ಬೆಂಗಳೂರು,ಆ.24-ಕಳೆದ ಐದು ದಶಕಗಳಿಂದ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿ ವಿವಿಧ ಹುದ್ದೆಗಳನ್ನು ಅನುಭವಿಸಿ ಸದ್ಯ ತೆರೆಮರೆಗೆ ಸರಿದಿರುವ ಸೋಮನಹಳ್ಳಿ ಮಲ್ಲಯ್ಯ ಕೃಷ್ಣ ಅಲಿಯಾಸ್ ಎಸ್.ಎಂ.ಕೃಷ್ಣ ಸಕ್ರಿಯ ರಾಜಕಾರಣಕ್ಕೆ ಗುಡ್ ಬೈ ಹೇಳಲಿದ್ದಾರೆಯೇ…?
ಎಸ್.ಎಂ.ಕೃಷ್ಣ ಅವರ ಆಪ್ತರು ಹಾಗೂ ಕುಟುಂಬ ಮೂಲಗಳು ಹೇಳುವಂತೆ ಸದ್ಯದಲ್ಲೇ ಅವರ ಆತ್ಮಚರಿತೆ ಬಿಡುಗಡೆಯಾಗಲಿದ್ದು, ನಂತರ ಸಕ್ರಿಯ ರಾಜಕಾರಣಕ್ಕೆ ಅಧಿಕೃತವಾಗಿ ವಿದಾಯ ಹೇಳಲಿದ್ದಾರೆ ಎಂದು ತಿಳಿದುಬಂದಿದೆ.
ರಾಜಕಾರಣದಲ್ಲಿ ಎಲ್ಲ ಪ್ರಮುಖ ಹುದ್ದೆಗಳನ್ನು ಅನುಭವಿಸಿ ದೇಶದ ಕೆಲವೇ ಕೆಲವು ಅತ್ಯಂತ ಹಿರಿಯ ಸಂಸದೀಯ ಪಟುಗಳಲ್ಲಿ ಒಬ್ಬರಾಗಿರುವ ಕೃಷ್ಣ ಅವರಿಗೆ ಸದ್ಯದ ರಾಜಕೀಯ ಪರಿಸ್ಥಿತಿಗಳು ತಾಳೆಯಾಗುತ್ತಿಲ್ಲ. ಹೀಗಾಗಿ ರಾಜಕಾರಣಕ್ಕೆ ವಿದಾಯ ಹೇಳುವ ಮೂಲಕ ವಿಶ್ರಾಂತ ಜೀವನ ನಡೆಸಲು ಮುಂದಾಗಿದ್ದಾರೆ.
ಕಾಂಗ್ರೆಸ್ ಬಿಟ್ಟ ಮೇಲೆ ಬಿಜೆಪಿ ಸೇರಿದ್ದ ಎಸ್.ಎಂ.ಕೃಷ್ಣ ಅವರಿಗೆ ಪಕ್ಷದಲ್ಲಿ ಪ್ರಮುಖ ಸ್ಥಾನಗಳನ್ನು ನೀಡಲಾಗುತ್ತದೆ ಎಂದು ಹೇಳಲಾಗಿತ್ತು. ಎಲ್ಲಿಯವರೆಗೆ ಅಂದರೆ ಉಪರಾಷ್ಟ್ರಪತಿ ಹುದ್ದೆಯಿಂದ ಹಿಡಿದು ಕೇಂದ್ರ ಸಚಿವ ಸ್ಥಾನದವರೆಗೆ ನೀಡಬಹುದೆಂಬ ಮಾತುಗಳು ರಾಜಕೀಯ ವಲಯದಲ್ಲಿ ಹಬ್ಬಿದ್ದವು.
ಕೃಷ್ಣ ಅವರಿಗಿರುವ ಅಪಾರ ರಾಜಕೀಯ ಅನುಭವವನ್ನು ಬಳಸಿಕೊಂಡು ಕರ್ನಾಟಕ ಸೇರಿದಂತೆ ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿಯನ್ನು ಬೇರೆ ಬೇರೆ ರಾಜ್ಯಗಳಲ್ಲಿ ಭದ್ರಪಡಿಸಲು ಕಮಲ ನಾಯಕರು ಲೆಕ್ಕಾಚಾರ ಹಾಕಿದ್ದರು.
ಆದರೆ 85ರ ಗಡಿ ದಾಟಿರುವ ಒಂದು ಕಾಲದಲ್ಲಿ ದೇಶದಲ್ಲೇ ನಂ.1 ಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದ ಕೃಷ್ಣ ಅವರಿಗೆ ಬಿಜೆಪಿಯ ತತ್ವ ಸಿದ್ದಾಂತಗಳು, ಸ್ಥಳೀಯ ನಾಯಕರ ನಡವಳಿಕೆಗಳು ಸುತಾರಾಂ ಇಷ್ಟವಾಗುತ್ತಿಲ್ಲ.ಯಾವ ನಿರೀಕ್ಷೆ ಇಟ್ಟುಕೊಂಡು ಆ ಪಕ್ಷಕ್ಕೆ ಬಂದಿದ್ದರೋ ತಮ್ಮೆಲ್ಲ ನಿರೀಕ್ಷೆಗಳು ಬುಡಮೇಲಾಗಿದೆ ಎಂಬುದು ಮನವರಿಕೆಯಾಗಿದೆ.
ವಿಧಾನಸಭೆ ಚುನಾವಣೆಯಲ್ಲಿ ಅವರ ಅನುಭವವನ್ನು ಪಕ್ಷ ಹೆಚ್ಚಾಗಿ ಬಳಸಿಕೊಳ್ಳಲಿಲ್ಲ. ಚುನಾವಣಾ ಪ್ರಚಾರದ ವೇಳೆ ಒಂದು ಬಾರಿ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ವೇದಿಕೆ ಹಂಚಿಕೊಂಡರೆ ಮತ್ತೊಂದು ಬಾರಿ ಬೆಂಗಳೂರಿನ ಸಮಾವೇಶವೊಂದರಲ್ಲಿ ಭಾಗವಹಿಸಿದ್ದರು.
ಉಳಿದಂತೆ ಕಾಟಾಚಾರಕ್ಕೆ ಎಂಬಂತೆ ಕೆಲವು ಭಾಗದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರೂ ಅಷ್ಟೊಂದು ಸಕ್ರಿಯವಾಗಿರಲಿಲ್ಲ. ಟಿಕೆಟ್ ಹಂಚಿಕೆ, ಪ್ರಣಾಳಿಕೆ ಸಿದ್ದಪಡಿಸುವುದು ಸೇರಿದಂತೆ ಪ್ರಮುಖ ತೀರ್ಮಾನಗಳಲ್ಲಿ ಕನಿಷ್ಟಪಕ್ಷ ರಾಜ್ಯ ಬಿಜೆಪಿ ನಾಯಕರು ಅವರ ಸಲಹೆಯನ್ನೂ ಕೂಡ ಪಡೆಯಲಿಲ್ಲ. ಕೃಷ್ಣ ಅವರ ವರ್ಚಸ್ಸು ಕುಂದಿದ್ದು, ಮತದಾರರ ಮೇಲೆ ಪರಿಣಾಮ ಬೀರುವುದಿಲ್ಲ ಎಂಬುದು ಬಿಜೆಪಿಗೆ ಅರ್ಥವಾಗಿತ್ತು.
ಅಲ್ಲದೆ ಬಿಜೆಪಿಯಲ್ಲಿ ಸದ್ಯಕ್ಕೆ ಯಡಿಯೂರಪ್ಪನವರನ್ನು ಹೊರತುಪಡಿಸಿದರೆ ಪರ್ಯಾಯ ನಾಯಕನಾಗಿ ಬೆಳೆಯಲು ಎಸ್ಎಂಕೆಗೆ ಅವಕಾಶವೂ ಇರಲಿಲ್ಲ. ಈ ಎಲ್ಲ ಬೆಳವಣಿಗೆಗಳಿಂದ ಬೇಸತ್ತು ಸಕ್ರಿಯ ರಾಜಕಾರಣದಿಂದಲೇ ದೂರ ಉಳಿದು ನೆಮ್ಮದಿಯ ಜೀವನ ನಡೆಸಲು ಮುಂದಾಗಿದ್ದಾರೆ.
ಈಡೇರದ ಆಸೆ:
ತಮ್ಮ ಜೀವಿತಾವಧಿಯೊಳಗೆ ಪುತ್ರಿ ಶಾಂಭವಿಯನ್ನು ಸಕ್ರಿಯ ರಾಜಕಾರಣಕ್ಕೆ ಕರೆ ತರಲು ಅವರು ಸಾಕಷ್ಟು ಪ್ರಯತ್ನ ಮಾಡಿದ್ದರು ಕಳೆದ ವಿಧಾನಸಭಾ ಚುನಾವಣೆಯಲ್ಲಿಬೆಂಗಳೂರಿನ ರಾಜರಾಜೇಶ್ವರಿ ಕ್ಷೇತ್ರದಿಂದ ಟಿಕೆಟ್ ಪಡೆದು ಕಣಕ್ಕಿಳಿಸಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಆದರೆ ಚುನಾವಣೆಯಲ್ಲಿ ಅವರು ತಮ್ಮ ಪುತ್ರಿಗೆ ಟಿಕೆಟ್ ನೀಡಬೇಕೆಂಬ ಬೇಡಿಕೆಯನ್ನು ಮುಂದಿಡಲಿಲ್ಲ.ಕನಿಷ್ಟ ಪಕ್ಷ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರಿನ ಉತ್ತರ ಲೋಕಸಭಾ ಕ್ಷೇತ್ರದಿಂದ ಶಾಂಭವಿಯನ್ನು ಕಣಕ್ಕಿಳಿಸಲು ಲೆಕ್ಕಾಚಾರ ಹಾಕಿದ್ದರು.
ಆದರೆ ಈ ಕ್ಷೇತ್ರದಿಂದ ಹಾಲಿ ಸಚಿವ ಡಿ.ವಿ.ಸದಾನಂದಗೌಡ ಅಭ್ಯರ್ಥಿಯಾಗಿರುವುದರಿಂದ ಸದ್ಯಕ್ಕೆ ಶಾಂಭವಿಗೆ ಎಲ್ಲಿಯೂ ಟಿಕೆಟ್ ಸಿಗುವುದಿಲ್ಲ ಎಂಬುದು ಕೃಷ್ಣ ಅವರಿಗೆ ಮನವರಿಕೆಯಾಗಿದೆ.
ಸುಮಾರು ಐದೂವರೆ ದಶಗಳ ಕಾಲ ರಾಷ್ಟ್ರ ಮತ್ತು ರಾಜ್ಯ ರಾಜಕಾರಣದಲ್ಲಿ, ಕೇಂದ್ರದ ವಿದೇಶಾಂಗ ಸಚಿವರಾಗಿ, ರಾಜ್ಯಪಾಲ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಎಸ್.ಎಂ.ಕೃಷ್ಣ ಸದ್ಯದಲ್ಲೇ ರಾಜಕಾರಣಕ್ಕೆ ಗುಡ್ಬೈ ಹೇಳುವುದು ಬಹುತೇಕ ಖಚಿತವಾಗಿದೆ.