ಕಾಗಿಯೇ ಪ್ರಾರಂಭಿಸಿದರು. ಕಡು ಬಡ ವಿದ್ಯಾರ್ಥಿಗಳಿಗೆ ಜಾತ್ಯಾತೀತವಾಗಿ ಉಚಿತ ಶಿಕ್ಷಣವನ್ನು ತಮ್ಮದೇ ಕಾಲೇಜಿನಲ್ಲಿ ಕೊಡುತಿದ್ದರು. ಇತ್ತೀಚಿಗೆ ಕಾಲೇಜ್‍ನ ಬೆಳ್ಳಿ ಹಬ್ಬ(25ನೇ ವರ್ಷದ)ಮೊಹೋತ್ಸವದ ಆಚರಣೆ ಪೂರೈಸಿದರು. ಈ ಬೆಳ್ಳಿ ಹಬ್ಬವನ್ನು ಕೇಂದ್ರ ಸಚಿವ ಶ್ರೀ ಅನಂತಕುಮಾರ್‍ರವರು ನೇರವೇರಿಸಿದ್ದರು.
ಇನ್ನಿಷ್ಟು ಮುಂದುವರೆದು ಅವರು ಸ್ವಂತ ಗ್ರಾಮವಾದ ಯಲಬುರ್ಗಿ ತಾಲ್ಲೂಕಿನ ಮುರಡಿಯಲ್ಲಿ ಸ್ಕೂಲ್ ಮತ್ತು ಅಲ್ಲಿಯ ಆಸಕ್ತ ಕ್ರೀಢಾ ಯುವಕರಿಗಾಗಿ ಕುಷ್ಟಗಿಯಲ್ಲಿ ಡೈಮೆಂಡ್ ಕ್ಲಬ್ ಸ್ಥಾಪನೆ. ಸರ್ಕಾರದ ಜೊತೆಗೆ ಚರ್ಚಿಸಿ ಕುಷ್ಟಗಿ ತಾಲ್ಲೂಕಿನಲ್ಲಿ ಕ್ರೀಡೆ ಕಚೇರಿಗಾಗಿ ಸ್ಥಳವನ್ನು ಕೊಡಿಸಿದ್ದಾರೆ. ಹಾಗೇಯ ಬಡವರಿಗೆ ಮತ್ತು ಹಿರಿಯರಿಗೆ ಅನಾಥ ಮತ್ತು ವೃದ್ಧಾಶ್ರಮವನ್ನು ತೆರೆಯಲು ಆಸಕ್ತರಾಗಿದ್ದರು.
ಶ್ರೀಯುತರು ಅವರ ಸಹೋದರರು ಮತ್ತು ತಂಗಿಯವರಲ್ಲಿ, ಬಂಧು-ಬಳಗ ಹಾಗೂ ಸ್ನೇಹಿತ ಬಳಗ, ಎಲ್ಲರಲ್ಲೂ ಸ್ನೇಹ ಭಾವದೊಂದಿಗೆ, ಮತ್ತು ಕಷ್ಟ-ಕಾರ್ಪಣ್ಯಗಳಿಗೆ ಸಹಾಯ ಹಸ್ತವನ್ನು ನೀಡುತ್ತಿದ್ದರು. ಸದಾ ಹಸನ್ಮುಖಿಯಾಗಿದ್ದು ಇವರು ತಮ್ಮ ಸಂಸ್ಥೆಯಲ್ಲಿ ನೂರಾರು ಜನರಿಗೆ ಉದ್ಯೋಗವನ್ನು ಕೊಟ್ಟಿದ್ದಾರೆ.
ಶ್ರೀಯುತರು ಭಾರತ ದೇಶದ ಪಿಸಿಐನ ಸದಸ್ಯತ್ವವನ್ನು ಹೊಂದಿದ್ದರು. ರಾಷ್ಟೀಯ ಮತ್ತು ಅಂತರಾಷ್ಟೀಯ ಫಾರ್ಮ ಮ್ಯಾಗಿಜಿನ್‍ಗಳಿಗೆ ಬರಹ ಮತ್ತು ಸಂಶೋದನೆಗಳ ಬೆಳವಣಿಗೆ ಬಗ್ಗೆ ಬರಹಗಳನ್ನು ಪೂರೈಸುತ್ತಿದ್ದರು. ಫಾರ್ಮ ಆಸಕ್ತರಿಗೆ ಬೋಧನೆ ಜೊತೆಗೆ ಔಷಧಿ ಅಂಗಡಿಗಳನ್ನು ಸೇವಾ ಮನೋಭಾದೊಂದಿಗೆ ಪ್ರಾರಂಭಿಸಲು ಅನುಕೂಲತೆಗಳನ್ನು ಮಾಡುತ್ತಿದ್ದರು.
ವಿಷಯ ಸಂಗ್ರಹ : ಮುರಳಿಧರ ಕಲಾಲಬಂಡಿ, ಬೆಂಗಳೂರು

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ