ನಿರಾಶ್ರಿತ ಕೇಂದ್ರಗಳಲ್ಲಿ ವಿದ್ಯಾರ್ಥಿಗಳ ತೊಳಲಾಟ

 

ಬೆಂಗಳೂರು, ಆ.20- ಪ್ರಕೃತಿ ವಿಕೋಪಕ್ಕೆ ತುತ್ತಾಗಿರುವ ಕೊಡಗು ಜಿಲ್ಲೆಯ ನಿರಾಶ್ರಿತ ಕೇಂದ್ರಗಳಲ್ಲಿರುವ ಮಕ್ಕಳು, ವಿದ್ಯಾರ್ಥಿಗಳು ಶಾಲೆಗೆ ತೆರಳಲಾಗದೆ ತೊಳಲಾಡುತ್ತಿದ್ದಾರೆ.
ಮನೆ ಮಠ, ಆಸ್ತಿ ಕಳೆದುಕೊಂಡಿರುವವರು ಏನು ಮಾಡಬೇಕೆಂದು ತೋಚದೆ ತಲೆ ಮೇಲೆ ಕೈಹೊತ್ತು ಕುಳಿತಿದ್ದಾರೆ. ನಮಗೆ ಪುಸ್ತಕ ಕೊಡಿಸಿ, ಬ್ಯಾಗ್ ನೀಡಿ ಪ್ಲೀಸ್ ಹೆಲ್ಪ್ ಮಾಡಿ ಎಂದು ಮಕ್ಕಳು ಬೇಡಿಕೊಳ್ಳುತ್ತಿರುವ ದೃಶ್ಯ ಒಂದೆಡೆಯಾದರೆ, ನಮ್ಮ ಕಣ್ಣೆದುರೇ ಮನೆಗಳು ನೆಲಸಮವಾಗಿವೆ, ಕಷ್ಟಪಟ್ಟು ಮಾಡಿದ ತೋಟಗಳು ಕೊಚ್ಚಿಹೋಗಿವೆ. ಮನೆ ಕಟ್ಟಿಕೊಳ್ಳಬೇಕು, ಏನಾದರೂ ಸಹಾಯ ಮಾಡಿ ಎಂದು ಹಲವರು ಅಂಗಲಾಚುತ್ತಿದ್ದಾರೆ.
ಕಳೆದ ಹಲವು ದಿನಗಳಿಂದ ಶಾಲೆಗೆ ಹೋಗದೆ ನಿರಾಶ್ರಿತ ಕೇಂದ್ರಗಳಲ್ಲಿ ಉಳಿದಿರುವ ಮಕ್ಕಳನ್ನು ನೋಡಿ ಪೆÇೀಷಕರ ನೋವು ಹೇಳತೀರದಾಗಿದೆ.
ಕೊಡಗು, ವಿರಾಜಪೇಟೆ, ಕುಶಾಲನಗರ, ಮಡಿಕೇರಿ ಗ್ರಾಮೀಣ ಭಾಗಗಳು ಸೇರಿದಂತೆ ಸುಮಾರು 41 ಕಡೆ ಇರುವ ನಿರಾಶ್ರಿತ ಶಿಬಿರಗಳಲ್ಲಿರುವ ಬಹುತೇಕ ಮಂದಿಯ ಕಥೆಯೂ ಇದೇ ಆಗಿದೆ. ಕಳೆದ 10 ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಗುಡ್ಡ ಕುಸಿದು ರಸ್ತೆ ಸಂಪರ್ಕ ಕಡಿತಗೊಂಡು ಮನೆ ತೋಟ ಕಣ್ಣೆದುರೇ ಕೊಚ್ಚಿ ಹೋಗಿದ್ದರಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ಜನ ನಿರಾಶ್ರಿತರಾಗಿ, ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ. ಅವರ ಬದುಕು ಬರ್ಬಾದ್ ಆಗಿದೆ. ಅವರ ಮಕ್ಕಳ ಭವಿಷ್ಯ ಅತಂತ್ರವಾಗಿದೆ.

ನಿರಾಶ್ರಿತರ ಶಿಬಿರದಲ್ಲಿ ಮಕ್ಕಳ, ವೃದ್ಧರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಅವರ ಮಕ್ಕಳು ಇವರಿಗೆ ಹೇಗೆ ಪುನರ್ವಸತಿ ಕಲ್ಪಿಸುವುದು, ಮಕ್ಕಳ ಭವಿಷ್ಯ ರೂಪಿಸುವುದು ಹೇಗೆ ಎಂಬ ಯೋಚನೆಯಲ್ಲಿ ತೊಡಗಿದ್ದಾರೆ. ತಾತ್ಕಾಲಿಕವಾಗಿ ಊಟ, ವಸತಿ ಕಲ್ಪಿಸಲಾಗಿದೆ. ಆದರೆ ಮುಂದೇನು ಎಂಬ ಭೀತಿ ಅವರನ್ನು ಕಾಡುತ್ತಿದೆ. ಸರ್ವಸ್ವವನ್ನು ಕಳೆದುಕೊಂಡಿದ್ದೇವೆ. ಹೊಸ ಬದುಕನ್ನು ಕಟ್ಟಿಕೊಳ್ಳಬೇಕಾಗಿದೆ. ಭಗವಂತನೇ ನಮಗೆ ದಿಕ್ಕು ಎಂದು ಮೊರೆ ಇಡುತ್ತಿದ್ದಾರೆ.
ಇದು ನಿರಾಶ್ರಿತರ ಶಿಬಿರಗಳ ಪರಿಸ್ಥಿತಿಯಾದರೆ ಭಾರಿ ಮಳೆಯಿಂದ ಹೆಚ್ಚಿನ ಅನಾಹುತಕ್ಕೊಳಗಾಗಿರುವ ಸೋಮವಾರಪೇಟೆ ತಾಲೂಕಿನ ವಿವಿಧ ಭಾಗಗಳ ದೂರದ ಗ್ರಾಮಗಳನ್ನು ರಕ್ಷಣಾ ಪಡೆಗಳು ತಲುಪಲು ಇನ್ನೂ ಸಾಧ್ಯವಾಗಿಲ್ಲ. ಆ ಪ್ರದೇಶಗಳಲ್ಲಿ ನಾಪತ್ತೆಯಾಗಿರುವವರ ಸಂಖ್ಯೆ ಹೆಚ್ಚಾಗಿದೆ ಎಂಬ ಆತಂಕ ಮೂಡಿದೆ.

ಇನ್ನೂ ಕೊಡಗಿನಲ್ಲಿ ಎಷ್ಟು ಜನ ಸಂಕಷ್ಟದಲ್ಲಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಸಿಕ್ಕಿಲ್ಲ. ಭೂ ಕುಸಿತದಲ್ಲಿ ಎಷ್ಟು ಜನ ಸಾವನ್ನಪ್ಪಿದ್ದಾರೆ ಎಂಬುದು ಕೂಡ ತಿಳಿದುಬಂದಿಲ್ಲ. ಮಳೆ ನಿಂತು ನಿಂತು ಬರುತ್ತಿದೆ. ಇದು ರಕ್ಷಣಾ ಕಾರ್ಯಕ್ಕೆ ಅಡ್ಡಿಯನ್ನುಂಟು ಮಾಡುತ್ತಿದೆ. ಹರಸಾಹಸ ಮಾಡಿ ಪ್ರವಾಹದಲ್ಲಿ ಸಿಲುಕಿರುವವರನ್ನು ರಕ್ಷಣೆ ಮಾಡಲಾಗುತ್ತಿದೆ.
ಕೊಡಗಿನ ಮಾದಾಪುರದಲ್ಲಿ ನಿವೃತ್ತ ಸೈನಿಕನೋರ್ವನ 10 ಎಕರೆ ಕಾಫಿತೋಟ ಮತ್ತು ಮನೆ ಗುಡ್ಡ ಕುಸಿತದಿಂದ ನೆಲಸಮವಾಗಿದೆ. ಸೇನೆಯಲ್ಲಿ ನಿವೃತ್ತಿ ಪಡೆದ ನಂತರ 35 ಲಕ್ಷ ರೂ. ಖರ್ಚು ಮಾಡಿ ನಿರ್ಮಿಸಿದ ಮನೆ, ಪೂರ್ವಜರಿಂದ ಬಂದ 10 ಎಕರೆ ತೋಟ ಸಂಪೂರ್ಣ ನಾಶವಾಗಿ ಈತ ನಿರಾಶ್ರಿತರ ಶಿಬಿರ ಸೇರಿರುವುದು ಮಳೆಯ ಭೀಕರತೆಯನ್ನು ತೋರಿಸುತ್ತದೆ.

ಭೀಕರ ಮಳೆಯಿಂದ ಕೊಡಗು ಭಾಗಶಃ ನಾಶವಾಗಿದ್ದು, ಆಗಿರುವ ಆಸ್ತಿಪಾಸ್ತಿ ಹಾನಿ ಬಗ್ಗೆ ಇನ್ನೂ ನಿಖರವಾಗಿ ಲೆಕ್ಕಹಾಕಲು ಅಧಿಕಾರಿಗಳಿಗೆ ಸಾಧ್ಯವಾಗಿಲ್ಲ.
ಈಗ ಅಧಿಕಾರಿಗಳ ತಂಡ ಸಮೀಕ್ಷೆ ನಡೆಸಲು ಮುಂದಾಗಿದೆ. ವಸತಿ ರಹಿತರಿಗೆ ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಾಣ ಮಾಡಲು ಜಿಲ್ಲಾಡಳಿತ ಮುಂದಾಗಿದೆ.
ಶತಮಾನದಲ್ಲೇ ಕಂಡುಕೇಳರಿಯಷ್ಟು ವರುಣ ಕೊಡಗಿನಲ್ಲಿ ಆರ್ಭಟ ನಡೆಸಿದ್ದರಿಂದ ಪ್ರವಾಹದಲ್ಲಿ ಕೊಚ್ಚಿ ಹೋದ ಮನೆ ಮಠದ ಜೊತೆಗೆ ಬದುಕನ್ನು ಕಟ್ಟಿಕೊಳ್ಳುವ ಸವಾಲು ಕೊಡವರಿಗೆ ಈಗ ಎದುರಾಗಿದೆ.

ಬೆವರು ಹರಿಸಿ ಸಂಪಾದಿಸಿದ ಜಮೀನು, ಹಿರಿಯರು ಬಾಳಿ ಬದುಕಿನ ಮನೆ ಕಣ್ಣಮುಂದೆಯೇ ಕೊಚ್ಚಿ ಹೋದುದನ್ನು ಕಂಡು ಮಾನಸಿಕವಾಗಿ ಆಘಾತಕ್ಕೊಳಗಾಗಿರುವ ಇಲ್ಲಿನ ಜನ ಚೇತರಿಸಿಕೊಳ್ಳಲು ಅದೆಷ್ಟು ದಿನ ಬೇಕು ಎಂಬುದನ್ನು ಊಹಿಸಲು ಅಸಾಧ್ಯ.
ವೃದ್ಧೆಯ ರಕ್ಷಣೆ:
ಮಡಿಕೇರಿ ಸಮೀಪದ ಗ್ರಾಮವೊಂದರಲ್ಲಿ 85 ವರ್ಷದ ಅಜ್ಜಿಯೊಬ್ಬರು ಮೃತಪಟ್ಟಿದ್ದಾರೆ ಎಂದು ಅವರ ಬಾಯಿಗೆ ನೀರು ಬಿಟ್ಟು ಅವರ ಮೊಮ್ಮಗ ಪವನ್ ಎಂಬವರು ಮನೆ ತೊರೆದು ಬಂದಿದ್ದರು. ಈ ಬಗ್ಗೆ ಎಸ್.ಪಿ.ಅವರಿಗೆ ಸುದ್ದಿ ಮುಟ್ಟಿಸಿದ್ದರು. ರಕ್ಷಣಾ ಪಡೆಯವರಿಗೆ ಸುದ್ದಿ ತಿಳಿಸಿದಾಗ ಸ್ಥಳಕ್ಕೆ ಧಾವಿಸಿದ ರಕ್ಷಣಾ ಪಡೆ 85 ವರ್ಷ ವೃದ್ದೆಯನ್ನು ರಕ್ಷಿಸಿದ್ದಾರೆ. ಅವರು ಜೀವಂತವಾಗಿದ್ದು ಇದೀಗ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇನ್ನೊಂದು ಕಡೆ ಇಬ್ಬರು ವಿಕಲಚೇತನರನ್ನು ಯುವಕರ ತಂಡವೊಂದು ಹೆಗಲ ಮೇಲೆ ಹೊತ್ತು ತಂದಿದೆ.
ಮುಕ್ಕೋಡು ಗ್ರಾಮದ ಗುಡ್ಡದಲ್ಲಿ ಸಿಲುಕಿ ಸಣ್ಣ ಕೊಠಡಿಯಲ್ಲಿದ್ದ ಮಾಜಿ ಯೋಧರ ನಾಲ್ಕು ಮಕ್ಕಳು ಸೇರಿದಂತೆ 9 ಮಂದಿಯನ್ನು ಎನ್‍ಡಿಆರ್‍ಎಫ್ ತಂಡ ರಕ್ಷಣೆ ಮಾಡಿದೆ.

ಶಾಲಾ ಕಾಲೇಜುಗಳಿಗೆ ರಜೆ:
ಮುನ್ನೆಚ್ಚರಿಕೆ ಕ್ರಮವಾಗಿ ಇನ್ನೆರಡು ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಕೊಡಗಿನಲ್ಲಿ ಮಳೆ, ಗುಡ್ಡ ಕುಸಿತ ಮತ್ತೆ ಮುಂದುವರಿದಿದೆ. 3300 ವಿದ್ಯುತ್ ಕಂಬಗಳು ನೆಲಸಮವಾಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನಿರಂತರ ಮಳೆಯಿಂದ ಪ್ರವಾಹ ಹೆಚ್ಚಾಗತೊಡಗಿದೆ. ಗಾಳಿಬೀಡು ಎಂಬಲ್ಲಿ ಮನೆಗಳು ಬೀಳುವ ಪರಿಸ್ಥಿತಿ ಎದುರಾಗಿರುವುದರಿಂದ ಜನ ಮನೆ ಬಿಟ್ಟು ಹೊರಬರುತ್ತಿದ್ದಾರೆ. ಇದ್ದಕ್ಕಿದ್ದಂತೆ ಜನರು ತೊಟ್ಟ ಬಟ್ಟೆಯಲ್ಲಿಯೇ ಮನೆ ಬಿಟ್ಟು ಬಂದು ನಿರಾಶ್ರಿತರ ಕೇಂದ್ರ ಸೇರಿರುವ ಜನರಿಗೆ ಮನೆಗಳ್ಳರ ಭೀತಿ ಕಾಡತೊಡಗಿದೆ. ಅಲ್ಲಿ ಮನೆ ಬಿಟ್ಟು ಬಂದಿದ್ದೇವೆ, ಪರಿಸ್ಥಿತಿಯ ಲಾಭ ಪಡೆದುಕೊಳ್ಳುವ ಕೆಲವರು ಕಳ್ಳತನ ಮಾಡಿದರೆ ಹೇಗೆ ? ಎಂದು ಹಲವರು ಆತಂಕಕ್ಕೊಳಗಾಗಿದ್ದಾರೆ.

ಹರಿದು ಬಂದ ನೆರವು:
ಈ ಎಲ್ಲದರ ನಡುವೆ ಸಂತ್ರಸ್ತರ ನೆರವಿಗೆ ರಾಜ್ಯದ ಜನ ಮುಂದೆ ಬಂದಿದ್ದಾರೆ. ಚಿಕ್ಕಬಳ್ಳಾಪುರ, ಗದಗ, ಚಿಕ್ಕಮಗಳೂರು, ಬೆಂಗಳೂರು, ಬೆಳಗಾವಿ ಸೇರಿದಂತೆ ಬಹುತೇಕ ಕಡೆಗಳಿಂದ ವಿವಿಧ ರೂಪಗಳಲ್ಲಿ ನೆರವಿನ ಮಹಾಪೂರ ಹರಿದುಬರುತ್ತಿದೆ.
ಮನೆ ತೋಟ ನೆಲಸಮ:
ನೋಡನೋಡುತ್ತಿದ್ದಂತೆಯೇ ಬೆಟ್ಟ ಗುಡ್ಡಗಳು ಪ್ರಪಾತಕ್ಕೆ ಕುಸಿಯುತ್ತಿವೆ. ಕಾಫಿ ಏಲಕ್ಕಿ ತೋಟಗಳು ಕೊಚ್ಚಿ ಹೋಗಿವೆ. ವಿದ್ಯುತ್, ನೀರು, ರಸ್ತೆ ಸಂಪರ್ಕವಿಲ್ಲದೆ ಜನ ತತ್ತರಿಸಿದ್ದಾರೆ. ಜೀವಭಯದಲ್ಲಿ ರಾತ್ರಿ ಕಳೆಯುವ ಪರಿಸ್ಥಿತಿ ಉಂಟಾಗಿದೆ. ಕೊಡಗಿಗೆ ಹೊಂದಿಕೊಂಡಂತಿರುವ ಮಾಗೇರಿ, ಇಜ್ಜನಹಳ್ಳಿ, ಪಟ್ಲ, ತಂಬಲಿಗೆರೆ, ಅಜ್ಜಿಗದ್ದೆ, ಓಡಳ್ಳಿ,ಕಾಗಿನೆಲೆ, ಬಾಳೆಹಳ್ಳ ಸಮೀಪ ಭೂ ಕುಸಿತ ಉಂಟಾಗಿದೆ. ತಂಬಲಿಗೆರೆ, ಗರನಹಳ್ಳಿ ನದಿ ತುಂಬಿ ಹರಿಯುತ್ತಿದ್ದು, ನದಿ ಪಕ್ಕದ ನಿವಾಸಿಗಳು ಆತಂಕದಲ್ಲಿದ್ದಾರೆ.

ಬಿಸಿಲೆ ಅಡ್ಲಗದ್ದೆ ಗ್ರಾಮದಲ್ಲಿ ಆಗಾಗ ಭೂ ಕುಸಿತ ಸಂಭವಿಸುತ್ತಿದೆ. ಓಡಳ್ಳಿ ಗ್ರಾಮದ ದೇವಪ್ಪ ಅವರ 8 ಹೆಕ್ಟೇರ್, ತಿಮ್ಮಪ್ಪ ಅವರ 2, ರಮೇಶ್ ಅವರ 2, ಶಂಬುಗೌಡ, 1, ಪುಟ್ಟಸ್ವಾಮಿ 4, ಡಿ.ಎಸ್. ಮಂಜುನಾಥ್ ಅವರ 2 ಹೆಕ್ಟೇರ್ ಕಾಫಿ ತೋಟಕ್ಕೆ ಗವಿಬೆಟ್ಟದ ಗುಡ್ಡ ಕುಸಿದು ಕಾಫಿ ಏಲಕ್ಕಿ ತೋಟ ಸಂಪೂರ್ಣ ನಾಶವಾಗಿದೆ ಎಂದು ತಿಳಿದುಬಂದಿದೆ.
ಅದೇ ರೀತಿ ಹಲವು ಗದ್ದೆಗಳು ಜಲಾವೃತಗೊಂಡು, ಸಾಕಷ್ಟು ಬೆಳೆಹಾನಿ ಉಂಟಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ