ಬೆಂಗಳೂರು, ಆ.22-ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಬಿಡುವು ಕೊಟ್ಟು ಕೊಡಗು ಸಹಜ ಸ್ಥಿತಿಯತ್ತ ಮರಳುತ್ತಿದೆ. ಆದರೆ, ಮುಂದುವರೆದಿರುವ ಭೂ ಕುಸಿತ ಪ್ರಕರಣಗಳು ಜನರ ನಿದ್ದೆಗೆಡಿಸಿದ್ದು, ಕುಸಿತದ ಕಾರಣ ಪತ್ತೆ ಹಚ್ಚುವ ಹೊಣೆಯನ್ನು ಇಸ್ರೋ ಕೈಗೆತ್ತಿಕೊಂಡಿದೆ.
ಮಳೆ ನಿಂತ ನಂತರ ಕೊಡಗಿನಾದ್ಯಂತ ಗುಡ್ಡ ಕುಸಿತ ಪ್ರಕರಣಗಳು ಮುಂದುವರಿದಿರುವುದರಿಂದ ಜನ ತಮ್ಮ ಮನೆಗಳಿಗೆ ತೆರಳಲು ಹೆದರುತ್ತಿದ್ದಾರೆ.
ಜೋಡ್‍ಪಾಲ, ಮಣ್ಣಂಗೇರಿ, ಹೆಮ್ಮತಾಳು ಪ್ರದೇಶಗಳಲ್ಲಿ ಗುಡ್ಡ ಕುಸಿಯುತ್ತಲೇ ಇದೆ. ಹೀಗಾಗಿ ಇಂದು ಕೊಡಗಿಗೆ ಭೇಟಿ ಕೊಟ್ಟಿರುವ ಇಸ್ರೋ ತಂಡ ಭೂ ಕುಸಿತದ ಮೂಲ ಪತ್ತೆ ಹಚ್ಚಲು ಮುಂದಾಗಿದೆ.
ಭೂ ಕುಸಿತ ಉಂಟಾಗಿರುವ ಪ್ರದೇಶಗಳಿಗೆ ತೆರಳಿ ಅಲ್ಲಿನ ಮಣ್ಣಿನ ಸ್ಯಾಂಪಲ್ ಪಡೆದು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಧಾರಾಕಾರವಾಗಿ ಸುರಿದ ಮಳೆಯಿಂದ ಭೂ ಕುಸಿತ ಉಂಟಾಗಿದೆ ಎಂದು ಭಾವಿಸಲಾಗಿದೆ. ಆದರೆ, ಮಳೆಗೆ ಇಷ್ಟೊಂದು ಪ್ರಮಾಣದಲ್ಲಿ ಭೂ ಕುಸಿತಗೊಳ್ಳುವುದು ಅಸಾಧ್ಯ. ಹೀಗಾಗಿ ಭೂಗರ್ಭದಲ್ಲಿ ಯಾವುದಾದರೂ ಸೋಟ ಸಂಭವಿಸಿದೆಯೇ ಅಥವಾ ಮತ್ತ್ಯಾವುದಾದರೂ ಕಾರಣವಿದೆಯೋ ಎಂಬ ಬಗ್ಗೆ ಇಸ್ರೋ ತಂಡ ತನಿಖೆ ನಡೆಸಲಿದೆ.
ಕೊಡಗಿನಲ್ಲಿ ಉಂಟಾಗುತ್ತಿರುವ ಭೂ ಕುಸಿತ ಪ್ರಕರಣಗಳು ಚಿಕ್ಕಮಗಳೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಿಗೂ ವ್ಯಾಪಿಸುವ ಸಾಧ್ಯತೆ ಇರುವುದರಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ಅನಾಹುತ ತಡೆಗಟ್ಟುವ ಬಗ್ಗೆಯೂ ಇಸ್ರೋ ಪರಿಶೀಲನೆ ನಡೆಸುತ್ತಿದೆ.
ಕೊಡಗಿನಾದ್ಯಂತ ಗುಡ್ಡ ಕುಸಿತ ಪ್ರಕರಣಗಳು ಮುಂದುವರಿದಿರುವುದರಿಂದ ಹಾನಿ ಪ್ರದೇಶಗಳ ಮಾಹಿತಿ ಪಡೆಯಲು ಅಕಾರಿಗಳು ಡ್ರೋಣ್ ಬಳಕೆ ಮಾಡುತ್ತಿದ್ದಾರೆ.
ಕೊಡಗು ಅವಾಂತರದಲ್ಲಿ ಇದುವರೆಗೂ ಎಂಟು ಮಂದಿ ಮೃತಪಟ್ಟಿದ್ದು, ಎಂಟು ಮಂದಿ ಕಣ್ಮರೆಯಾಗಿದ್ದಾರೆ.
ಹೆಮ್ಮತಾಳು ಗುಡ್ಡ ಕುಸಿತ ಪ್ರಕರಣದಲ್ಲಿ ತಾಯಿ-ಮಗ ಸೇರಿದಂತೆ ಎಂಟು ಮಂದಿ ನೀರಿನಲ್ಲಿ ಕೊಚ್ಚಿ ಹೋಗಿದ್ದು, ಅವರ ಶೋಧ ಕಾರ್ಯ ಮುಂದುವರಿದಿದೆ. ಸೇನಾ ಯೋಧರು ನಾಪತ್ತೆಯಾಗಿರುವವರ ಪತ್ತೆ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.
ಭೂ ಕುಸಿತದಿಂದ ಕೊಡಗು ಜಿಲ್ಲೆಯ ಕೆಲವು ಗ್ರಾಮಗಳೇ ನಾಪತ್ತೆಯಾಗಿವೆ. ಗರ್ವಾಲೆ, ಸೂರ್ಲಬ್ಬಿ, ಹಿರಿಕುಡ್ಲು, ಶಿಂಶಳ್ಳಿ ಮತ್ತಿತರ ಗ್ರಾಮಗಳು ನಾಪತ್ತೆಯಾಗಿವೆ. ಕೆಲ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿದ್ದು, ಕೆಲವು ಪ್ರದೇಶ ಸಂಪರ್ಕ ಕಡಿತಗೊಂಡಿದೆ.
ಇಷ್ಟೆಲ್ಲ ಅನಾಹುತದ ನಡುವೆಯೂ ಮುಂದುವರಿದ ಭೂ ಕುಸಿತ ಪ್ರಕರಣದಿಂದ ಜರ್ಝರಿತರಾಗಿರುವ ಸ್ಥಳೀಯರು ಪ್ರಾಣ ಉಳಿಸಿಕೊಳ್ಳಲು ಬೇರೆ ಬೇರೆ ಜಿಲ್ಲೆಗಳತ್ತ ವಲಸೆ ಹೋಗುತ್ತಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆದೇಶದ ಹಿನ್ನೆಲೆಯಲ್ಲಿ ಅಗ್ನಿಶಾಮಕ ದಳದ ಡಿಜಿಪಿ, ಕ್ಷಿಪ್ರ ಕಾರ್ಯಪಡೆ, ರಾಜ್ಯ ವಿಪತ್ತು ನಿರ್ವಹಣಾ ದಳ ಮತ್ತು ಇಬ್ಬರು ಡಿಜಿಪಿಗಳು ಕೊಡಗಿನಲ್ಲಿ ಮೊಕ್ಕಾಂ ಹೂಡಿದ್ದು, ರಕ್ಷಣಾ ಕಾರ್ಯಾಚರಣೆಯ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಸಂತ್ರಸ್ತರ ರಕ್ಷಣೆಗೆ ಎರಡು ಹೆಲಿಕಾಪ್ಟರ್, 20 ಕ್ಷಿಪ್ರ ವಾಹನಗಳನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ. ರಸ್ತೆ ಮೇಲಿನ ಮಣ್ಣು ತೆರವಿಗೆ ಜೆಸಿಬಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಹೊರ ಜಿಲ್ಲೆಗಳಿಂದ ಬಂದಿರುವ ನೂರಾರು ಅಕಾರಿಗಳು ಹಾಗೂ ಸ್ವಯಂ ಸೇವಕರು ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ.
ಕೊಡಗಿನಲ್ಲಿ ಮುಂದುವರೆದಿರುವ ಭೂ ಕುಸಿತ ಪ್ರಕರಣಗಳು ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆಗೂ ವಿಸ್ತರಿಸಿದೆ.
ಕಳೆದ ಒಂದು ತಿಂಗಳಿನಿಂದ ಸುರಿಯುತ್ತಿರುವ ಮಳೆ ಕಳೆದೆರಡು ದಿನಗಳಿಂದ ಕಡಿಮೆಯಾಗಿದೆ. ಮಲೆನಾಡಿನ ಸುತ್ತ ಭೂಕುಸಿತ, ಮನೆ ಬಿದ್ದಿರುವ ಘಟನೆಗಳು ವರದಿಯಾಗಿವೆ.
ಶೃಂಗೇರಿ, ಕೊಪ್ಪ, ಮೂಡಿಗೆರೆ, ಎನ್‍ಆರ್ ಪುರ ತಾಲೂಕುಗಳಲ್ಲಿ ಮಳೆ ಇಳಿಮುಖವಾಗಿದ್ದು, ಕೊಪ್ಪ ತಾಲೂಕಿನ ಭೂತನಕಾಡು ಸಮೀಪದ ಅರ್ಧ ಎಕರೆ ಪ್ರದೇಶ 30 ಅಡಿ ಆಳಕ್ಕೆ ಕುಸಿದಿದೆ.
ಇಷ್ಟು ದೊಡ್ಡ ಪ್ರಮಾಣದಲ್ಲಿ ಭೂ ಕುಸಿತ ಆತಂಕ ಉಂಟುಮಾಡಿದ್ದು, ಸಾರ್ವಜನಿಕರು ಎಚ್ಚರ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಸುಳ್ಯ ತಾಲೂಕಿನ ಕಲ್ಮಕಾರು ಬಳಿಯ ಕಡಮಕಲ್ಲು ದಟ್ಟ ಅರಣ್ಯದಲ್ಲಿ ಭೀಕರ ಸೋಟ ಉಂಟಾಗಿದ್ದು, ಸುಮಾರು 50ರಷ್ಟು ಅರಣ್ಯ ಪ್ರದೇಶ ಹಾಗೂ ಸೇತುವೆಯೊಂದು ನೀರಿನಲ್ಲಿ ಕೊಚ್ಚಿ ಹೋಗಿದೆ.
ಸಕಲೇಶಪುರ ತಾಲೂಕಿನ ಬಿಸಿಲೆ-ಸುಬ್ರಹ್ಮಣ್ಯ ಹಾಗೂ ಹೆತ್ತೂರು ರಸ್ತೆ ಕುಸಿತಗೊಂಡಿದೆ.
ಭೂ ಕುಸಿತದಿಂದ ಜನ ಜರ್ಝರಿತರಾಗಿರುವ ಬೆನ್ನಲ್ಲೇ ಕೆಲವೆಡೆ ವಿಷಜಂತುಗಳ ಕಾಟ ವಿಪರೀತವಾಗಿದೆ. ಹಾವು-ಚೇಳು ಮತ್ತಿತರ ವಿಷ ಜಂತುಗಳ ಕಾಟದಿಂದ ತಪ್ಪಿಸಿಕೊಳ್ಳುವುದು ಸ್ಥಳೀಯರಿಗೆ ಸವಾಲಾಗಿ ಪರಿಣಮಿಸಿದೆ.
ಕಂಡೂ ಕೇಳರಿಯದ ಭೀಕರ ಮಳೆಗೆ ಕೊಡಗು ತತ್ತರಿಸಿಹೋಗಿರುವ ಬೆನ್ನಲ್ಲೇ ಜಿಲ್ಲೆಯ ಪುನರ್ ನಿರ್ಮಾಣಕ್ಕೆ ಹಲವಾರು ಸಂಘ-ಸಂಸ್ಥೆಗಳು ಪಣ ತೊಟ್ಟಿವೆ. ರಾಜ್ಯ ಸರ್ಕಾರ ಕೂಡ ಎಲ್ಲ ಅಗತ್ಯ ನೆರವು ನೀಡುವ ಭರವಸೆ ನೀಡಿದೆ.
ಈ ಮಧ್ಯೆ ಮಳೆಯಿಂದ ತತ್ತರಿಸಿಹೋಗಿರುವ ಕೊಡಗು ಜಿಲ್ಲೆಯ ಒಂದು ಗ್ರಾಮವನ್ನು ದತ್ತು ಪಡೆದು ಸಾರ್ವಜನಿಕ ಸಹಭಾಗಿತ್ವದಲ್ಲಿ ಆ ಗ್ರಾಮವನ್ನು ಪುನರ್ ನಿರ್ಮಾಣ ಮಾಡುವ ಹೊಣೆಯನ್ನು ಉಡುಪಿಯ ಪಲಿಮಾರುಮಠ ಹೊತ್ತುಕೊಂಡಿದೆ.
ಕೊಡಗಿನ ಒಂದು ಗ್ರಾಮವನ್ನು ದತ್ತು ಪಡೆದು ಆ ಗ್ರಾಮವನ್ನು ಪುನರ್ ನಿರ್ಮಿಸಲು ತೀರ್ಮಾನಿಸಲಾಗಿದೆ. ಈ ಕಾರ್ಯದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಪಲಿಮಾರು ಮಠದ ಮಠಾೀಶರಾದ ಶ್ರೀ ವಿದ್ಯಾೀಶತೀರ್ಥ ಸ್ವಾಮೀಜಿಯವರು ಮನವಿ ಮಾಡಿಕೊಂಡಿದ್ದಾರೆ.