ಲಂಡನ್: ಭಾರತ ಕ್ರಿಕೆಟ್ ನ ದಂತಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಲಾರ್ಡ್ಸ್ ಮೈದಾನದಲ್ಲಿ ರೇಡಿಯಾ ಮಾರುತ್ತಿದ್ದಾರೆ, ಅಲ್ಲದೆ ಇದಕ್ಕೆ ಟರ್ಬೋನೇಟರ್ ಹರ್ಭಜನ್ ಸಿಂಗ್ ಕೂಡ ಸಾಥ್ ನೀಡಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ 2ನೇ ದಿನದಾಟ ಮಳೆಯಿಂದಾಗಿ ಸ್ಥಗಿತಗೊಂಡಿತ್ತು. ಈ ವೇಳೆ ಮೈದಾನದಲ್ಲಿದ್ದ ನೀರನ್ನು ಸ್ವಚ್ಛಗೊಳಿಸಲು ಸಿಬ್ಬಂದಿಗಳಿಗೆ ಸಹಾಯ ಮಾಡಿ ಅರ್ಜುನ್ ಸುದ್ದಿಗೆ ಗ್ರಾಸವಾಗಿದ್ದರು. ಅರ್ಜುನ್ ತೆಂಡೂಲ್ಕರ್ ಕ್ರಿಕೆಟ್ ದಂತಕಥೆಯ ಪುತ್ರನಾಗಿದ್ದರೂ ಸಿಬ್ಬಂದಿಗೆ ನೆರವು ನೀಡುವ ಮೂಲಕ ಲಾರ್ಡ್ಸ್ ಆಡಳಿತ ಮಂಡಳಿಯಿಂದಲೂ ಶ್ಲಾಘನೆಗೆ ಪಾತ್ರರಾಗಿದ್ದರು. ಲಾರ್ಡ್ಸ್ ಮೈದಾನದ ಆವರಣದಲ್ಲಿ ಡಿಜಿಟಲ್ ರೇಡಿಯೋ ಸೆಟ್ ಗಳನ್ನು ಮಾರಾಟ ಮಾಡುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.
ಅರ್ಜುನ್ ರೇಡಿಯೋ ಸೆಟ್ ಮಾರಿದ್ದೇಕೆ?
ಮಳೆಯಿಂದಾಗಿ ಲಾರ್ಡ್ಸ್ ನಲ್ಲಿ ಎರಡನೇ ದಿನದಾಟ ಸ್ಥಗಿತವಾಗಿದ್ದ ವೇಳೆ ಅರ್ಜುನ್ ತೆಂಡೂಲ್ಕರ್ ಲಾರ್ಡ್ಸ್ ಅವರಣದಲ್ಲಿ ರೇಡಿಯೋ ಸೆಟ್ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಳಿ ಬಂದಿದ್ದಾರೆ. ಈ ವೇಳೆ ಪಕ್ಕದಲ್ಲೇ ಇದ್ದ ಭಜ್ಜಿ ಆ ರೇಡಿಯೋ ಸೆಟ್ ಗಳನ್ನು ಅರ್ಜುನ್ ಕೊರಳಿಗೆ ಹಾಕಿ ಫೋಟೋಗೆ ಪೋಸ್ ನೀಡಿದ್ದಾರೆ. ಅಷ್ಟು ಮಾತ್ರವಲ್ಲದೇ ಈ ಫೋಟೋವನ್ನು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಶೇರ್ ಮಾಡಿದ್ದಾರೆ.