ಬೆಂಗಳೂರು,ಆ.22-ಬ್ರಹ್ಮಶ್ರೀ ನಾರಾಯಣಗುರು ಜಯಂತಿಗೆ ಆಹ್ವಾನ ನೀಡಲಾಗಿದ್ದು, ಶ್ರೀ ರೇಣುಕಾನಂದ ಸ್ವಾಮೀಜಿಯವರ ಹೆಸರನ್ನೇ ಆಮಂತ್ರಣ ಪತ್ರಿಕೆಯಿಂದ ಕೈ ಬಿಟ್ಟಿರುವುದು ಸರಿಯಲ್ಲ ಎಂದು ಸ್ವಾಮೀಜಿಗಳ ಭಕ್ತರು, ಅನುಯಾಯಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆ.27ರಂದು ನಡೆಯಲಿರುವ ನಾರಾಯಣಗುರು ಜಯಂತಿ ಕಾರ್ಯಕ್ರಮಕ್ಕೆ ಶ್ರೀ ರೇಣುಕಾನಂದ ಸ್ವಾಮೀಜಿ ಅವರಿಗೆ ಪತ್ರ ಬರೆದು ಆಹ್ವಾನ ನೀಡಲಾಗಿತ್ತು. ಅವರೇ ಶ್ರೀ ಅವರಿಂದ ಒಪ್ಪಿಗೆ ಪಡೆದೂ ಈಗ ಇದ್ದಕ್ಕಿದ್ದಂತೆ ಶ್ರೀಯವರ ಹೆಸರನ್ನು ಆಮಂತ್ರಣ ಪತ್ರಿಕೆಯಿಂದ ಕೈಬಿಟ್ಟಿದ್ದಾರೆ ಎಂದು ಭಕ್ತವೃಂದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿವೆ.
ಶ್ರೀ ರೇಣುಕಾನಂದಸ್ವಾಮೀಜಿ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ, ತತ್ವ ಸಿದ್ದಾಂತಗಳಾದ ಒಂದೇ ಜಾತಿ, ಒಂದೇ ಧರ್ಮ,ಒಂದೇ ದೇವರು ಸಂಘಟನೆಯಿಂದ ಬಲಿಷ್ಠರಾಗಿ ಶಿಕ್ಷಣಕ್ಕೆ ಮಹತ್ವ ನೀಡಿ ಎಂಬ ನುಡಿಮುತ್ತುಗಳನ್ನು ತಲೆಯ ಮೇಲೆ ಹೊತ್ತು ಕರ್ನಾಟಕದಾದ್ಯಂತ ಜಿಲ್ಲೆ, ತಾಲ್ಲೂಕು ಗ್ರಾಮಗಳಲ್ಲಿ ಜಾತಿ, ಧರ್ಮದ ಬೇಧವಿಲ್ಲದೆ ಸಾರುತ್ತಾ ಬಂದಿದ್ದಾರೆ.
ಇಂತಹ ಶ್ರೀ ರೇಣುಕಾನಂದ ಸ್ವಾಮೀಜಿ ಅವರನ್ನು ನಾರಾಯಣಗುರು ಜಯಂತಿಗೆ ಕರೆದು, ಈಗ ಶ್ರೀ ಅವರನ್ನು ಆಹ್ವಾನ ಪತ್ರಿಕೆಯಿಂದ ತಿರಸ್ಕರಿಸುವುದು ನಿಜಕ್ಕೂ ವಿಷಾದನೀಯ. ಆದ್ದರಿಂದ ಆದ ತಪ್ಪು ಸರಿಪಡಿಸಿಕೊಂಡು ಶ್ರೀ ರೇಣುಕಾನಂದ ಸ್ವಾಮೀಜಿ ಅವರಿಗೆ ಆಹ್ವಾನ ನೀಡಿ ನಾರಾಯಣಗುರು ಜಯಂತಿ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿಕೊಳ್ಳಲು ಆಹ್ವಾನ ನೀಡಲು ಸಂಬಂಧಪಟ್ಟವರಿಗೆ ತಿಳಿಸಬೇಕಾಗಿ ವಿನಂತಿಸುತ್ತೇವೆ ಇಲ್ಲದಿದ್ದಲ್ಲಿ ಧರಣಿ ನಡೆಸುವುದಾಗಿ ಹೇಳಿದ್ದಾರೆ.