ವ್ಯತಿರಿಕ್ತ ತೀರ್ಪು ಬರಬಹುದೆಂದು ಮೇಲ್ಮನವಿ ಸಲ್ಲಿಸದಿರಲು ಗೋವಾ ತೀರ್ಮಾನ

 

ಬೆಂಗಳೂರು,ಆ.24- ನ್ಯಾಯಾಲಯದಲ್ಲಿ ವ್ಯತಿರಿಕ್ತ ತೀರ್ಪು ಬರಬಹುದೆಂಬ ಹಿನ್ನೆಲೆಯಲ್ಲಿ ಮಹದಾಯಿ ನದಿನೀರು ಹಂಚಿಕೆ ಸಂಬಂಧ ನ್ಯಾಯಾಧೀಕರಣ ನೀಡಿರುವ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸದಿರಲು ಗೋವಾ ತೀರ್ಮಾನಿಸಿದೆ.
ಒಂದೆಡೆ ಕರ್ನಾಟಕ ಸರ್ಕಾರ ಮಹದಾಯಿ ನ್ಯಾಯಾಧೀಕರಣ ನೀಡಿರುವ ತೀರ್ಪು ತೃಪ್ತಿಕರವಾಗಿಲ್ಲ ಎಂದು ನ್ಯಾಯಾಧೀಕರಣ ಇಲ್ಲವೆ ಸುಪ್ರೀಂಕೋಟ್ ್ಗೆ ಮೇಲ್ಮನವಿ ಸಲ್ಲಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಈ ಬೆಳವಣಿಗೆಗಳ ನಡುವೆಯೇ ಗೋವಾ ಸರ್ಕಾರ, ನ್ಯಾಯಾಧೀಕರಣ ನೀಡಿರುವ ತೀರ್ಪು ತೃಪ್ತಿಕರವಾಗಿದ್ದು, ಇದನ್ನು ಪ್ರಶ್ನಿಸಿ ನಾವು ಸುಪ್ರೀಂಕೋರ್ಟ್‍ಗೆ ಮೇಲ್ಮನವಿ ಸಲ್ಲಿಸುವುದಿಲ್ಲ. ನಾಳೆ ನಮಗೆ ವ್ಯತಿರಿಕ್ತ ತೀರ್ಪು ಬಂದರೆ ಇದಕ್ಕೆ ಯಾರೂ ಹೊಣೆ ಎಂದು ಗೋವಾದ ನೀರಾವರಿ ಸಚಿವ ವಿನೋದ್ ಪಾಲೇಕರ್ ಪ್ರಶ್ನಿಸಿದ್ದಾರೆ.

ಈಗಾಗಲೇ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ್ದಾರೆ. ನ್ಯಾಯಾಧೀಕರಣದ ತೀರ್ಪಿನಂತೆಯೇ ನಾವು ಕರ್ನಾಟಕ ರಾಜ್ಯಕ್ಕೆ ಎಷ್ಟುಪ್ರಮಾಣದಲ್ಲಿ ನೀರು ಬಿಡಬೇಕೋ ಅಷ್ಟು ಪ್ರಮಾಣದಲ್ಲಿ ಮಹದಾಯಿ ನದಿಯಿಂದ ನೀರು ಹರಿಸಲು ಸಿದ್ದರಿದ್ದೇವೆ ಎಂದು ಹೇಳಿದ್ದಾರೆ.
ಒಂದು ವೇಳೆ ನಾಳೆ ನ್ಯಾಯಾಧೀಕರಣದಲ್ಲಿ ಇಲ್ಲವೇ ಇನ್ನು ಹೆಚ್ಚುವರಿ ನೀರು ಬಿಡಬೇಕೆಂದು ಆದೇಶ ನೀಡಿದರೆ ಗೋವಾ ಜನತೆಯ ಹಿತವನ್ನು ಕಾಪಾಡುವವರು ಯಾರು? ವಿರೋಧ ಪಕ್ಷವಾದ ಕಾಂಗ್ರೆಸ್ ಮೊದಲು ರಾಜ್ಯದ ಹಿತವನ್ನು ಕಾಪಾಡಲು ಮುಂದಾಗಬೇಕು. ಇದರಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ನಾನು ಹಿಂದೆ ಕರ್ನಾಟಕಕ್ಕೆ ಮಹದಾಯಿ ನದಿಯಿಂದ ಕಳಸ ಮತ್ತು ಬಂಡೂರಿ ನಾಲಾ ಮೂಲಕ ಒಂದೇ ಒಂದು ಹನಿ ನೀರು ಕೊಡುವುದಿಲ್ಲ ಎಂಬ ಹೇಳಿಕೆಗೆ ಈಗಲೂ ಬದ್ಧವಾಗಿದ್ದೇನೆ. ನ್ಯಾಯಾಧೀಕರಣದ ತೀರ್ಪನ್ನು ತಿರಸ್ಕರಿಸಲು ನಮಗೆ ಸಾಧ್ಯವಿಲ್ಲ. ಮೇಲ್ಮನವಿ ಸಲ್ಲಿಸಿದರೆ ನಮಗೆ ಹಿನ್ನಡೆಯಾಗಬಹುದಾದ ತೀರ್ಪು ಬರಬಹುದೆಂಬ ಭೀತಿ ಕಾಡುತ್ತಿದೆ.

ಮತ್ತೊಂದೆಡೆ ಸಂಘ ಸಂಸ್ಥೆಗಳು, ವಿರೋಧ ಪಕ್ಷಗಳು ಮೇಲ್ಮನವಿ ಸಲ್ಲಿಸುವಂತೆ ಒತ್ತಡ ಹಾಕುತ್ತಿದ್ದಾರೆ. ಆದರೆ ನಾವು ಯಾವುದೇ ಕಾರಣಕ್ಕೂ ಮೇಲ್ಮನವಿಯನ್ನು ಹಾಕುವುದಿಲ್ಲ ಎಂದು ಪಾಲೇಕರ್ ಸ್ಪಷ್ಟಪಡಿಸಿದ್ದಾರೆ.

ಮಹದಾಯಿ ನದಿಯಿಂದ ಹೆಚ್ಚುವರಿ ನೀರನ್ನು ಕರ್ನಾಟಕಕ್ಕೆ ಬಿಡುವ ಮೂಲಕ ಗೋವಾ ನೆರೆಯ ರಾಜ್ಯದೊಂದಿಗೆ ಸೌಹಾರ್ದಯುತವಾಗಿ ನಡೆದುಕೊಳ್ಳಲಿದೆ. ಆದರೆ ಎಂಥದ್ದೇ ಸಂದರ್ಭದಲ್ಲಿ ನಾವು ನಮ್ಮ ಜನತೆಯ ಹಿತವನ್ನು ನಿರ್ಲಕ್ಷ್ಯ ಮಾಡುವುದಿಲ್ಲ. ಯಾವುದೇ ತ್ಯಾಗ ಮಾಡಿಯಾದರೂ ಜನತೆಯ ಹಿತ ಕಾಪಾಡುತ್ತೇವೆ ಎಂದು ಆಶ್ವಾಸನೆ ಕೊಟ್ಟಿದ್ದಾರೆ.

ಕಳೆದ ಆ.14ರಂದು ಮಹದಾಯಿ ನದಿ ನೀರು ಹಂಚಿಕೆ ಸಂಬಂಧ ನ್ಯಾಯಾಧೀಕರಣವು ತನ್ನ ಅಂತಿಮ ತೀರ್ಪಿನಲ್ಲಿ ಕರ್ನಾಟಕಕ್ಕೆ 13.42 ಟಿಎಂಸಿ ನೀರನ್ನು ಬಳಸಿಕೊಳ್ಳಲು ಅನುಮತಿ ನೀಡಿತ್ತು. ಇದರಲ್ಲಿ ಕುಡಿಯುವ ನೀರಿಗೆ 3.9 ಟಿಎಂಸಿ ನೀರನ್ನು ಮಲಪ್ರಭಾ ನದಿಯಿಂದ ಹರಿಸಿಕೊಳ್ಳಲು ಅವಕಾಶ ನೀಡಿತ್ತು. ಕರ್ನಾಟಕ ಸರ್ಕಾರ ಈಗಾಗಲೇ ಈ ತೀರ್ಪಿಗೆ ವಿರೋಧ ವ್ಯಕ್ತಪಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ