ಬೆಂಗಳೂರು: ನೀರ್ದೋಸೆ’ ಚಿತ್ರದ ಯಶಸ್ಸಿನ ನಂತರ ನಿರ್ದೇಶಕ ವಿಜಯ ಪ್ರಸಾದ್ ಮತ್ತು ನಟ ಜಗ್ಗೇಶ್ ತೋತಾಪುರಿ ಮೂಲಕ ಒಂದಾಗಿದ್ದಾರೆ. ಶಿವಲಿಂಗ ಖ್ಯಾತಿಯ ಕೆ,ಎ ಸುರೇಶ್ ತೋತಾಪುರಿ ನಿರ್ಮಾಪಕರಾಗಿದ್ದಾರೆ. ಟೈಟಲ್ ನಲ್ಲೇ ಸಾಕಷ್ಟು ಕುತೂಹಲ ಮೂಡಿಸಿರುವ ತೋತಾಪುರಿ ಎಂಬುದು ಮಾವಿನ ಹಣ್ಣಿನ ತಳಿಯಾಗಿದೆ. ಜಗ್ಗೇಶ್ ಅವರಿಗೆ ಮತ್ತೂಂದು ವಿಭಿನ್ನ ಚಿತ್ರ ಸಿಕ್ಕಂತಾಗಿದೆ. “ತೋತಾಪುರಿ’ ಚಿತ್ರಕ್ಕೆ “ತೊಟ್ ಕೀಳ್ಬೇಕಷ್ಟೇ’ ಎಂಬ ಟ್ಯಾಗ್ಲೈನ್ ಕೂಡಾ ಇದೆ.
ತೋತಾಪುರಿ’ಯಲ್ಲಿ ವಿಜಯ ಪ್ರಸಾದ್ ಏನು ಹೇಳಲು ಹೊರಟಿದ್ದಾರೆಂದು ನೀವು ಕೇಳಬಹುದು. ಈ ಬಾರಿಯೂ ವಿಜಯಪ್ರಸಾದ್ ಒಂದು ವಿಭಿನ್ನವಾದ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.
ಕಾಮಿಡಿ, ಡ್ರಾಮಾ, ವಿಡಂಬನಾತ್ಮಕವಾಗಿ ಸಾಗುವ ಈ ಕಥೆಯಲ್ಲಿ ಜಗ್ಗೇಶ್ ಕೃಷಿಕನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈಗಾಗಲೇ ಜಗ್ಗೇಶ್ ಅವರ ಗೆಟಪ್ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಚಿತ್ರದ ಶೀರ್ಷಿಕೆಯ ಬಗ್ಗೆ ಮಾತನಾಡುವ ನಿರ್ದೇಶಕ ವಿಜಯಪ್ರಸಾದ್, “ಟೈಟಲ್ ಕಥೆಗೆ ಅನುಗುಣವಾಗಿದೆ. ಶೀರ್ಷಿಕೆಯಲ್ಲಿ ಆಕರ್ಷಣೆ ಇರಬೇಕೆಂಬುದು ಒಂದು ಕಾರಣವಾದರೆ, ಕಥೆಗೆ “ತೋತಾಪುರಿ’ ತುಂಬಾ ಸೂಕ್ತವಾಗಿದೆ. ಸಿನಿಮಾ ನೋಡಿದ ಮೇಲೆ ನಿಮಗೆ ಮನದಟ್ಟಾಗುತ್ತದೆ’ ಎನ್ನುವುದು ಜಗ್ಗೇಶ್ ಮಾತು.
ಸಮಾಜದಲ್ಲಿರುವ ಜಾತಿ ರಾಜಕಾರಣದ ಬಗ್ಗೆ ಸಿನಿಮಾದಲ್ಲಿ ವಿಡಂಬನಾತ್ಮಕವಾಗಿ ಚಿತ್ರಿಸಲಾಗಿದೆ, ಜಾತಿ ಹಾಗೂ ಮೈ ಬಣ್ಣ ಹೇಗೆ ಸಮಾಜದಲ್ಲಿ ಪಾತ್ರ ವಹಿಸುತ್ತದೆ ಎಂಬ ಬಗ್ಗೆ ಚಿತ್ರದಲ್ಲಿ ಹೇಳಲಾಗುತ್ತದೆ,
ತಮ್ಮ ಪಾತ್ರಗಳ ಆಯ್ಕೆಯಲ್ಲಿ ಚ್ಯೂಸಿಯಾಗಿರುವ ಜಗ್ಗೇಶ್, ತಮ್ಮ ಸಂವೇದನಾ ಶೀಲತೆಗೆ ಹೊಂದಿಕೊಳ್ಳುವ ಪಾತ್ರ ಇದಾಗಿದ್ದರಿಂದ ಸಿನಿಮಾಗೆ ಸಹಿ ಮಾಡಿದ್ದೇನೆ, ನನ್ನ ನಟನೆಗೆ ಚಿತ್ರದಲ್ಲಿ ಸ್ಕೋಪ್ ಇದೆ, ಅದಕ್ಕಾಗಿ ನಾನು ಒಪ್ಪಿಕೊಂಡೆ, ರಾಜ್ ಕುಮಾರ್ ಅನುಯಾಯಿಯಾಗಿರುವ ನಾನು, ಪಾತ್ರಕ್ಕೆ ವಯಸ್ಸು ಮುಖ್ಯವಲ್ಲ ಎಂಬುದನ್ನು ಮನಗಂಡಿರುವುದಾಗಿ ತಿಳಿಸಿದ್ದಾರೆ.