ಕೊಚ್ಚಿ: ಶತಮಾನದ ಭೀಕರ ಪ್ರವಾಹಕ್ಕೆ ತುತ್ತಾಗಿ ನಲುಗುತ್ತಿರುವ ಕೇರಳ ರಾಜ್ಯಕ್ಕೆ ಅರಬ್ ಸಂಯುಕ್ತ ಸಂಸ್ಥಾನ (ಯುಎಇ) 700 ಕೋಟಿ ರೂ. ನೆರವು ನೀಡುವ ಮೂಲಕ ಮಾನವೀಯತೆ ಮೆರೆದಿದ್ದು, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಧನ್ಯವಾದ ತಿಳಿಸಿದ್ದಾರೆ.
ನೆರೆಪೀಡಿತ ಕೇರಳ ಸಂತ್ರಸ್ತರು ಬದುಕು ಕಟ್ಟಿಕೊಳ್ಳಲು ದೇಶ-ವಿದೇಶದಿಂದ ನೆರವಿನ ಮಹಾಪೂರವೇ ಹರಿದು ಬರುತ್ತಿದ್ದು, ಯುಎಇ ನೀಡಿರುವ ನೆರವಿಗೆ ಮುಖ್ಯಮಂತ್ರಿ ವಿಜಯನ್ ಧನ್ಯವಾದ ತಿಳಿಸಿದ್ದಾರೆ. ಇನ್ನೂ ಹೆಚ್ಚಿನ ನೆರವು ನೀಡುವಂತೆ ಅಬುದಾಬಿ ಕಿಂಗ್ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಜತೆ ಮಾತುಕತೆ ನಡೆಸಿದ್ದಾರೆ.
ಯುಎಇ ಯಶಸ್ಸಿನಲ್ಲಿ ಕೇರಳದ ಜನರ ಪಾತ್ರ ಹಿಂದೆಯೂ ಇದೆ, ಮುಂದೆಯು ಇರಲಿದೆ. ಹಾಗಾಗಿ ಕೇರಳದ ಸಂತ್ರಸ್ತರಿಗೆ ಇಂಥ ಸಮಯದಲ್ಲಿ ಸಹಾಯ ಮಾಡುವ ವಿಶೇಷ ಜವಾಬ್ದಾರಿ ನಮ್ಮ ಮೇಲಿದೆ ಎಂದು ಯುಎಇ ಉಪಾಧ್ಯಕ್ಷ ಶೇಕ್ ಮೊಹಮ್ಮದ್ ಬಿನ್ ಅಲ್ ರಶೀದ್ ಅಲ್ ಮಕ್ತೌಮ್ ಕೆಲ ದಿನಗಳ ಹಿಂದೆ ಟ್ವೀಟ್ ಮಾಡಿ ನೆರವು ನೀಡಲು ಕೇಳಿಕೊಂಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ಮಧ್ಯಂತರ ಪರಿಹಾರವಾಗಿ 500 ಕೋಟಿ ರು. ಹಣ ನೀಡುವುದಾಗಿ ಘೋಷಿಸಿದ್ದರು, ಆದರೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಪರಿಹಾರ ಹಣ ಯಾವುದಕ್ಕೂ ಸಾಕಾಗುವುದಿಲ್ಲ, ಪ್ರವಾಹವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿರುವುದರಿಂದ ಮತ್ತಷ್ಟು ಹೆಚ್ಚಿನ ಪರಿಹಾರ ನೀಡಬೇಕು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ರಾಹುಲ್, ಮಾನ್ಯ ಪ್ರಧಾನಿಗಳೇ ಕೇರಳ ಜನರನ್ನು ಸಮಸ್ಯೆಯಲ್ಲಿ ಸಿಲುಕಲು ಬಿಡಬೇಡಿ ಎಂದು ಹೇಳಿದ್ದಾರೆ.
ಸೇನಾ ಎಂಜಿನೀಯರ್ ಗಳು ಪ್ರವಾಹ ಪರಿಹಾರಕ್ಕೆ ನಿಂತಿದ್ದು, ಕ್ಯಾಪ್ಟನ್ ಅಮನ್ ಠಾಕೂರ್ ಎರ್ನಾಕುಲಂ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ, ಈ ತಂಡ ಸುಮಾರು 2032 ನಾಗರಿಕರನ್ನು ಇದುವರೆಗೂ ರಕ್ಷಿಸಿದೆ, ಬಾರತೀಯ ಸೇನೆ ಇದುವರೆಗೂ 10629 ಮಂದಿಯನ್ನು ರಕ್ಷಿಸಿ, 49 ಸ್ಥಳಗಳಿಗೆ ಸಂಪರ್ಕ ಕಲ್ಪಿಸಿದ್ದಾರೆ.