ಉತ್ತರಾಖಂಡ್‍ನಲ್ಲಿ ಬಂಡವಾಳ ಹೂಡಿಕೆದಾರರ ಸಮಾವೇಶ

ಬೆಂಗಳೂರು, ಆ.22-ಹಿಮಾಲಯ ಪರ್ವತಗಳ ನಾಡು ಉತ್ತರಾಖಂಡ್‍ನಲ್ಲಿ ಅಕ್ಟೋಬರ್ 7ರಿಂದ 2 ದಿನಗಳ ಕಾಲ ಅಲ್ಲಿನ ರಾಜ್ಯ ಸರ್ಕಾರ ಬಂಡವಾಳ ಹೂಡಿಕೆದಾರರ ಸಮಾವೇಶವನ್ನು ಹಮ್ಮಿಕೊಂಡಿದೆ.
ಈ ಸಂಬಂಧ ಇಂದು ಉತ್ತರಾಖಂಡ್‍ನ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಹಾಗೂ ಅಕಾರಿಗಳ ತಂಡ ನಗರದ ಖಾಸಗಿ ಹೊಟೇಲ್‍ನಲ್ಲಿ ಉದ್ದಿಮೆದಾರರ ಜತೆ ರೋಡ್ ಶೋ ನಡೆಸಿದರು.
ಉತ್ತರಾಖಂಡ್‍ನಲ್ಲಿ ವಿವಿಧ ಕ್ಷೇತ್ರಗಳಿಗೆ ಬಂಡವಾಳ ಹೂಡಿಕೆ ಮಾಡುವ ಉದ್ಯಮಿಗಳಿಗೆ ಸರ್ಕಾರ ಕೈಗೊಂಡಿರುವ ತ್ವರಿತ ಕ್ರಮಗಳು ಹಾಗೂ ರಾಜ್ಯದಲ್ಲಿರುವ ವಿಫುಲ ಅವಕಾಶಗಳ ಬಗ್ಗೆ ಉದ್ದಿಮೆದಾರರಿಗೆ ಮನವರಿಕೆ ಮಾಡಿಕೊಟ್ಟರು.
ಆಹಾರ ಸಂಸ್ಕರಣೆ, ತೋಟಗಾರಿಕೆ, ಹೂವಿನ ಕೃಷಿ, ಪ್ರವಾಸೋದ್ಯಮ, ಆಯುರ್ವೇದ, ಯುನಾನಿ ಔಷ ತಯಾರಿಕೆ , ಆಟೋ ಮೊಬೈಲ್ಸ್ ನೈಸರ್ಗಿಕ ನಾರುಗಳು, ಮಾಹಿತಿ ತಂತ್ರಜ್ಞಾನ ಚಲನಚಿತ್ರ ಶೂಟಿಂಗ್ ಸೇರಿದಂತೆ ಒಟ್ಟು 12 ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆದಾರರಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಿ ಕೊಡಲಾಗುವುದು ಎಂದು ಪ್ರಾತ್ಯಕ್ಷಿಕೆ ಮೂಲಕ ಮನವರಿಕೆ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಉತ್ತರಾಖಂಡ್ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ ರಾವತ್ ಉತ್ತರಾಖಂಡ್‍ನಲ್ಲಿ ಅಕ್ಟೋಬರ್ 7 ಮತ್ತು 8 ಎರಡು ದಿನಗಳ ಕಾಲ ಪ್ರಪ್ರಥಮ ಹೂಡಿಕೆದಾರರ ಸಮಾವೇಶ ಆಯೋಜಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಇದನ್ನು ಉದ್ಘಾಟಿಸಲಿದ್ದಾರೆ ಎಂದರು.
ದೇಶದಲ್ಲೇ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳಲ್ಲಿ ಒಂದಾಗಿದೆ. ಬಂಡವಾಳ ಹೂಡಿಕೆದಾರರಿಗೆ ಏಕ ಗವಾಕ್ಷಿ ಪದ್ಧತಿ ಜಾರಿಯಾಗಿದೆ. ಉದ್ಯಮಿಗಳು ಯಾವುದೇ ಕ್ಷೇತ್ರದಲ್ಲಿ ಬಂಡವಾಳ ಹೂಡಲು ಮುಂದೆ ಬಂದರೆ ನೀರು, ವಿದ್ಯುತ್ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಕಲ್ಪಿಸಿ ಕೊಡಲಾಗುವುದು. ರಾಜ್ಯದಲ್ಲಿ ಬಂಡವಾಳ ಹೂಡಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದೆ ಬರುವಂತೆ ಮನವಿ ಮಾಡಿದರು.
ಉತ್ತರಾಖಂಡ್ ಇಂದು ಜಿಡಿಪಿಯಲ್ಲೂ ದಾಖಲೆಯ ಪ್ರಮಾಣ ಸರಿಗಟ್ಟಿದೆ. 2016-17ರಲ್ಲಿ ಶೇ.13.27ರಷ್ಟು ಜಿಡಿಪಿ ದಾಖಲಾಗಿತ್ತು. ನಮ್ಮ ರಾಜ್ಯದಲ್ಲಿ ಉದ್ದಿಮೆದಾರರಿಗೆ ಹೆಚ್ಚಿನ ರೀತಿಯಲ್ಲಿ ಸವಲತ್ತುಗಳನ್ನು ಒದಗಿಸುತ್ತಿದ್ದೇವೆ.
ಇದಕ್ಕಾಗಿ 2015ರಲ್ಲಿ ಬೃಹತ್ ಕೈಗಾರಿಕೆ ಮತ್ತು ಹೂಡಿಕೆದಾರರ ನಿಯಮವನ್ನು ಜಾರಿ ಮಾಡಲಾಗಿದೆ. ಏಕ ಗವಾಕ್ಷಿ ಪದ್ಧತಿಯಡಿ ಹೂಡಿಕೆದಾರರಿಗೆ 1 ತಿಂಗಳೊಳಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಸರ್ಕಾರ ಕಲ್ಪಿಸಿಕೊಡಲಿದೆ ಎಂದು ವಿವರಿಸಿದರು.
ರಾಜ್ಯದ ಪ್ರಮುಖ ಸ್ಥಳಗಳಾದ ಡೆಹ್ರಾಡೂನ್, ಹರಿದ್ವಾರ್, ಹೃಷಿಕೇಶ್, ಕೇದಾರನಾಥ, ಬದ್ರಿನಾಥ್ , ರುದ್ರಪ್ರಯಾಗ್ ಸೇರಿದಂತೆ ಮತ್ತಿತರ ಕಡೆ ವ್ಯಾಪಕವಾಗಿ ಬಂಡವಾಳ ಹೂಡಿಕೆ ಮಾಡುತ್ತಿದ್ದಾರೆ. ದಿನದ 24 ಗಂಟೆಯೂ ವಿದ್ಯುತ್ ಅತ್ಯುತ್ತಮವಾದ ಕಾನೂನು ಮತ್ತು ಸುವ್ಯವಸ್ಥೆ, ಉದ್ದಿಮೆದಾರರಿಗೆ ಭದ್ರತೆ ಅತ್ಯುತ್ತಮ ಪರಿಸರವನ್ನು ಹೂಡಿಕೆದಾರರಿಗೆ ಹೆಚ್ಚಿನ ಉತ್ತೇಜನ ನೀಡಲಾಗುತ್ತದೆ. ಈ ಬಾರಿಯ ಸಮಾವೇಶದಲ್ಲಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಂಡವಾಳ ಹೂಡಲು ಮುಂದೆ ಬಂದಿದೆ.
ಕರ್ನಾಟಕದ ಉದ್ದಿಮೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಹೂಡಿಕೆ ಮಾಡಲು ಮುಂದೆ ಬರಬೇಕೆಂದು ಮನವಿ ಮಾಡಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ