ಬಿಬಿಎಂಪಿ ಬಿಜೆಪಿ ಸದಸ್ಯರಿಂದ ಎರಡು ತಿಂಗಳ ವೇತನ ಕೊಡಗು ಪ್ರವಾಹ ಸಂತ್ರಸ್ತರಿಗೆ

 

ಬೆಂಗಳೂರು,ಆ.20- ಬಿಬಿಎಂಪಿಯ 99 ಬಿಜೆಪಿ ಸದಸ್ಯರು ತಮ್ಮ ಎರಡು ತಿಂಗಳ ವೇತನವನ್ನು ಕೊಡಗು ಜಿಲ್ಲೆಯ ಪ್ರವಾಹ ಸಂತ್ರಸ್ತರಿಗೆ ನೀಡಲು ತೀರ್ಮಾನಿಸಿದ್ದಾರೆ.
ಪಾಲಿಕೆಯಲ್ಲಿ 100 ಮಂದಿ ಬಿಜೆಪಿ ಸದಸ್ಯರಿದ್ದು, ಆರ್.ಪೂರ್ಣಿಮಾ ಅವರು ಶಾಸಕರಾದ ನಂತರ ಪಾಲಿಕೆಯ ಗೌರವಧನ ಬೇಡವೆಂದಿದ್ದಾರೆ. ಹಾಗಾಗಿ 99 ಮಂದಿ ಪಾಲಿಕೆ ಬಿಜೆಪಿ ಸದಸ್ಯರಿದ್ದು, ಇವರ ಎರಡು ತಿಂಗಳ ವೇತನವನ್ನು ಸಂತ್ರಸ್ತರಿಗೆ ನೀಡಲು ಸಮ್ಮತಿಸಿದ್ದಾರೆ ಎಂದು ಪಾಲಿಕೆ ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ತಿಳಿಸಿದ್ದಾರೆ.
ಈ ಮೊದಲು ಒಂದು ತಿಂಗಳ ವೇತನವನ್ನು ನೀಡುವಂತೆ ಮೇಯರ್ ಅವರು ಮನವಿ ಮಾಡಿದ್ದರು. ಇದಕ್ಕೆ ಸಮ್ಮತಿ ಕೂಡ ನೀಡಿದ್ದೆವು. ಆದರೆ ನಮ್ಮ ನಾಯಕರಾದ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬಿಜೆಪಿ 99 ಸದಸ್ಯರು ಎರಡು ತಿಂಗಳ ವೇತನವನ್ನು ತೀರ್ಮಾನ ಕೈಗೊಳ್ಳಲಾಗಿದೆ. ಅದರಂತೆ ಎಲ್ಲಾ ಬಿಜೆಪಿ ಸದಸ್ಯರು ವೇತನ ನೀಡಲು ಸಮ್ಮತಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಆಯುಕ್ತರನ್ನು ಭೇಟಿ ಮಾಡಿ ಅನುಮತಿ ಪತ್ರವನ್ನು ನೀಡಲಾಗಿದೆ. ಇದಕ್ಕೆ ಅವರು ಕೂಡ ಒಪ್ಪಿದ್ದಾರೆ ಎಂದರು.
ಪ್ರಕೃತಿ ವಿಕೋಪಗಳಿಂದ ಸಂಕಷ್ಟಕ್ಕೀಡಾದ ಸಂತ್ರಸ್ತರ ಕಣ್ಣೀರು ಒರೆಸುವ ಕೆಲಸ ಪ್ರತಿಯೊಬ್ಬರು ಮಾಡಬೇಕಿದೆ. ಮನುಷ್ಯ ಮನುಷ್ಯನಿಗೆ ಕೈಲಾದ ಸಹಾಯ ಮಾಡಿದರೆ ಮಾನವೀಯತೆಗೆ ಅರ್ಥ ಬರುತ್ತದೆ. ಅಗತ್ಯಬಿದ್ದರೆ ಇನ್ನು ಹೆಚ್ಚಿನ ಸಹಾಯ ಮಾಡುವುದಾಗಿ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ