1924ರಲ್ಲೂ ನಡೆದಿತ್ತು ಜಲಪ್ರಳಯ

 

ಬೆಂಗಳೂರು,ಆ.22-ಕೊಡಗು ಜಿಲ್ಲೆಯಲ್ಲಿ ಇದೇ ಮಾದರಿಯ ಜಲಪ್ರಳಯ 1924ರಲ್ಲೂ ಉಂಟಾಗಿದ್ದ ನಿದರ್ಶನವಿದೆ ಎಂದು ಹವಾಮಾನ ತಜ್ಞ ವಿ.ಎಸ್.ಪ್ರಕಾಶ್ ತಿಳಿಸಿದರು.
ಕೊಡಗಿನಲ್ಲಿ ಇದೇ ರೀತಿ ಭಾರೀ ಮಳೆ ಉಂಟಾಗಿ ಮನೆಗಳ ಕುಸಿತ ಪ್ರವಾಹ, ಗುಡ್ಡಗಳ ಕುಸಿತವು ಉಂಟಾಗಿ ಜಲಪ್ರಳಯವೇ ಉಂಟಾಗಿತ್ತು. ಸುಮಾರು 90 ವರ್ಷಗಳ ಹಿಂದೆ ಈಗಿನ ಪ್ರಮಾಣದಷ್ಟು ಮಳೆಯ ಪ್ರಮಾಣ ಅಳೆಯುವ ಮಾಪಕಗಳು ಇರಲಿಲ್ಲ. ಆದರೂ ಹೆಚ್ಚುಕಡಿಮೆ ಇದೇ ರೀತಿಯ ಅತಿವೃಷ್ಟಿ ಉಂಟಾಗಿತ್ತು.
ಕ್ಷಿಪ್ರ ನಗರೀಕರಣ, ರಸ್ತೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳು, ಭೂಮಿಯ ಬಳಕೆಯಲ್ಲಾಗಿರುವ ಬದಲಾವಣೆ, ಕಾಫಿ ತಳಿಯ ಬದಲಾವಣೆ, ಅವೈಜ್ಞಾನಿಕವಾಗಿ ಹೋಂ ಸ್ಟೇಗಳ ನಿರ್ಮಾಣ, ನಿರಂತರವಾಗಿ ಸುರಿದ ಭಾರೀ ಮಳೆ, ಅರಣ್ಯ ನಾಶ ಮೊದಲಾದ ಕಾರಣಗಳಿಂದ ಕೊಡಗಿನಲ್ಲಿ ಭೂಕುಸಿತ ಉಂಟಾಗಿದೆ.
ನಿರ್ದಿಷ್ಟವಾಗಿ ಒಂದೇ ಕಾರಣದಿಂದ ಭೂ ಕುಸಿತವಾಗಿಲ್ಲ. ಎಲ್ಲ ಕಾರಣಗಳು ಒಟ್ಟುಗೂಡಿ ನಿಸರ್ಗದಲ್ಲಾಗಿದ್ದ ಅಸಮತೋಲನದಿಂದ ಭೂ ಕುಸಿತ ಉಂಟಾಗಿದೆ. ಎಡೆಬಿಡದೆ ನಿರಂತರವಾಗಿ ಮಳೆ ಬಿದ್ದಿದ್ದರಿಂದ ಭೂಮಿಯಲ್ಲಿನ ತೇವಾಂಶ ಹೆಚ್ಚಾಗಿದೆ. ಹೀಗಾಗಿ ಗುಡ್ಡಗಳು ಕೂಡ ಕುಸಿದಿವೆ ಎಂದು ಹೇಳಿದರು.
ಹೆಚ್ಚುಕಡಿಮೆ ಒಂದು ಶತಮಾನದ ಹಿಂದೆ ಬಿದ್ದಂತಹ ದಾಖಲೆ ಪ್ರಮಾಣದ ಮಳೆ ಈ ಬಾರಿ ಬಿದ್ದಿದೆ. ಆಗ ಈಗಿನಂತೆ ಬಹುಮಹಡಿಗಳ ಕಟ್ಟಡಗಳಿರಲಿಲ್ಲ. ಸಾಧಾರಣ ಮನೆಗಳಿದ್ದವು. ಆಗಲೂ ಕುಸಿತ ಉಂಟಾಗಿತ್ತು. ಈಗ ರಸ್ತೆ ನಿರ್ಮಾಣ, ಗುಡ್ಡಗಳನ್ನು ಅಗೆದಿರುವುದು, ಕಟ್ಟಡ ನಿರ್ಮಾಣಕ್ಕೆ ಬಳಕೆ, ಕಂದಕಗಳ ಸನಿಹದಲ್ಲೇ ಕಟ್ಟಡವನ್ನು ನಿರ್ಮಿಸಿರುವುದು ಸೇರಿದಂತೆ ನಾನಾ ರೀತಿಯ ಕಾರಣಗಳು ಭೂ ಕುಸಿತಕ್ಕೆ ಕಾರಣವಾಗಿದೆ.
ಇತ್ತೀಚೆಗೆ ಬಿದ್ದ ಭಾರೀ ಮಳೆ, ಪ್ರವಾಹ ಪರಿಸ್ಥಿತಿ, ಭೂ ಕುಸಿತಗಳ ಬಗ್ಗೆ ಹೆಚ್ಚಿನ ಪ್ರಮಾಣದ ಅಧ್ಯಯನವಾಗಬೇಕಿದೆ. ತಾವು ಕೂಡ ಕೊಡಗಿನ ಪರಿಸ್ಥಿತಿ ಬಗ್ಗೆ ಅಧ್ಯಯನ ಕೈಗೊಂಡಿರುವುದಾಗಿ ತಿಳಿಸಿದರು.
ಕರ್ನಾಟಕ ನೈಸರ್ಗಿಕ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಜೂನ್‍ನಿಂದ ಇಲ್ಲಿಯವರೆಗೆ ವಾಡಿಕೆ ಮಳೆ ಪ್ರಮಾಣ 2019.9 ಮಿ.ಮೀ ಇದೆ. ಆದರೆ ಈ ಬಾರಿ 2942.8 ಮೀ.ಮೀನಷ್ಟು ಭಾರೀ ಪ್ರಮಾಣದ ಮಳೆಯಾಗಿದೆ. ವಾಡಿಕೆಗಿಂತ ಶೇ.46ರಷ್ಟು ಹೆಚ್ಚಿನ ಪ್ರಮಾಣದ ಮಳೆಯಾಗಿದೆ.
ಪರಿಣಿತರ ತಂಡ:
ಕೊಡಗಿನಲ್ಲಿ ಉಂಟಾದ ಭೀಕರ ಮಳೆ ಅನಾಹುತದ ಬಗ್ಗೆ ವಿವಿಧ ಕ್ಷೇತ್ರಗಳ ಪರಿಣಿತರ ತಂಡ ಅಧ್ಯಯನ ನಡೆಸುತ್ತಿದೆ. ಭೂಗರ್ಭ, ಹವಾಮಾನ, ನಿರ್ಮಾಣ ಸೇರಿದಂತೆ ವಿವಿಧ ಕ್ಷೇತ್ರಗಳ ಪರಿಣಿತರ ತಂಡ ಇಂದಿನಿಂದ ಮಡಿಕೇರಿ, ಕುಶಾಲನಗರ ಮತ್ತಿತರ ಕಡೆಗಳಲ್ಲಿ ಅಧ್ಯಯನ ಕೈಗೊಂಡಿದೆ.
ವಿ.ಎಸ್.ಪ್ರಕಾಶ್, ಡಾ.ಗೋಪಾಲ್. ಪೆÇ್ರ.ಜಗದೀಶ್, ಪಾಂಡುರಂಗ ನಾಯಕ್, ಲೋಕೇಶ್ ಅವರು ಅಧ್ಯಯನ ತಂಡದಲ್ಲಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ