ಜನರ ರಕ್ಷಣೆಗೆ ಸ್ಥಳೀಯ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕಾರ್ಯ: ಸಿಎಂ

 

ಬೆಂಗಳೂರು, ಆ.20- ಕೊಡಗಿನಲ್ಲಿ ಪ್ರವಾಹ ಹಾಗೂ ಭೂ ಕುಸಿತಕ್ಕೆ ಸಿಲುಕಿರುವ ಜನರ ರಕ್ಷಣೆಗೆ ಸ್ಥಳೀಯ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿಗಳು, ನಾನು ಮತ್ತು ಮುಖ್ಯಕಾರ್ಯದರ್ಶಿಗಳು ಪ್ರತಿ ಗಂಟೆಗೊಮ್ಮೆ ಪರಿಸ್ಥಿತಿಯ ಪರಮರ್ಶಿಸುತ್ತಿದ್ದೇವೆ. ಸಹಜ ಸ್ಥಿತಿಗೆ ಮರಳುವವರೆಗೂ ಪರಿಸ್ಥಿತಿ ನಿಯಂತ್ರಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಎರಡು ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡು ಹಿಂದಿರುಗಿದ್ದೇನೆ. ಶೀಘ್ರದಲ್ಲೇ ಮತ್ತೊಮ್ಮೆ ಅಲ್ಲಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಹೇಳಿದರು.
ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿಗಳು ಕೊಡಗಿನ ಪರಿಸ್ಥಿತಿ ಕುರಿತು ಕಾಳಜಿ ವಹಿಸಿ ನೈತಿಕ ಸ್ಥೈರ್ಯ ತುಂಬಿರುವುದಲ್ಲದೆ, ನೆರವು ನೀಡುವ ಭರವಸೆ ಕೊಟ್ಟಿದ್ದಾರೆ. ರಕ್ಷಣಾ ಸಚಿವರು ಸಹ ಒದಗಿರುವ ಸಂಕಷ್ಟಕ್ಕೆ ಕೂಡಲೇ ಸ್ಪಂದಿಸಿದ್ದಾರೆ ಎಂದು ವಿವರಿಸಿದರು.
ರಕ್ಷಣಾ ಕಾರ್ಯದಲ್ಲಿ ಸೇನಾಪಡೆಗಳು, ಎನ್‍ಡಿಆರ್‍ಎಫ್, ರಾಜ್ಯ ಪೆÇಲೀಸ್ ಇಲಾಖೆ, ಕೆಎಸ್‍ಆರ್‍ಪಿ, ಅಗ್ನಿಶಾಮಕದಳ, ಅರಣ್ಯ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಸಿಬ್ಬಂದಿಗಳು ಜನರ ರಕ್ಷಣೆ ಹಾಗೂ ಆಶ್ರಯ ಒದಗಿಸುವ ನಿಟ್ಟಿನಲ್ಲಿ ಸಮನ್ವಯದಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಸಂಪುಟ ಸಹೋದ್ಯೊಗಿಗಳಾದ ಆರ್.ವಿ.ದೇಶಪಾಂಡೆ, ಸಾ.ರಾ.ಮಹೇಶ್, ಎಚ್.ಡಿ.ರೇವಣ್ಣ, ಕೆ.ಜೆ.ಜಾರ್ಜ್, ಯು.ಟಿ.ಖಾದರ್, ಜಯಮಾಲಾ, ಡಿ.ಸಿ.ತಮ್ಮಣ್ಣ ಮತ್ತಿತರರು ಕೊಡಗು ಹಾಗೂ ತಮ್ಮ ಉಸ್ತುವಾರಿ ಜಿಲ್ಲೆಗಳಲ್ಲಿರುವ ಸೂಕ್ಷ್ಮ ಪರಿಸ್ಥಿತಿ ಗಮನಿಸಿ ರಕ್ಷಣೆ ಹಾಗೂ ಪರಿಹಾರ ಕಾರ್ಯಗಳಿಗೆ ಬೆಂಬಲವಾಗಿ ನಿಂತಿದ್ದಾರೆ. ಎಲ್ಲರ ಸಹಕಾರದಿಂದ ಅಲ್ಲಿನ ಜನರ ಪುನರ್ವಸತಿ ಕಾರ್ಯಗಳು ಯಶಸ್ವಿಯಾಗಿ ನಡೆಯುವ ವಿಶ್ವಾಸವಿದೆ ಎಂದು ಸಿಎಂ ಹೇಳಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ