ಕೊಡಗು ಜಿಲ್ಲೆಗೆ ನೂರು ಕೋಟಿ ಅನುದಾನ: ಸಿಎಂ

 

ಬೆಂಗಳೂರು, ಆ.21- ನೆರೆ ಪೀಡಿತ ಕೊಡಗು ಜಿಲ್ಲೆಗೆ ಈಗಾಗಲೇ ನೂರು ಕೋಟಿ ಅನುದಾನ ಘೋಷಿಸಲಾಗಿದೆ. ಅದೇ ರೀತಿ ನೆರೆಯಿಂದ ತೊಂದರೆಗೊಳಗಾಗಿರುವ ಚಿಕ್ಕಮಗಳೂರು, ಹಾಸನ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಿಗೂ ತಲಾ 25 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
ಗೃಹ ಕಚೇರಿ ಕೃಷ್ಣಾದಲ್ಲಿಂದು ಮುಖ್ಯಮಂತ್ರಿ ಪರಿಹಾರ ನಿಧಿಗೆ ವಿವಿಧ ಸಂಘ-ಸಂಸ್ಥೆಗಳ ಮೂಲಕ ಪರಿಹಾರದ ಚೆಕ್ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಡಗು ಜಿಲ್ಲೆಗೆ ಪ್ರತ್ಯೇಕವಾಗಿ ನೂರು ಕೋಟಿ ರೂ. ಅನುದಾನ ನೀಡಲಾಗುತ್ತಿದೆ. ಅದರಲ್ಲಿ ನಿನ್ನೆ 30 ಕೋಟಿ ರೂ.ನಷ್ಟು ಬಿಡುಗಡೆ ಮಾಡಲಾಗಿದೆ.

ಪ್ರತಿ ಕುಟುಂಬಕ್ಕೂ 3800ರೂ. ನೀಡಲಾಗುತ್ತಿದ್ದು, ತಾತ್ಕಾಲಿಕವಾಗಿ ಜೀವನಾವಶ್ಯಕ ವಸ್ತುಗಳನ್ನು ಖರೀದಿಸಲು ಮತ್ತು ದಿನನಿತ್ಯ ಅಗತ್ಯಗಳನ್ನು ನಿಭಾಯಿಸಿಕೊಳ್ಳಲು ಈ ಹಣ ಒದಗಿಸಲಾಗಿದೆ. ಮನೆ ಕಳೆದುಕೊಂಡವರಿಗೆ ತಲಾ 10ಸಾವಿರ ವೆಚ್ಚದಲ್ಲಿ ಸುಸಜ್ಜಿತವಾದ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿಕೊಡಲಾಗುವುದು.
ಮಳೆಯಿಂದಾಗಿ ಶಾಲಾ ಮಕ್ಕಳ ಪುಸ್ತಕಗಳು ಹಾಳಾಗಿವೆ. ಎಲ್ಲಾ ಮಕ್ಕಳಿಗೂ ಸರ್ಕಾರದ ವತಿಯಿಂದಲೇ ಉಚಿತ ಪಠ್ಯ ಪುಸ್ತಕಗಳನ್ನು ಸರಬರಾಜು ಮಾಡಲಾಗುವುದು. ಶಾಲಾ-ಕಾಲೇಜುಗಳಿಗೆ 20 ದಿನ ರಜೆ ಘೋಷಣೆ ಮಾಡಲಾಗಿದೆ. ಆ ಅವಧಿಯಲ್ಲಿನ ಪಾಠ, ಪ್ರವಚನಗಳನ್ನು ಸರಿದೂಗಿಸಲು ವಿಶೇಷ ಪಾಠದ ವ್ಯವಸ್ಥೆ ಮಾಡಲಾಗಿದ್ದು, ಅದಕ್ಕಾಗಿ ಸಮಯ ನಿಗದಿ ಮಾಡಲಾಗುತ್ತಿದೆ ಎಂದು ಹೇಳಿದರು.

7ಸಾವು, 4 ನಾಪತ್ತೆ:
ಕೊಡಗು ಜಿಲ್ಲೆಯಲ್ಲಿ ಮಳೆ ಅನಾಹುತದಿಂದ ಈವರೆಗೂ 7 ಮಂದಿ ಸಾವನ್ನಪ್ಪಿರುವ ಅಧಿಕೃತ ಮಾಹಿತಿ ಇದೆ. 4 ಮಂದಿ ನಾಪತ್ತೆಯಾಗಿದ್ದಾರೆ. ಉಳಿದಂತೆ ಯಾವುದೇ ಪ್ರಾಣ ಹಾನಿಯ ಬಗ್ಗೆ ಮಾಹಿತಿ ಇಲ್ಲ. ಸರ್ಕಾರದಿಂದ ವಿಶೇಷ ಸಹಾಯವಾಣಿ ಸ್ಥಾಪಿಸಲಾಗಿದೆ. ಅಲ್ಲಿಗೆ ಯಾರೂ ಸಂಪರ್ಕ ಮಾಡಿಲ್ಲ. ಕಾಣೆಯಾಗಿರುವ ಬಗ್ಗೆ ವಿಚಾರಣೆ ನಡೆದಿಲ್ಲ ಎಂದರು.
ಒಂದು ವೇಳೆ ಸರ್ಕಾರದ ಬಳಿ ಇರುವ ಮಾಹಿತಿಗಿಂತ ಹೆಚ್ಚುವರಿಯಾಗಿ ಬೇರೆ ಯಾರ ಬಳಿಯಾದರೂ ಪ್ರಾಣ ಹಾನಿ ಹಾಗೂ ಕಾಣೆಯಾದವರ ಬಗ್ಗೆ ಮಾಹಿತಿ ಇದ್ದರೆ ಅದನ್ನು ಸರ್ಕಾರಕ್ಕೆ ನೀಡಿ, ನಾವು ಪರಿಶೀಲನೆ ಮಾಡುತ್ತೇವೆ. ಅನಗತ್ಯವಾಗಿ ವದಂತಿಗಳನ್ನು ಹಬ್ಬಿಸಿ ಆತಂಕ ಮೂಡಿಸಬೇಡಿ ಎಂದು ಸಿಎಂ ಮನವಿ ಮಾಡಿದರು.

ನೆರೆ ಸಂತ್ರಸ್ತರಿಗೆ ಆಹಾರ ಸಾಮಗ್ರಿಗಳನ್ನು ಒದಗಿಸಲು ಸರ್ಕಾರಿ ವಾಹನಗಳನ್ನು ಬಳಸಲಾಗುತ್ತಿದೆ. ಪ್ರತಿ ಗ್ರಾಪಂ ಮತ್ತು ಹಳ್ಳಿಹಳ್ಳಿಗಳಿಗೆ ಸರ್ಕಾರದ ವಾಹನಗಳೇ ಬಟ್ಟೆ, ಊಟ, ಕುಡಿಯುವ ನೀರು ಸೇರಿದಂತೆ ಆಹಾರ ಸಾಮಗ್ರಿಗಳನ್ನು ನೇರವಾಗಿ ತಲುಪಿಸುತ್ತವೆ ಎಂದು ಹೇಳಿದರು.
ಮಳೆ ಹೆಚ್ಚಾದ ತಕ್ಷಣ ಕೆಲವರು ಮನೆಗಳನ್ನು ಬಿಟ್ಟು ಬೇರೆಡೆ ಹೋಗಿದ್ದಾರೆ. ಅಂತಹ ಮನೆಗಳನ್ನು ಹೊಂಚು ಹಾಕಿ ದರೋಡೆ ಮಾಡುತ್ತಿರುವ ಪ್ರಕರಣಗಳು ನನ್ನ ಗಮನಕ್ಕೆ ಬಂದಿದೆ. ಹೀಗಾಗಿ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದು, ಪ್ರತಿಯೊಂದು ಮನೆಗೂ ಗೃಹ ರಕ್ಷಕ ದಳದ ಸಿಬ್ಬಂದಿಯನ್ನು ನಿಯೋಜಿಸಿ ಭದ್ರತೆ ಒದಗಿಸಲಾಗುತ್ತಿದೆ. ಎಷ್ಟೇ ದೂರದಲ್ಲಿ ಮನೆ ಇದ್ದರೂ ಅಲ್ಲಿಗೆ ಒಬ್ಬ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸುವಂತೆ ಆದೇಶಿಸಲಾಗಿದ್ದು, ಜಿಲ್ಲಾಧಿಕಾರಿ ಅದರಂತೆ ಕ್ರಮ ಕೈಗೊಂಡಿದ್ದಾರೆ. ಯಾವುದೇ ಕಾರಣಕ್ಕೂ ಕಳ್ಳತನ ಪ್ರಕರಣಕ್ಕೆ ಅವಕಾಶ ಕೊಡುವುದಿಲ್ಲ ಎಂದರು.

ಸಂಘ-ಸಂಸ್ಥೆಗಳಿಗೆ ಹಣ ಕೊಡಬೇಡಿ:
ನೆರೆ ಸಂತ್ರಸ್ತರ ಹೆಸರಿನಲ್ಲಿ ದೇಣಿಗೆ ವಸೂಲಿ ಮಾಡಿ ದುರುಪಯೋಗ ಪಡಿಸಿಕೊಳ್ಳಲು ಅವಕಾಶ ನೀಡಬಾರದು. ಸಾರ್ವಜನಿಕರಿಗೆ ನೆರೆ ಸಂತ್ರಸ್ತರಿಗೆ ನೆರವಾಗಬೇಕು ಎಂಬ ಮನಸ್ಸಿದ್ದರೆ ನೇರವಾಗಿ ಮುಖ್ಯಮಂತ್ರಿ ಕಚೇರಿಯನ್ನು ಸಂಪರ್ಕಿಸಿ ಮುಖ್ಯಮಂತ್ರಿ ಪರಿಹಾರದ ನಿಧಿಗೆ ಚೆಕ್ ಮೂಲಕ ಸಹಾಯ ಮಾಡಿ. ಸಂಘ-ಸಂಸ್ಥೆಗಳಿಗೆ ನಗದು ನೀಡಬೇಡಿ. ಈ ಸಂದರ್ಭದಲ್ಲಿ ಇಂತಹ ದುರುಪಯೋಗಗಳು ಒಳ್ಳೆಯದಲ್ಲ ಎಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.
ಪುನರ್‍ವಸತಿ ಕಾರ್ಯಕ್ಕಾಗಿ ಸರ್ಕಾರ ಈಗಾಗಲೇ ಕ್ರಮ ಕೈಗೊಂಡಿದೆ. ಕುಶಾಲನಗರದಲ್ಲಿ ಸುಮಾರು 8 ಅಡಿ ನೀರು ನಿಂತಿತ್ತು. ಬೆಂಗಳೂರಿನಿಂದ ಹೆಚ್ಚುವರಿ ಸಿಬ್ಬಂದಿ ಕಳುಹಿಸಿ ನಿನ್ನೆಯೇ ಅದನ್ನು ತೆರವು ಮಾಡಲಾಗಿದೆ. ನಿರ್ವಸತಿಗರಿಗೆ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿಕೊಡಲು ಕೆಲಸ ಆರಂಭಿಸಿದ್ದು, ನಾಲ್ಕೈದು ದಿನಗಳಲ್ಲಿ ಒಂದು ಹಂತಕ್ಕೆ ಬರಲಿದೆ ಎಂದರು.

ಹೆಚ್ಚುವರಿಯಾಗಿ ಜಗದೀಶ್ ಎಂಬ ಜಿಲ್ಲಾಧಿಕಾರಿಯನ್ನು ಕೊಡಗಿಗೆ ನೇಮಿಸಲಾಗಿದೆ. ಒಂದು ವಾರದಿಂದ ಕಡಿತಗೊಂಡಿದ್ದ ವಿದ್ಯುತ್ ಸಂಪರ್ಕವನ್ನು ಸರಿಪಡಿಸಲಾಗಿದೆ. ನಿಂತ ನೀರನ್ನು ತೆರವುಗೊಳಿಸಿ ಕ್ರಿಮಿನಾಶಕಗಳನ್ನು ಸಿಂಪಡಿಸಿ ಸ್ವಚ್ಛತೆಗೆ ಆದ್ಯತೆ ನೀಡಲಾಗುತ್ತಿದ್ದು, ಸಾಂಕ್ರಾಮಿಕ ರೋಗ ಹರಡದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ