ನನ್ನಲ್ಲಿ ಸೌಂದರ್ಯಕ್ಕಿಂತ ಹೆಚ್ಚಿನ ಸಾಮರ್ಥ್ಯವಿದೆ: ಸುಧಾರಾಣಿ

ದಿನಕರ್ ತೂಗುದೀಪ ನಿರ್ಮಾಣದ ಲೈಫ್ ಜೊತೆ ಒಂದು ಸೆಲ್ಫಿ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇದರಲ್ಲಿ ನಟಿ ಸುಧಾರಾಣಿಯವರದ್ದು ವಿಶಿಷ್ಟ ಪಾತ್ರವಿದೆ ಮತ್ತು ಆ ಪಾತ್ರಕ್ಕೆ ಮಹತ್ವ ಕೂಡ ಇದೆ. ಚಿತ್ರ ಬಿಡುಗಡೆ ಸಂದರ್ಭದಲ್ಲಿ ಇಷ್ಟು ವರ್ಷಗಳ ಕಾಲ ಚಿತ್ರರಂಗದಲ್ಲಿ ನಡೆದುಕೊಂಡು ಬಂದ ಹಾದಿ ಮತ್ತು ಇನ್ನು ಕೂಡ ನಟನೆಯಲ್ಲಿ ಸಕ್ರಿಯರಾಗಿರುವುದರ ಬಗ್ಗೆ ಹೇಳಿಕೊಂಡಿದ್ದಾರೆ.ಮೊದಲೆಲ್ಲಾ ಸುಧಾರಾಣಿಯವರ ಚರ್ಮದ ಬಣ್ಣ ನೋಡಿ ನಿರ್ದೇಶಕರು ಕೆಲವು ಪಾತ್ರಗಳಿಗೆ ಇವರು ಹೊಂದಿಕೆಯಾಗುವುದಿಲ್ಲ ಎಂದು ತೀರ್ಮಾನಿಸಿಬಿಡುತ್ತಿದ್ದರಂತೆ. ನಗರ ಪ್ರದೇಶದ ಕಥೆಗಳಿಗೆ ಮಾತ್ರ  ಹೊಂದಿಕೆಯಾಗುತ್ತಾರೆಂದು ಭಾವಿಸುತ್ತಿದ್ದರಂತೆ. ಇನ್ನೊಂದು ಹಂತದಲ್ಲಿ ಸಿನಿಮಾ ರಂಗದಲ್ಲಿ ಕೂಡ ಜಾತಿಗೆ ಪ್ರಾಧಾನ್ಯತೆ ಸಿಗುತ್ತಿದ್ದಾಗ ಇವರನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿರಲಿಲ್ಲವಂತೆ.ಇಂತಹ ಪರಿಸ್ಥಿತಿ ಕೆಲವೊಮ್ಮೆ ಅವರಿಗೆ ಬೇಸರ ತರಿಸಿದ್ದರೂ ಕೂಡ ತಮ್ಮ ಹಠ, ಸಾಧನೆಯನ್ನು ಬಿಡುತ್ತಿರಲಿಲ್ಲವಂತೆ. ನನ್ನ ಮನಸ್ಸು ಹೇಳಿದ್ದನ್ನು ನಾನು ಮಾಡುತ್ತಿದ್ದೆ. ಕೆಲವೊಮ್ಮೆ ನನ್ನ ನಿರ್ಧಾರ ತಪ್ಪಾಗಿರಬಹುದು. ಆದರೆ ಇದರಿಂದ ನಾನು ಕೇವಲ ನಾಯಕಿ ಪಾತ್ರಕ್ಕೆ ಸೀಮಿತವಾಗದೆ ಸಿನಿಮಾದಲ್ಲಿ ತೂಕದ ಪಾತ್ರ ಮಾಡಲು ಸಾಧ್ಯವಾಯಿತು, ನಾನು ನಟಿಯಾಗಿ ನನ್ನ ಪ್ರತಿಭೆಯನ್ನು ಸಾಬೀತುಪಡಿಸಬೇಕಾಗಿತ್ತು ಎನ್ನುತ್ತಾರೆ.ಇಂದು ಸಿನಿಮಾದಲ್ಲಿ ಪಾತ್ರಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡದೆ ನಾಯಕ, ನಾಯಕಿಗೆ ನೀಡುತ್ತಾರೆ ಎನ್ನುವ ಸುಧಾರಾಣಿ ಲೈಫ್ ಜೊತೆ ಒಂದು ಸೆಲ್ಫಿಯಲ್ಲಿ ಪ್ರತಿ ಪಾತ್ರಕ್ಕೆ ಕೂಡ ಮಹತ್ವವಿದೆ. ಇಲ್ಲಿ ವಯಸ್ಸು, ಲಿಂಗಕ್ಕೆ ಒತ್ತು ನೀಡಿಲ್ಲ. ಬದಲಾಗಿ ಪಾತ್ರಗಳು ಮಾತನಾಡುತ್ತವೆ. ಒಟ್ಟಾರೆ ಇದೊಂದು ಸಂದೇಶಭರಿತ ಉತ್ತಮ ಚಿತ್ರ ಎನ್ನುತ್ತಾರೆ.ಸಿನಿಮಾದಲ್ಲಿ ಮಹಿಳೆಯರನ್ನು ಆಧರಿಸಿದ ಅವರಿಗೆ ಪ್ರಾಧಾನ್ಯತೆ ನೀಡುವ ಪಾತ್ರಗಳನ್ನು ನಿರ್ದೇಶಕರು ಹೆಚ್ಚಾಗಿ ನೀಡದಿರುವುದು ಕೂಡ ಅವರಿಗೆ ಬೇಸರ ತರಿಸುತ್ತದೆಯಂತೆ. ಸಿನಿಮಾದಲ್ಲಿ ಹೆಣ್ಣನ್ನು ಕೇವಲ ಗ್ಲಾಮರ್ ಪಾತ್ರಗಳಿಗೆ ಸೀಮಿತ ಮಾಡಬಾರದು ಎನ್ನುತ್ತಾರೆ. ಯಾರಾದರೂ ನೀವು ಸುಂದರವಾಗಿದ್ದೀರಿ, ಇಷ್ಟು ವರ್ಷವಾದರೂ ಸೌಂದರ್ಯವನ್ನು ಹೇಗೆ ಕಾಪಾಡಿಕೊಂಡು ಬಂದಿದ್ದೀರಿ ಎಂದು ಕೇಳಿದರೆ ಸಿಟ್ಟು ಬರುತ್ತದೆಯಂತೆ.ಬುದ್ಧಿವಂತಿಕೆಯಿಲ್ಲದೆ ಸೌಂದರ್ಯ ನನಗೆ ಇಷ್ಟವಾಗುವುದಿಲ್ಲ. ನನ್ನಲ್ಲಿ ಸೌಂದರ್ಯಕ್ಕಿಂತ ಹೆಚ್ಚಿನ ಸಾಮರ್ಥ್ಯವಿದೆ ಎನ್ನುತ್ತಾರೆ ಅವರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ