ಮುಲ್ಲಪೆರಿಯಾರ್ ಅಣೆಕಟ್ಟೆಗೆ ಸುಪ್ರಿಂ ನಿಯಮ

ನವದೆಹಲಿ: ಆ-24: ಮುಲ್ಲಪೆರಿಯಾರ್ ಅಣೆಕಟ್ಟೆಯಿಂದ ತಮಿಳುನಾಡು ಬೇಕಾಬಿಟ್ಟಿ ನೀರು ಹರಿಸಿರುವುದೇ ಪ್ರವಾಹ ಕೈಮೀರಲು ಕಾರಣ ಎಂಬ ಕೇರಳ ಸರ್ಕಾರದ ವಾದವನ್ನು ಸುಪ್ರಿಂಕೋರ್ಟ್ ಪುರಸ್ಕರಿಸಿದ್ದು, ಆ.31ರವರೆಗೆ ಮುಲ್ಲಪೆರಿಯಾರ್ ಅಣೆಕಟ್ಟೆಯ ನೀರು ಸಂಗ್ರಹ 139 ಆಸುಪಾಸಿನಲ್ಲಿ ಇರಬೇಕು ಎಂದು ಸೂಚನೆ ನೀಡಿದೆ.

ಕೇಂದ್ರ ಸರ್ಕಾರ ಸಲ್ಲಿಸಿದ್ದ ಮುಲ್ಲಪೆರಿಯಾರ್ ಡ್ಯಾಂ ಉಪಸಮಿತಿ ಸಭೆಯಲ್ಲಿನ ಮಾಹಿತಿಯನ್ನು ಪರಿಗಣಿಸಿದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ದೀಪಕ್ ಮಿಶ್ರಾ, ನ್ಯಾಯಮೂರ್ತಿಗಳಾದ ಎ. ಖನ್ವೀಲ್ ಕರ್ ಮತ್ತು ಡಿ. ವೈ. ಚಂದ್ರಚೂಡ್ ಅವರಿದ್ದ ತ್ರಿಸದಸ್ಯ ಪೀಠ, ಜಲಾಶಯದಲ್ಲಿನ ನೀರಿನ ಮಟ್ಟ 139 ಅಡಿಯವರೆಗೂ ಇರುವಂತೆ ನೋಡಿಕೊಳ್ಳಬೇಕು ಎಂದು ಆದೇಶಿಸಿದೆ.

ಅಣೆಕಟ್ಟೆಯ ಸಾಮರ್ಥ್ಯ 142 ಅಡಿಇದ್ದು, ಅದರ ಬದಲಿಗೆ 139.9 ಅಡಿಗೆ ನೀರಿನ ಸಂಗ್ರಹವನ್ನು ಮಿತಿಗೊಳಿಸಲು ತಮಿಳುನಾಡು ಒಪ್ಪಿಕೊಂಡಿದೆ ಎಂದು ಸುಪ್ರಿಂಕೋರ್ಟ್ ನಿಯೋಜಿಸಿದ್ದ ತಜ್ಞರ ಸಮಿತಿಯು ಹೇಳಿದೆ.

ಈ ಸಂಬಂಧ ಮುಂದಿನ ವಿಚಾರಣೆಯನ್ನು ನ್ಯಾಯಾಲಯ ಸೆಪ್ಟೆಂಬರ್ 6ಕ್ಕೆ ನಿಗದಿಪಡಿಸಿದ್ದು, ಇದೇ ವೇಳೆಯಲ್ಲಿ ಕೇರಳ, ಪಾಂಡಿಚೇರಿ, ತಮಿಳುನಾಡು, ಮತ್ತು ಕರ್ನಾಟಕ ತಮ್ಮ ಪ್ರತಿಕ್ರಿಯೆ ನೀಡುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.

ನಿನ್ನೆಯಷ್ಟೇ ವಾದ ಮಂಡಿಸಿದ್ದ ಕೇರಳ, ಮುಲ್ಲಪೆರಿಯಾರ್‌ನಿಂದ ಒಮ್ಮೆಲೆ ನೀರು ಹರಿಸಿದ್ದರಿಂದ ಇಡುಕ್ಕಿ ಅಣೆಕಟ್ಟೆಯ ಮೇಲೆ ಒತ್ತಡ ಹೆಚ್ಚಾಯಿತು. ಅದರಿಂದಲೂ ನೀರು ಬಿಡಬೇಕಾಗಿ ಬಂದ ಕಾರಣ ಪ್ರವಾಹ ಪರಿಸ್ಥಿತಿ ವಿಷಮಿಸಿತು. ಮುಲ್ಲಪೆರಿಯಾರ್ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ 136 ಅಡಿ ತಲುಪಿದಾಗಲೇ ನೀರನ್ನು ಹೊರಬಿಡಲು ಸೂಚಿಸಿದ್ದೆವು. ನೀರಿನ ಸಂಗ್ರಹ 139 ಅಡಿ ದಾಟಿದಾಗ ಮತ್ತೊಮ್ಮೆ ಸೂಚನೆ ನೀಡಿದೆವು. ಆದರೆ ಅವರು ಕೇಳಲಿಲ್ಲ ಎಂದು ವಾದ ಮಂಡಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ