ಬೆಂಗಳೂರು, ಆ.21- ರಾಜ್ಯ ಒಕ್ಕಲಿಗರ ಸಂಘಕ್ಕೆ ಆಡಳಿತಾಧಿಕಾರಿ ನೇಮಕ ಮಾಡಿರುವುದು ಒಳ್ಳೆಯ ನಿರ್ಧಾರವಾಗಿದ್ದು, ಜನಾಂಗದ ಪರವಾಗಿ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಲಾಗುವುದು ಎಂದು ಸಂಘದ ಮಾಜಿ ಅಧ್ಯಕ್ಷ ಡಿ.ಎನ್.ಬೆಟ್ಟೇಗೌಡ ತಿಳಿಸಿದರು.
ಸಂಘದ ಆಡಳಿತಾಧಿಕಾರಿಯಾಗಿ ನಿವೃತ್ತ ಐಎಎಸ್ ಅಧಿಕಾರಿ ಎಚ್.ಎಸ್.ಅಶೋಕಾನಂದ್ ಅಧಿಕಾರ ವಹಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತಾಧಿಕಾರಿಯನ್ನು ಆರು ತಿಂಗಳ ಅವಧಿಗೆ ನೇಮಕ ಮಾಡಲಾಗಿದೆ. ಸಂಘದ ಅವ್ಯವಹಾರ, ಹಗರಣ ಪರಿಶೀಲನೆಗೆ ಆರು ತಿಂಗಳು ಸಾಲುವುದಿಲ್ಲ. 6ರಿಂದ 10 ವರ್ಷಗಳ ವರೆಗೂ ವಿಸ್ತರಿಸಬೇಕು ಎಂದರು.
ಸಂಘದ ನಿರ್ದೇಶಕರು ನೀತಿ, ನಿಯಮಗಳಿಗೆ ಆದ್ಯತೆ ನೀಡುತ್ತಿರಲಿಲ್ಲ. ಆಡಳಿತಾಧಿಕಾರಿ ನೇಮಕ ಮಾಡಿರುವ ಸರ್ಕಾರಕ್ಕೆ ಧನ್ಯವಾದ ಅರ್ಪಿಸಲಾಗುವುದು. ನಮ್ಮ ಜನಾಂಗದ ನಾಯಕರು, ಸರ್ಕಾರ ಕೈಗೊಂಡಿರುವ ತೀರ್ಮಾನ ಒಳ್ಳೆಯದಾಗಿದೆ ಎಂದರು.
ನಮ್ಮ ಅವಧಿ ಸೇರಿದಂತೆ ಕಳೆದ ಐದು ವರ್ಷದ ಆರ್ಥಿಕ ನಷ್ಟ, ದುರಾಡಳಿತವನ್ನು ತನಿಖೆ ಮಾಡಲಿ. ತಪ್ಪಾಗಿದ್ದರೆ ತಲೆ ತಗ್ಗಿಸಬೇಕಾಗುತ್ತದೆ ಎಂದು ಹೇಳಿದರು.
ಶುಭದಿನ:
ಒಕ್ಕಲಿಗರ ಸಂಘಕ್ಕೆ ಆಡಳಿತಾಧಿಕಾರಿ ನೇಮಕವಾಗಿರುವುದು ಶುಭದಿನವಾಗಿದೆ. ಇದು ಯಾವಾಗಲೋ ಆಗಬೇಕಾಗಿತ್ತು. ಮೆಡಿಕಲ್, ಇಂಜನಿಯರಿಂಗ್ ಸೀಟುಗಳಲ್ಲಿ ನಿರ್ದೇಶಕರು ಖೋಟಾ ಪದ್ಧತಿ ಮಾಡಿಕೊಂಡಿದ್ದರಿಂದ ಸಂಘಕ್ಕೆ ಭಾರೀ ನಷ್ಟವಾಗುತ್ತಿತ್ತು. ಸರ್ಕಾರ ಒಳ್ಳೆಯ ನಿರ್ಧಾರವನ್ನು ತೆಗೆದುಕೊಂಡು ದಿಟ್ಟ ಅಧಿಕಾರಿಯನ್ನು ಆಡಳಿತಾಧಿಕಾರಿಯನ್ನಾಗಿ ನೇಮಕ ಮಾಡಿದೆ ಎಂದರು.
ಅಪ್ಪಾಜಿಗೌಡರು ಅಧ್ಯಕ್ಷರಾಗಿದ್ದಾಗ 320 ಮಂದಿ ಹಾಗೂ ನಾನು ಅಧ್ಯಕ್ಷನಾಗಿದ್ದಾಗ 620 ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ. ಸಂಘ ಉಳಿಯಬೇಕಾದರೆ ಆಡಳಿತಾಧಿಕಾರಿ ನೇಮಕದ ಅಗತ್ಯವಿತ್ತು ಎಂದು ಹೇಳಿದರು.