
ಜಕಾರ್ತಾ: ಇಂಡೋನೇಷಿಯಾದಲ್ಲಿನ ಪ್ರತಿಷ್ಠಿತ ಏಷ್ಯನ್ ಗೇಮ್ಸ್ ಹದಿನೆಂಟನೇ ಆವೃತ್ತಿಯಲ್ಲಿ ಭಾರತದ ಶೂಟರ್ ಗಳ ಪದಕ ಬೇಟೆ ಮುಂದುವರಿದಿದೆ.
ಬುಧವಾರದ ಪಂದ್ಯದಲ್ಲಿ ಮಹಿಳೆಯರ 25 ಮಿ ಪಿಸ್ತೂಲ್ ವಿಭಾಗದಲ್ಲಿ ರಾಹಿ ಸರ್ನೊಬಾತ್ ಚಿನ್ನದ ಪದಕ ಗಳಿಸಿಕೊಂಡಿದ್ದಾರೆ.
ಮಂಗಳವಾರ ನಡೆದಿದ್ದ ಪಂದ್ಯದಲ್ಲಿ ಶೂಟರ್ ಸೌರಭ್ ಚೌಧರಿಭಾರತಕ್ಕೆ ಶೂಟಿಂಗ್ ವಿಭಾಗದ ಮೊದಲ ಚಿನ್ನ ಗಳಿಸಿಕೊಟ್ಟರೆ ಇದೀಗ ಮಹಿಳೆಯರ ವಿಭಾಗದಲ್ಲಿ ರಾಹಿ ಚಿನ್ನ ಗೆಲ್ಲುವ ಮೂಲಕ ಬಾರತದ ಕೀರ್ತಿಗೆ ಇನ್ನಷ್ಟು ಮೆರುಗು ತಂದಿದ್ದಾರೆ.
ದೀಪಾ ಕರ್ಮಾಕರ್ ನಿರ್ಗಮನ
ತೀವ್ರ ಮಂಡಿನೋವಿನ ಕಾರಣ ಭಾರತದ ಸ್ಟಾರ್ ಜಿಮ್ನಾಸ್ಟಿಕ್ ಪಟು ದೀಪಾ ಕರ್ಮಾಕರ್ ಏಷ್ಯನ್ ಗೇಮ್ಸ್ ಕ್ರೀಡಾಕೂಟದಿಂದ ನಿರ್ಗಮಿಸಿದ್ದಾರೆ.
ಕೆಲವು ದಿನಗಳಿಂದ ದೀಪಾ ಮಂಡಿ ನೋವಿನಿಂದ ಬಳಲುತ್ತಿದ್ದು ಇಂದು ನೋವು ಉಲ್ಬಣವಾಗಿತ್ತು, ಒಂದು ವೇಳೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದಾದರೆ ಇನ್ನಷ್ಟು ಅಪಾಯವಿದೆ ಎನ್ನುವ ಹಿನ್ನೆಲೆಯಲ್ಲಿ ಆಟಗಾರ್ತಿ ಆರ್ಟಿಸ್ಟಿಕ್ ತಂಡದ ಫೈನಲ್ ಪಂದ್ಯದಿಂದ ಹಿಂದೆ ಸರಿದಿದ್ದಾರೆ.
ಜಿಮ್ನಾಸ್ಟಿಕ್ ನಲ್ಲಿ ಭಾರತಕ್ಕೆ ಪದಕದ ಭರವಸೆ ಮೂಡಿಸಿದ್ದ ದೀಪಾ ನಿರ್ಗಮನ ಕ್ರೀಡಾ ಪ್ರೇಮಿಗಳಿಗೆ ತೀವ್ರ ನಿರಾಶೆ ತಂದಿದೆ.