
ನವದೆಹಲಿ: ಪ್ರಸಿದ್ದ ಧಾರಾವಾಹಿ ನಟಿ ಹಾಗೂ ಇಂಗ್ಲೀಷ್-ವಿಂಗ್ಲೀಷ್ ಚಿತ್ರದಲ್ಲಿ ದಿವಂಗತ ನಟಿ ಶ್ರೀದೇವಿ ಸಹೋದರಿಯಾಗಿ ನಟಿಸಿದ್ದ ಸುಜಾತಾ ಕುಮಾರ್ ಇಹಲೋಕ ತ್ಯಜಿಸಿದ್ದಾರೆ.
ಸುಜಾತಾ ಮೆಟಾಸ್ಟಟಿಕ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು. ಸುಜಾತಾ ಸಹೋದರಿ ಸುಚಿತ್ರಾ ಕೃಷ್ಣಮೂರ್ತಿ ಫೇಸ್ಬುಕ್ ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.
ಸುಜಾತಾ ಕ್ಯಾನ್ಸರ್ ನ ನಾಲ್ಕನೇ ಹಂತದಲ್ಲಿದ್ದರು. ಕೆಲ ಅಂಗಗಳು ಕೆಲಸ ನಿಲ್ಲಿಸಿದ್ದವು. ಇಂಗ್ಲೀಷ್-ವಿಂಗ್ಲೀಷ್ ಚಿತ್ರ ಬಿಡುಗಡೆಗೂ ಮುನ್ನ 2012ರಲ್ಲಿ ಸುಜಾತಾ ಕ್ಯಾನ್ಸರ್ ನಿಂದ ಗುಣಮುಖನಾಗಿದ್ದೇನೆಂದು ಹೇಳಿದ್ದರು. ಇಂಗ್ಲೀಷ್ ವಿಂಗ್ಲೀಷ್ ಮೊದಲು ಕೆಲ ಚಿತ್ರಗಳಲ್ಲೂ ಸುಜಾತಾ ನಟಿಸಿದ್ದರು.
ಸುಜಾತಾ, ಕಿರುತೆರೆಯ ‘ಹೋಟೆಲ್ ಕಿಂಗ್ಸ್ಟನ್’ ಹಾಗೂ ‘ಬಾಂಬೆ ಟಾಕಿಂಗ್’ ರಿಯಾಲಿಟಿ ಶೋಗಳಲ್ಲಿ ನಟಿಸಿದ್ದರು. ಇಂಗ್ಲಿಷ್ ವಿಂಗ್ಲಿಷ್ ಚಿತ್ರ ಸೇರಿದಂತೆ ‘ರಂಜನಾ’, ‘ಸಲಾಮ್-ಇ-ಇಷ್ಕ್’ ಮತ್ತು ‘ಗೋರಿ ತೆರೆ ಪ್ಯಾರ್ ಮೇನ್’ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು.