ಬೆಂಗಳೂರಿಗೆ ಬಂದ ಅಟಲ್ ಅಸ್ಥಿ

ಬೆಂಗಳೂರು,ಆ.22-ದೀರ್ಘ ಕಾಲದ ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ, ಭಾರತ ರತ್ನ ಪುರಸ್ಕøತ, ಅಜಾತ ಶತ್ರು ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿ ಇಂದು ಬೆಂಗಳೂರಿಗೆ ಆಗಮಿಸಿತು.

ನವದೆಹಲಿಯಲ್ಲಿ ಇಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು, ಬಿಜೆಪಿ ಎಲ್ಲ ರಾಜ್ಯ ಅಧ್ಯಕ್ಷರುಗಳಿಗೆ ಪಕ್ಷದ ಕಚೇರಿಯಲ್ಲಿ ವಾಜಪೇಯಿ ಅವರ ಅಸ್ಥಿ ಯನ್ನು ಹಸ್ತಾಂತರಿಸಿದರು. ವಾಜಪೇಯಿ ಅವರ ಅಸ್ಥಿಯನ್ನು ಸ್ವೀಕರಿಸಿ ಬಳಿಕ ಜಿಲ್ಲಾಧ್ಯಕ್ಷರು ನವದೆಹಲಿಯಿಂದ ಮಧ್ಯಾಹ್ನ 4.00ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದರು.
ಈ ವೇಳೆ ಪಕ್ಷದ ಮುಖಂಡ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಆರ್.ಅಶೋಕ್, ಶಾಸಕರು, ಬಿಬಿಎಂಪಿ ಸದಸ್ಯರು ಸೇರಿದಂತೆ ಮತ್ತಿತರರು ವಿಮಾನ ನಿಲ್ದಾಣದಲ್ಲಿ ಅಸ್ಥಿ ಯನ್ನು ಬರಮಾಡಿಕೊಂಡರು. ಅಲ್ಲಿಂದ 6 ಗಂಟೆಗೆ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ತಂದು ಪುಷ್ಪನಮನ ಸಲ್ಲಿಸಲಾಯಿತು.


ವಾಜಪೇಯಿ ಅವರ ಅಸ್ಥಿಯನ್ನು ದೇಶದ ಪ್ರಮುಖ ನಗರಗಳಲ್ಲಿ ವಿಸರ್ಜನೆ ಮಾಡುವ ಮೂಲಕ ಅವರ ಆತ್ಮಕ್ಕೆ ಶಾಂತಿ ಕೋರಬೇಕೆಂದು ಹೈಕಮಾಂಡ್ ಸೂಚನೆ ನೀಡಿತ್ತು.ಅದರಂತೆ ಅಟಲ್ ಜೀ ಅವರ ಅಸ್ತಿ ಕಳಸವನ್ನು ನಾಳೆಯಿಂದ ರಾಜ್ಯದ ಐದು ಕಡೆ ವಿಸರ್ಜನೆ ಮಾಡಲಾಗುವುದು.

ಎಲ್ಲೆಲ್ಲಿ ವಿಸರ್ಜನೆ:
ನಾಳೆಯಿಂದ ಅಸ್ಥಿ ವಿಸರ್ಜನಾ ಕಾರ್ಯಕ್ರಮ ಆರಂಭವಾಗಲಿದ್ದು, ಬೆಂಗಳೂರಿನ ಬಿಜೆಪಿ ಕಾರ್ಯಾಲಯದಿಂದ ಬೆಳಿಗ್ಗೆ 9 ಗಂಟೆಗೆ ಪ್ರಾರಂಭಗೊಂಡು ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತು ಶ್ರೀರಂಗಪಟ್ಟಣ ತಲುಪಿ ಕಾವೇರಿ ನದಿಯಲ್ಲಿ ವಿಸರ್ಜಿಸಲಾಗುತ್ತದೆ. ಈ ವೇಳೆ ನನ್ನೊಂದಿಗೆ ಕೇಂದ್ರ ಸಚಿವ ಅನಂತಕುಮಾರ್, ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್, ಅರವಿಂದ್ ಲಿಂಬಾವಳಿ, ಸಂಸದ ಪ್ರತಾಪ್ ಸಿಂಹ ಭಾಗವಹಿಸಲಿದ್ದಾರೆ.

ಶನಿವಾರದಂದು 7 ಕಡೆಗಳಲ್ಲಿ ಅಸ್ಥಿ ವಿಸರ್ಜನಾ ಕಾರ್ಯಕ್ರಮ ಮಾಡಲಾಗುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯ ನೇತ್ರಾವತಿ ನದಿಯಲ್ಲಿ ಅಸ್ಥಿ ವಿಸರ್ಜನೆ ಕಾರ್ಯಕ್ರಮ ಮಾಡಲಾಗುವುದು. ಈ ವೇಳೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ,ಸಂಸದೆ ಶೋಭಾ ಕರಂದ್ಲಾಜೆ, ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಇರುತ್ತಾರೆ.

ಹುಬ್ಬಳ್ಳಿ-ಧಾರವಾಡ, ಗದಗ, ಹಾವೇರಿ ಜಿಲ್ಲೆಯಲ್ಲಿ ಮಲಪ್ರಭಾ ನದಿಯಲ್ಲಿ ಅಸ್ಥಿ ವಿಸರ್ಜನೆ ಕಾರ್ಯಕ್ರಮ ಮಾಡಲಾಗುವುದು. ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಸಂಸದ ಪ್ರಹ್ಲಾದ್ ಜೋಷಿ, ಶಾಸಕ ಸಿ.ಎಂ.ಉದಾಸಿ, ಬಸವರಾಜ ಬೊಮ್ಮಾಯಿ ಅವರು ಇರುತ್ತಾರೆ.

ವಿಜಯಪುರ, ಬಾಗಲಕೋಟೆ ಜಿಲ್ಲೆಯ ಕೃಷ್ಣಾ ನದಿಯಲ್ಲಿ ¾¾ಅಸ್ಥಿ ವಿಸರ್ಜನೆ¿¿ ಕಾರ್ಯಕ್ರಮ ಮಾಡಲಾಗುವುದು. ಇಲ್ಲಿ ಕೇಂದ್ರ ಸಚಿವ ರಮೇಶ್ ಜಿಗಜಿಣಗಿ, ಸಂಸದ ಪಿ.ಸಿ. ಗದ್ದಿಗೌಡರ್, ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಗೋವಿಂದ್ ಕಾರಜೋಳ ಅವರು ಇರುತ್ತಾರೆ.

ಬೀದರ್, ಕಲ್ಬುರ್ಗಿ ಜಿಲ್ಲೆಯ ಕಾರಂಜÁ ನದಿ ಹಾಗೂ ಬಳ್ಳಾರಿ, ಕೊಪ್ಪಳ ಜಿಲ್ಲೆಯ ತುಂಗಭದ್ರಾ ನದಿಯಲ್ಲಿ ಅಸ್ಥಿ ವಿಸರ್ಜನೆ ಮಾಡಲಾಗುವುದು. ಈ ಸಂದರ್ಭದಲ್ಲಿ ಶಾಸಕರಾದ ಕೆ.ಎಸ್.ಈಶ್ವರಪ್ಪ, ಬಿ.ಶ್ರೀರಾಮುಲು, ಸಂಸದ ಸಂಗಣ್ಣ ಕರಡಿ ಪಾಲ್ಗೊಳ್ಳಲಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಶರಾವತಿ ನದಿಯಲ್ಲಿ (ಹೊನ್ನಾವರ) ಅಸ್ಥಿ ವಿಸರ್ಜನೆ ಮಾಡಲಾಗುತ್ತಿದ್ದು, ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ, ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಭಾಗವಹಿಸಲಿದ್ದಾರೆ.

ಶಿವಮೊಗ್ಗ ಜಿಲ್ಲೆಯ ತುಂಗಾ ನದಿಯಲ್ಲಿ ಅಸ್ಥಿ ವಿಸರ್ಜನೆ ವೇಳೆ ಶಾಸಕರಾದ ಆಯನೂರು ಮಂಜುನಾಥ್, ವಿಧಾನ ಪರಿಷತ್ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ, ಮಾಜಿ ಸಂಸದ ಬಿ.ವೈ.ರಾಘವೇಂದ್ರ ಇರುತ್ತಾರೆ.
ಭಾನುವಾರದಂದು ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ.

ಏನಿದು ಅಸ್ಥಿ ಸಂಚಯನ ಕಾರ್ಯಕ್ರಮ:
ಹಿಂದೂ ಸಂಪ್ರದಾಯದಲ್ಲಿ, ಯಾವುದೇ ವ್ಯಕ್ತಿ ನಿಧನರಾದ್ರೆ, ಅವರ ದೇಹವನ್ನು ಚಿತೆಯಲ್ಲಿಟ್ಟು ಸುಟ್ಟರೆ, ಅದರಿಂದ ಬರುವ ಭಸ್ಮವನ್ನು ಅಸ್ಥಿ ಎಂದು ಪರಿಗಣಿಸಲ್ಪಟ್ಟು ಅದನ್ನು ನದಿಗಳಲ್ಲಿ ವಿಸರ್ಜನೆ ಮಾಡುವ ಪರಿಪಾಠ ನಡೆದುಕೊಂಡು ಬಂದಿದೆ.
ಇನ್ನು ಅಟಲ್ ಬಿಹಾರಿ ವಾಜಪೇಯಿ ಅವರು ಹಿಂದು ಧರ್ಮದಲ್ಲಿ ಉತ್ತರ ಭಾರತದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರಿಂದ, ಅವರ ಸಮುದಾಯದಲ್ಲಿ ಆಚರಿಸುವ ವಿವಿಧಾನಗಳಂತೆ ಅಂತ್ಯಕ್ರಿಯೆ ನಡೆದಿದೆ. ಇತ್ತ ಅಸ್ಥಿ ಸಂಚಯನ ಕಾರ್ಯ ಕೂಡ ಶಾಸ್ತ್ರೋಕ್ತವಾಗಿ ನಡೆಯಬೇಕಾಗಿರುವುದರಿಂದ ನಾಳೆ ದೇಶದ ಎಲ್ಲಾ ರಾಜ್ಯಗಳಲ್ಲೂ ಇರುವ ಪ್ರಮುಖ ನದಿಗಳಲ್ಲಿ ಅಟಲ್ ಜೀ ಅವರ ಅಸ್ಥಿ ಸಂಚಯನ ಕಾರ್ಯವನ್ನು ಮಾಡಲು ಬಿಜೆಪಿ ನಿರ್ಧರಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ