ವರಲಕ್ಷ್ಮೀ ಹಬ್ಬಕ್ಕೆ ಸಜ್ಜಾದ ಗೃಹಿಣಿಯರು

 

ಬೆಂಗಳೂರು, ಆ.22- ವರಲಕ್ಷ್ಮಿಯನ್ನು ಮನೆದುಂಬಿಸಿಕೊಳ್ಳಲು ಗೃಹಿಣಿಯರು ಸಜ್ಜಾಗಿದ್ದಾರೆ. ಸಕಲ ಸಿದ್ಧತೆಗಳನ್ನೂ ಸಹ ಮಾಡಿಕೊಂಡಿದ್ದಾರೆ.
ಹೂವು, ಹಣ್ಣುಗಳ ಬೆಲೆ ಗ್ರಾಹಕರನ್ನು ಕಂಗಾಲಾಗಿಸಿದೆ. ಇನ್ನೇನು ಹಬ್ಬಕ್ಕೆ ಒಂದು ದಿನ ಬಾಕಿ ಉಳಿದಿದ್ದು, ಖರೀದಿ ಭರಾಟೆ ಜೋರಾಗಿಯೇ ನಡೆದಿದೆ.
ಲಕ್ಷ್ಮೀಪೂಜೆಗೆ ಅಗತ್ಯವಾದ ಹೂವು, ಹಣ್ಣಗಳ ಮಾರಾಟ ನಗರದ ವಿಜಯನಗರ, ಗಾಂ ಬಜಾರ್, ಮಲ್ಲೇಶ್ವರಂ, ಕೆಆರ್ ಮಾರುಕಟ್ಟೆ, ಕೆಆರ್ ಪುರಂ ಸೇರಿದಂತೆ ಮತ್ತಿತರ ಪ್ರಮುಖ ಮಾರುಕಟ್ಟೆಗಳಲ್ಲಿ ವ್ಯಾಪಾರ ಜೋರಾಗಿಯೇ ನಡೆದಿದೆ. ಆದರೆ, ಬೆಲೆ ಗಗನಕ್ಕೇರಿದೆ.
ಲಕ್ಷ್ಮೀಪೂಜೆಗೆ ವಿಶೇಷವಾಗಿ ತಾವರೆ ಹೂ ಇಡುತ್ತಾರೆ. ಜತೆಗೆ ಹಣ್ಣುಗಳನ್ನು ಇಡುತ್ತಾರೆ. ಆದರೆ, ಈ ಹಣ್ಣು, ಹೂವುಗಳ ಬೆಲೆ ಮಾತ್ರ ಹೆಚ್ಚಳವಾಗಿದೆ.
ಸೇಬು ಕೆಜಿಗೆ 150 ರಿಂದ 200ರೂ., ಏಲಕ್ಕಿ ಬಾಳೆಹಣ್ಣು 70 ರಿಂದ 80ರೂ., ದಾಳಿಂಬೆ 90 ರಿಂದ 100ರೂ., ಸೀತಾಫಲ 80 ರಿಂದ 100ರೂ.ಗೆ ತಲುಪಿದೆ.
ಇನ್ನು ಕನಕಾಂಬರ ಹೂ. ಕೆಜಿಗೆ 1000ರೂ. ಗಡಿ ದಾಟಿದೆ. ಮಲ್ಲಿಗೆ 500 ರಿಂದ 1000ರೂ., ಕಮಲ ಜೋಡಿಗೆ 100ರೂ., ತಾವರೆ ಜೋಡಿಗೆ 75 ರಿಂದ 100ರೂ. ಆಗಿದೆ.
ಕಳೆದ ಕೆಲ ದಿನಗಳಿಂದ ಮೋಡ ಕವಿದ ವಾತಾವರಣವಿದ್ದು, ಹೂವಿನ ಬೆಳೆ ಇಳುವರಿಯಲ್ಲಿ ಭಾರೀ ಹಿನ್ನಡೆಯಾಗಿದೆ. ಹಾಗಾಗಿ ಬೆಲೆ ಏರಿಕೆಯಾಗಿದೆ ಎಂದು ಕೆಲ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಎಷ್ಟೇ ಬೆಲೆ ಹೆಚ್ಚಾದರೂ ಹಬ್ಬ ಮಾಡಲೇಬೇಕಲ್ಲ… ನಮ್ಮ ಸಂಪ್ರದಾಯವನ್ನು ಉಳಿಸಿಕೊಂಡು ಹೋಗಬೇಕಲ್ಲ ಅಂತ ಗೃಹಿಣಿಯರು ಅಗತ್ಯ ವಸ್ತುಗಳ ಖರೀದಿಯಲ್ಲಿ ನಿರತರಾಗಿದ್ದಾರೆ.
ಇನ್ನು ಮಾರುಕಟ್ಟೆಗೆ ಆಕರ್ಷಣೀಯವಾಗಿರುವ ಲಕ್ಷ್ಮೀಯ ಮುಖವಾಡಗಳು ಸಹ ಬಂದಿದ್ದು, ಖರೀದಿಯೂ ಸಹ ನಡೆಯುತ್ತಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ