ಬೆಂಗಳೂರು,ಆ.24-ಗೌರಿ ಲಂಕೇಶ್ ಬಳಗ ಹಾಗೂ ಗೌರಿ ಸ್ಮಾರಕ ಟ್ರಸ್ಟ್ ವತಿಯಿಂದ ಸೆ.5ರಂದು ರಾಜಭವನ ಚಲೋ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶವನ್ನು ನಡೆಸಲಾಗುವುದು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸೆ.5ರಂದು ಗೌರಿ ಲಂಕೇಶ್ ಅವರ ಹತ್ಯೆಯಾಗಿ ಒಂದು ವರ್ಷವಾಗಲಿದೆ. ಆ.30ಕ್ಕೆ ಕಲ್ಬುರ್ಗಿ ಅವರನ್ನು ಕಳೆದುಕೊಂಡು 3 ವರ್ಷವಾಗಲಿದೆ. ಅಲ್ಲದೆ ಇವರಿಬ್ಬರ ಕೊಲೆಗಳಿಗೂ ಮುಂಚೆ ಪನ್ಸಾರೆ ಹಾಗೂ ದಾಬೋಲ್ಕರ್ ಅವರನ್ನು ಹತ್ಯೆ ಮಾಡಲಾಗಿತ್ತು. ಆ ಕಾರಣದಿಂದ ಅಭಿವ್ಯಕ್ತಿ ಸ್ವಾತಂತ್ರ್ಯ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಆ.30ರಂದು ಧಾರವಾಡದಲ್ಲಿ ಕಲ್ಬುರ್ಗಿ ದಿನದ ಹೆಸರಿನಲ್ಲಿ ಸಂಗೀತ ಕಾರ್ಯಕ್ರಮದ ಮೂಲಕ ಚಾಲನೆ ನೀಡಲಾಗುವುದು. ಸೆ.5ರಂದು ಬೆಂಗಳೂರಿನಲ್ಲಿ ಗೌರಿ ದಿನದ ಭಾಗವಾಗಿ ಬೆಳಗ್ಗೆ 8 ಗಂಟೆಗೆ ಗೌರಿ ಲಂಕೇಶ್ ಸಮಾಧಿ ಬಳಿ ಶ್ರದ್ದಾಂಜಲಿ ಅರ್ಪಿಸಲಾಗುವುದು.
ಬೆಳಗ್ಗೆ 10.30ಕ್ಕೆ ಗಾಂಧಿನಗರದ ಮೌರ್ಯ ಹೋಟೆಲ್ ಬಳಿ ಇರುವ ಗಾಂಧಿ ಪ್ರತಿಮೆಯಿಂದ ರಾಜಭವನ ಚಲೋದ ಭಾಗವಾಗಿ ಪ್ರತಿರೋಧದ ನಡಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಬಿ.ಟಿ.ಲಲಿತಾ ನಾಯಕ್, ಎನ್.ವೆಂಕಟೇಶ್, ದಿನೇಶ್ ಅಮಿನ್ ಮಟ್ಟು, ಜೆ.ಎಂ.ವೀರಸಂಗಯ್ಯ ಮುಂತಾದವರಿದ್ದರು.