ನವದೆಹಲಿ:ಆ-24: ಪಶ್ಚಿಮ ಬಂಗಾಳದ ಸ್ಥಳೀಯಾಡಳಿತ ಸಂಸ್ಥೆಗಳ ಪೈಕಿ ಸ್ಪರ್ಧೆಯೇ ಇಲ್ಲದೆ ಆಯ್ಕೆಯಾದ 20,000ಕ್ಕೂ ಹೆಚ್ಚು ಚುನಾವಣೆ ಫಲಿತಾಂಶಗಳನ್ನು ರದ್ದುಪಡಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ಈ ಫಲಿತಾಂಶಗಳಿಂದ ನೊಂದವರು ಇದನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿದೆ.
ಮೇ ತಿಂಗಳಲ್ಲಿ ನಡೆದ ಪಂಚಾಯತ್ ಚುನಾವಣೆಗಳಲ್ಲಿ 20 ಸಾವಿರಕ್ಕೂ ಹೆಚ್ಚು ಸ್ಥಾನಗಳಿಗೆ ಸ್ಪರ್ಧೆಯೇ ನಡೆದಿರಲಿಲ್ಲ. ಇಲ್ಲಿ ತೃಣಮೂಲ ಕಾಂಗ್ರೆಸ್ ಸದಸ್ಯರು ಅವಿರೋಧ ಆಯ್ಕೆಯಾಗಿದ್ದರು. ಈ ಫಲಿತಾಂಶದ ಅಧಿಸೂಚನೆ ಹೊರಡಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.
ಪಶ್ಚಿಮ ಬಂಗಾಳ ಚುನಾವಣೆ ಆಯೋಗ ಮತ್ತು ರಾಜಕೀಯ ಪಕ್ಷಗಳಾದ ಬಿಜೆಪಿ ಮತ್ತು ಸಿಪಿಐ(ಎಂ) ಸಲ್ಲಿಸಿದ್ದ ಅರ್ಜಿಗಳ ಕುರಿತ ತೀರ್ಪನ್ನು ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ, ಜಸ್ಟಿಸ್ ಎ.ಎಂ ಖಾನ್ವಿಲ್ಕರ್ ಮತ್ತು ಡಿ.ವೈ ಚಂದ್ರಚೂಡ್ ಅವರ ಪೀಠ ಕಾಯ್ದಿರಿಸಿದೆ.
ಇದೇ ವೇಳೆ, ವಾಟ್ಸ್‌ಆ್ಯಪ್ ಮತ್ತು ಇ-ಮೇಲ್‌ನಂತಹ ವಿದ್ಯುನ್ಮಾನ ವಿಧಾನಗಳ ಮೂಲಕ ನಾಮಪತ್ರ ಸಲ್ಲಿಸಲು ಅನುಮತಿ ನೀಡಿದ್ದ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.
ತಮ್ಮ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವುದಕ್ಕೆ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಅಡ್ಡಿಪಡಿಸಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಈ ವಿಚಾರವನ್ನು ಪರಿಗಣಿಸುವುದಾಗಿ ಆಗಸ್ಟ್ 20ರಂದು ಸುಪ್ರೀಂ ಕೋರ್ಟ್ ಹೇಳಿತ್ತು. ಪಶ್ಚಿಮ ಬಂಗಾಳದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ 20,000ಕ್ಕೂ ಹೆಚ್ಚು ಸ್ಥಾನಗಳಿಗೆ ಅವಿರೋಧ ಆಯ್ಕೆ ಎಂಬುದು ಕಡೆಗಣಿಸುವಂತಹ ವಿಚಾರವಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಗ್ರಾಮ ಪಂಚಾಯತ್, ಜಿಲ್ಲಾ ಪಂಚಾಯತ್ ಮತ್ತು ಪಂಚಾಯತ್ ಸಮಿತಿಗಳು ಸೇರಿದಂತೆ ರಾಜ್ಯದ ಒಟ್ಟು 58,692 ಸ್ಥಾನಗಳ ಪೈಕಿ 20,159 ಸ್ಥಾನಗಳಲ್ಲಿ ಸ್ಪರ್ಧೆಯೇ ನಡೆದಿರಲಿಲ್ಲ. ಅಲ್ಲದೆ ಚುನಾವಣೆ ವೇಳೆ ವ್ಯಾಪಕ ಹಿಂಸಾಚಾರ ನಡೆದಿತ್ತು.
ಇಷ್ಟು ದೊಡ್ಡ ಸಂಖ್ಯೆಯ ಸ್ಥಾನಗಳಿಗೆ ಅವಿರೋಧ ಆಯ್ಕೆ ಎಂಬುದು ನಿಜಕ್ಕೂ ಆತಂಕದ ವಿಷಯ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹಾಗಿದ್ದರೂ, 50 ಸಾವಿರಕ್ಕೂ ಅಧಿಕ ಸ್ಥಾನಗಳ ಪೈಕಿ ಶೇ 33ರಷ್ಟು ಸ್ಥಾನಗಳಿಗೆ ಮಾತ್ರ ಅವಿರೋಧ ಆಯ್ಕೆ ನಡೆದಿದೆ. ಇದೇನೂ ಅಪಾಯದ ಸೂಚನೆಯಲ್ಲ ಎಂದು ರಾಜ್ಯ ಚುನಾವಣೆ ಆಯೋಗ ವಾದಿಸಿದೆ.