ಶ್ರೀನಗರ: ಬಕ್ರೀದ್ ಹಬ್ಬದಂದೇ ಕಾಶ್ಮೀರದಲ್ಲಿ ಗಲಭೆ ಸಂಭವಿಸಿದ್ದು, ಹಲವಾರು ಪ್ರತಿಭಟನಾಕಾರರು ಬೀದಿಗಳಲ್ಲಿ ಪಾಕಿಸ್ತಾನದ ಧ್ವಜ ಹಾಗೂ ಐಎಸ್ಐಎಸ್ ಚಿಹ್ನೆಯನ್ನು ಪ್ರದರ್ಶಿಸಿದ್ದಾರೆ. ಗಲಭೆ ನಿಯಂತ್ರಿಸಲು ಬಂದ ರಕ್ಷಣಾ ಪಡೆಯ ಮೇಲೆ ಕಲ್ಲು ತೂರಾಟ ನಡೆಸಿದರು ಎಂದು ತಿಳಿದುಬಂದಿದೆ.
ಹಬ್ಬದ ನಿಮಿತ್ತ ನಗರದ ಮಂದಿ ಮಸೀದಿಯಲ್ಲಿ ನಮಾಜ್ ಸಲ್ಲಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಕಪ್ಪುಬಟ್ಟೆಯ ಮೇಲೆ ‘MUSA ARMY’ ಎಂದು ಬರೆದುಕೊಂಡಿದ್ದ ಗುಂಪು ಗಲಭೆಗೆ ಕಾರಣವಾಗಿದೆ. ಇದು ಅಲ್ ಖೈದಾ ಸಂಪರ್ಕವಿರುವ ಉಗ್ರರ ಗುಂಪಾದ ಝಾಕೀರ್ ಮುಸಾದ ಕಾರ್ಯ ಎನ್ನಲಾಗುತ್ತಿದೆ.
ಗುಂಪನ್ನು ಚದುರಿಸಲು ಸ್ಥಳಕ್ಕಾಗಮಿಸಿದ ರಕ್ಷಣಾ ಪಡೆಯ ಮೇಲೆ ಉದ್ರಿಕ್ತರು ಕಲ್ಲುತೂರಾಟ ನಡೆಸಿದ್ದಾರೆ. ಸದ್ಯ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ಕಾಶ್ಮೀರದ ಅನಂತನಾಗ್ನಲ್ಲಿ ಪ್ರತಿಭಟನಾಕಾರರು ಪೊಲೀಸ್ ವಾಹನದ ಮೇಲೆ ಕಲ್ಲು ಎಸೆಯುತ್ತಿರುವ ಹಾಗೂ ದೊಣ್ಣೆಯಿಂದ ಹೊಡೆಯುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಗುಂಡಿನ ದಾಳಿ:
ಬಿಜ್ಬೇಹಾರ ಹಸ್ಸನ್ಪೊರದ ಸಿಆರ್ಪಿಎಫ್ನ 30ನೇ ಬೆಟಾಲಿಯನ್ ಜಿ ಕಂಪ್ಯಾನಿಯನ್ ಮುಖ್ಯದ್ವಾರದ ಮುಂದೆ ಉಗ್ರರು ಏಕಾಏಕಿ ಗುಂಡು ಹಾರಿಸಿದ್ದಾರೆ. ಆಗ ಅಲ್ಲಿಯೇ ಇದ್ದ ಗಾರ್ಡ್ ಪ್ರತ್ಯುತ್ತರವಾಗಿ ಗುಂಡು ಹಾರಿಸಿದಾಗ ಉಗ್ರರು ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.