ಡೆಬ್ಯು ಪಂದ್ಯದಲ್ಲೇ ರಿಷಭ್ 5 ಕ್ಯಾಚ್ ದಾಖಲೆ

ನಾಟಿಂಗ್‌ಹ್ಯಾಮ್: ಪದಾರ್ಪಣಾ ಪಂದ್ಯದಲ್ಲೇ ವಿಕೆಟ್ ಹಿಂದುಗಡೆ ತಮ್ಮ ಜವಾಬ್ದಾರಿಯನ್ನು ಬಹಳ ಅಚ್ಚುಕಟ್ಟಾಗಿ ನಿಭಾಯಿಸಿರುವ ಭಾರತದ ಉದಯೋನ್ಮುಖ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್, ಐದು ಕ್ಯಾಚ್‌ಗಳನ್ನು ಹಿಡಿದಿದ್ದಾರೆ.

ಈ ಮೂಲಕ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ ಐದು ಕ್ಯಾಚ್‌ಗಳನ್ನು ಹಿಡಿದ ಮೊತ್ತ ಮೊದಲ ಭಾರತೀಯ ವಿಕೆಟ್ ಕೀಪರ್ ಎಂದೆನಿಸಿಕೊಂಡಿದ್ದಾರೆ.

ಟ್ರೆಂಟ್‌ಬ್ರಿಡ್ಜ್‌ನಲ್ಲಿ ಆತಿಥೇಯ ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ 20ರ ಹರೆಯದ ರಿಷಭ್ ತಮ್ಮ ಸಾಮರ್ಥ್ಯವನ್ನು ಮೆರೆದರು.

ಆರಂಭಿಕರಾದ ಆಲಿಸ್ಟಾರ್ ಕುಕ್, ಕೀಟನ್ ಜೆನಿಂಗ್ಸ್, ಒಲಿವರ್ ಪಾಪ್, ಕ್ರಿಸ್ ವೋಕ್ಸ್ ಹಾಗೂ ಆದಿಲ್ ರಶೀದ್ ಕ್ಯಾಚ್‌ಗಳನ್ನು ರಿಷಭ್ ಹಿಡಿದಿದ್ದರು.

ಈ ಮೊದಲು ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿರುವ ಚೊಚ್ಚಲ ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಉದಯೋನ್ಮುಖ ಎಡಗೈ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ವಿಶಿಷ್ಟ ದಾಖಲೆಯೊಂದನ್ನು ಬರೆದಿದ್ದರು. ಪಂತ್ ಇದೀಗ ಟೆಸ್ಟ್ ಡೆಬ್ಯು ಪಂದ್ಯದಲ್ಲೇ ಸಿಕ್ಸರ್ ಮೂಲಕ ಖಾತೆ ತೆರೆದ ಮೊತ್ತ ಮೊದಲ ಭಾರತೀಯ ಹಾಗೂ ಒಟ್ಟಾರೆಯಾಗಿ ವಿಶ್ವದ 12ನೇ ಆಟಗಾರನೆಂಬ ಗೌರವಕ್ಕೆ ಪಾತ್ರವಾಗಿದ್ದಾರೆ.

ಕಳಪೆ ಫಾರ್ಮ್‌ನಲ್ಲಿ ಬಳಲುತ್ತಿರುವ ದಿನೇಶ್ ಕಾರ್ತಿಕ್ ಸ್ಥಾನಕ್ಕೆ ಪಂತ್ ಆಯ್ಕೆಯಾಗಿದ್ದರು. ಅಲ್ಲದೆ ತಾವು ಎದುರಿಸಿದ ಎರಡನೇ ಎಸೆತದಲ್ಲೇ ಸಿಕ್ಸರ್ ಸಿಡಿಸಿದ್ದರು. ಟೆಸ್ಟ್ ಕ್ಯಾಪ್ ಧರಿಸಿದ 291ನೇ ಭಾರತೀಯ ಆಟಗಾರ ಎಂಬ ಗೌರವಕ್ಕೆ ಪಾತ್ರವಾಗಿದ್ದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ