ಬೆಂಗಳೂರು, ಆ.24- ಪ್ರತಿ ವಿಶ್ವವಿದ್ಯಾಲಯದಿಂದಲೂ ಕಡ್ಡಾಯವಾಗಿ ರಾಷ್ಟ್ರೀಯ ಸೇವಾ ಯೋಜನೆ ಕೋಶದಿಂದ ಭಾವೈಕ್ಯತಾ ಶಿಬಿರಗಳನ್ನು ನಡೆಸಬೇಕೆಂದು ಉಪಮುಖ್ಯಮಂತ್ರಿ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಸೂಚನೆ ನೀಡಿದ್ದಾರೆ.
ವಿಕಾಸಸೌಧದಲ್ಲಿ ಇಂದು ನಡೆದ ರಾಷ್ಟ್ರೀಯ ಸೇವಾ ಯೋಜನೆಯ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರೂ ಆಗಿರುವ ಪರಮೇಶ್ವರ್ ಅವರು, ಭಾವೈಕ್ಯತೆ ಮೂಡಿಸುವಂತಹ ಕಾರ್ಯಕ್ರಮಗಳಿಗೆ ಮುಕ್ತ ಅವಕಾಶಗಳನ್ನು ನೀಡಬೇಕೆಂದು ಸಲಹೆಗಳನ್ನು ನೀಡಿದರು.
ಕರ್ನಾಟಕದಲ್ಲಿ 10 ವಿಶ್ವವಿದ್ಯಾಲಯಗಳು ಭಾವೈಕ್ಯತಾ ಶಿಬಿರಗಳನ್ನು ನಡೆಸಲು ಪ್ರಸ್ತಾವನೆ ಸಲ್ಲಿಸಿವೆ. ಅದರಲ್ಲಿ 6 ವಿವಿಗಳಿಗೆ ಶಿಬಿರ ನಡೆಸಲು ಅನುಮತಿ ನೀಡಬಹುದಾಗಿದೆ. ಧರ್ಮಸ್ಥಳದ ಮಂಜುನಾಥೇಶ್ವರ ಕಾಲೇಜು, ಬೆಳಗಾವಿಯ ಕೆಎಲ್‍ಇ ವಿವಿ, ರಾಣಿ ಚೆನ್ನಮ್ಮ ವಿವಿ, ತುಮಕೂರಿನ ಸಿದ್ಧಾರ್ಥ ವಿವಿಗಳು ಈವರೆಗೂ ಭಾವೈಕ್ಯತಾ ಶಿಬಿರಗಳನ್ನು ನಡೆಸದೇ ಇರುವುದರಿಂದ ಇವುಗಳಿಗೂ ಶಿಬಿರ ನಡೆಸಲು ಅನುಮತಿ ನೀಡಬಹುದಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪರಮೇಶ್ವರ್ ಅವರು, ಪ್ರತಿ ಶಿಬಿರಕ್ಕೆ ಸರ್ಕಾರ 5 ಲಕ್ಷ ಅನುದಾನ ನೀಡುತ್ತಿದೆ. ಭಾವೈಕ್ಯತೆಯಂತಹ ಕಾರ್ಯಕ್ರಮಗಳನ್ನು ನಡೆಸಲು ನಿರ್ಬಂಧ ವಿಧಿಸುವುದು ಸರಿಯಲ್ಲ. ರಾಜ್ಯದಲ್ಲಿರುವ ಎಲ್ಲ ವಿವಿಗಳು ಈ ಕಾರ್ಯಕ್ರಮವನ್ನು ಕಡ್ಡಾಯವಾಗಿ ಮಾಡಲು ಆದೇಶ ಮಾಡಲಾಗುವುದು. ಸರ್ಕಾರ ನೀಡುವ ಹಣಕ್ಕಿಂತಲೂ ಹೆಚ್ಚಿನ ಖರ್ಚು ವಿವಿಗಳಿಗಾಗುತ್ತದೆ. ಎಲ್ಲ ವಿವಿಗಳು ಎನ್ನದೇ ಆದ ಸಂಪನ್ಮೂಲ ಹೊಂದಿದೆ. ಹೀಗಾಗಿ ಸರ್ಕಾರ ಅನುಮತಿ ಕೊಡಲು ನಿರ್ಬಂಧ ವಿಧಿಸುವುದು ಬೇಡ. ಪ್ರತಿ ವಿವಿಯೂ ಭಾವೈಕ್ಯತಾ ಶಿಬಿರ ನಡೆಸುವುದನ್ನು ಕಡ್ಡಾಯಗೊಳಿಸಿ ಸುತ್ತೋಲೆ ಹೊರಡಿಸುವಂತೆ ಸೂಚನೆ ನೀಡಿದರು.
ಈ ವರ್ಷದ ಯುವಜನೋತ್ಸವಕ್ಕೆ ಶಿವಮೊಗ್ಗದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು, ರಾಜೀವ್‍ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಪ್ರಸ್ತಾವನೆ ಸಲ್ಲಿಸಿವೆ ಎಂದು ಅಧಿಕಾರಿಗಳು ಸಭೆಯ ಗಮನಕ್ಕೆ ತಂದರು.
ಧಾರವಾಡದ ಕೃಷಿ ವಿವಿ ಕುಲಪತಿಗಳು ತಮ್ಮಿಂದಲೂ ಪ್ರಸ್ತಾವನೆ ಸಲ್ಲಿಸಿದ್ದು, ಅದನ್ನು ಪಟ್ಟಿಯಲ್ಲಿ ಸೇರಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಜತೆಗೆ ಹೈದರಾಬಾದ್ ಕರ್ನಾಟಕ ಭಾಗಕ್ಕೂ ಯುವಜನೋತ್ಸವ ನಡೆಸಲು ಅನುಮತಿ ನೀಡಬೇಕೆಂಬ ಒತ್ತಾಯ ಕೇಳಿ ಬಂತು. ಇದಕ್ಕೂ ಮುಕ್ತವಾಗಿ ಅನುಮತಿ ನೀಡುವಂತೆ ಸಚಿವರು ಸೂಚನೆ ನೀಡಿದರು.
ನಿಮ್ಹಾನ್ಸ್‍ನ ಸಹಯೋಗದಲ್ಲಿ ಜೀವನಕೌಶಲ್ಯ ಮತ್ತು ಆಪ್ತ ಸಲಹೆ ತರಬೇತಿಯನ್ನು ಆಯೋಜಿಸಲಾಗುತ್ತಿದೆ. ಇದಕ್ಕಾಗಿ 1600 ಅಧಿಕಾರಿಗಳಿಗೆ ಮತ್ತು 1.50ಲಕ್ಷ ಸ್ವಯಂ ಸೇವಕರಿಗೆ ತರಬೇತಿ ನೀಡಲಾಗಿದೆ. 2015-16ರಿಂದಲೂ ಈ ಯೋಜನೆ ಮುಂದುವರೆಸಿದ್ದು, 2018-19ನೇ ಸಾಲಿನ ಬಜೆಟ್‍ನಲ್ಲಿ 75 ಲಕ್ಷ ರೂ.ವನ್ನು ಒದಗಿಸಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.