
ನವದೆಹಲಿ: ಆ-26: ದೇಶದ ಹಿಂದೂ ನ್ಯಾಯಾಲಯದ ಮೊದಲ ಮಹಿಳಾ ನ್ಯಾಯಾಧೀಶೆ ಎಂಬ ಖ್ಯಾತಿಗೆ ಕಾರಣವಾಗಿದ್ದ, ಅಖಿಲ ಭಾರತೀಯ ಹಿಂದು ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ, ಡಾ.ಪೂಜಾ ಶಕುನ್ ಪಾಂಡೆ ವಿವಾದಾತ್ಮಕ ಹೇಳಿಕೆಯೊಂದನ್ನು ನೀಡಿದ್ದು, ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದೆ.
ಗಾಂಧೀಜಿಯನ್ನು ರಾಷ್ಟ್ರಪಿತ ಎಂದು ಕರೆಯಲು ಸಾಧ್ಯವಿಲ್ಲ. ಭಾರತ ವಿಭಜನೆಯಾಗಿ ಲಕ್ಷಾಂತರ ಜನರು ಸಾಯಲು ಗಾಂಧೀಜಿಯೇ ಕಾರಣ. ನಾಥೂರಾಮ್ ಗೋಡ್ಸೆ ಅವರಿಗಿಂತ ಮೊದಲೇ ನಾನು ಹುಟ್ಟಿದ್ದರೆ, ನಾನೇ ಗಾಂಧಿ ಯನ್ನು ಕೊಲ್ಲುತ್ತಿದ್ದೆ ಎಂದು ಹೇಳಿಕೆ ನೀಡಿದ್ದು, ಭಾರೀ ವಿವಾದಕ್ಕೆ ಕಾರಣವಾಗಿದೆ.
ದೇಶ ವಿಭಜನೆಯಾಗಿ ಹಲವರು ಸಾಯಲು ಕಾರಣರಾದ ಗಾಂಧಿಜೀಯವರಿಗೆ ರಾಷ್ಟ್ರಪಿತ ಎಂದು ಕರೆಯಲು ಸಾಧ್ಯವಿಲ್ಲ. ಅವರಿಗೆ ಹೇಗೆ ಈ ಬಿರುದು ಕೊಡಲಾಯಿತು ಎಂಬುದೇ ತಿಳಿಯುತ್ತಿಲ್ಲ. ಯಾವ ತಂದೆಯೂ ತಮ್ಮ ಮಕ್ಕಳನ್ನು ಬೇರೆ ಮಾಡುವುದಿಲ್ಲ. ಲಕ್ಷಾಂತರ ಹಿಂದುಗಳ ಸಾವಿಗೆ ಕಾರಣವಾದವರಿಗೆ ರಾಷ್ಟ್ರಪಿತ ನಾಮಧೇಯ ಸೂಕ್ತವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ವೇಳೆ ಗಾಂಧೀಜಿಯನ್ನು ವೈಭವೀಕರಿಸುತ್ತಿರುವ ಇತಿಹಾಸವನ್ನೇ ಇಂದಿನ ಪೀಳಿಗೆ ನಿಜವೆಂದು ನಂಬಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಆ ಇತಿಹಾಸವನ್ನು ಬದಲಿಸಬೇಕು. ಗಾಂಧಿ ತತ್ವಶಾಸ್ತ್ರವನ್ನು ಬ್ಯಾನ್ ಮಾಡಬೇಕು. ನಿಜಕ್ಕೂ ಗೋಡ್ಸೆ ಓರ್ವ ದೇಶಭಕ್ತ. ಗೋಡ್ಸೆಯನ್ನು ರಾಕ್ಷನಂತೆ ಇಂದು ಬಿಂಬಿಸುತ್ತಿರುವುದು ಸರಿಯಲ್ಲ ಎಂದು ಪಾಂಡೆ ಹೇಳಿದ್ದಾರೆ.
ಸ್ವತಂತ್ರ್ಯ ಭಾರತದಲ್ಲಿರುವ ಗಾಂಧಿ ಹಿಂಬಾಲಕರು ಯಾರಾದರೂ ದೇಶ ವಿಭಜನೆಗೆ ಮುಂದಾದರೆ ಅವರನ್ನು ಶೂಟ್ ಮಾಡಲು ಹಿಂಜರಿಯುವುದಿಲ್ಲ ಎಂಬ ಎಚ್ಚರಿಕೆಯನ್ನೂ ಪೂಜಾ ಶಕುನ್ ನೀಡಿದ್ದಾರೆ.