ತಿರುವನಂತಪುರಂ:ಆ-19; ಭಾರೀ ಮಳೆ, ಭೀಕರ ಪ್ರವಾಹಕ್ಕೆ ತತ್ತರಿಸಿ ಹೋಗಿದ್ದ ದೇವರನಾಡು ಕೇರಳದಲ್ಲಿ ವರುಣನ ಅಬ್ಬರ ಕೊಂಚಮಟ್ಟಿಗೆ ಕಡಿಮೆಯಾಗಿದ್ದು, ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಮುಂದುವರಿದಿದೆ.
8 ಜಿಲ್ಲೆಗಳಲ್ಲಿ 58 ಎನ್ ಡಿಆರ್ ಎಫ್ ತಂಡಗಳನ್ನು ನಿಯೋಜಿಸಲಾಗಿದ್ದು, ಈ ತಂಡಗಳು ರಸ್ತೆ ತೆರವು ಹಾಗೂ ತುರ್ತು ವೈದ್ಯಕೀಯ ಚಿಕಿತ್ಸೆ ನೀಡುತ್ತಿವೆ. ಹೆಚ್ಚು ಹಾನಿಗೊಂಡಿರುವ ಪ್ರದೇಶಗಳಿಗೆ ಎನ್ ಡಿಆರ್ ಎಫ್ ತುಕಡಿಗಳನ್ನು ಸ್ಥಳಾಂತರಿಸಲಾಗುತ್ತಿದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಡಿಜಿ ತಿಳಿಸಿದ್ದಾರೆ.
ಈ ಮಧ್ಯೆ ಇಂದು ಬೆಳಗ್ಗೆ ಪಾಲ್ಕಾಡ್ ಜಿಲ್ಲೆಯಲ್ಲಿ ಸಹ ಮೃತದೇಹವೊಂದನ್ನು ಪತ್ತೆ ಹಚ್ಚಲಾಗಿದೆ. ಈ ಪ್ರದೇಶದಲ್ಲಿ ಈವರೆಗೂ 10 ಮೃತದೇಹಗಳು ಸಿಕ್ಕಿವೆ. ಭೂ ಕುಸಿತ ಇಂದು ಸಹ ಉಂಟಾಗುತ್ತಿದ್ದು, ಮೃತದೇಹಗಳನ್ನು ಪತ್ತೆ ಹಚ್ಚುವ ಕಾರ್ಯ ಕಷ್ಟಸಾಧ್ಯವಾಗಿದೆ ಎಂದು ಆರ್ ಎಫ್ ಕೊಯಂಬತ್ತೂರು ಘಟಕದ ಉಪ ಕಮಾಂಡೆಂಟ್ ಹೇಳಿದ್ದಾರೆ.
ತ್ರಿಸೂರ್ ಬಳಿಯ ಅಲಾಪ್ಪಾಡ್ ಗ್ರಾಮದಲ್ಲಿ ಗರ್ಭೀಣಿಯೊಬ್ಬರನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ ರಕ್ಷಿಸಿದ್ದಾರೆ. ಭೂಕುಸಿತದಿಂದ ಹಾನಿಯಾಗಿದ್ದ ನೆಲ್ಯಮ್ ಪಥ್ಯ ಗುಡ್ಡ ಪ್ರದೇಶದಲ್ಲಿನ ರಸ್ತೆ ತೆರವು ಕಾರ್ಯಾಚರಣೆ ಮುಂದುವರೆದಿದೆ.
ಈ ಮಧ್ಯೆ ಪ್ರಯಾಣಿಕರ ಅನಾನುಕೂಲತೆಯನ್ನು ತಗ್ಗಿಸಲು ದೇಶೀಯ ವಿಮಾನಯಾನ ಸಂಸ್ಥೆಯು ತಿರುವನಂತಪುರ, ಕ್ಯಾಲಿಕಟ್ ಮತ್ತು ಕೊಯಮತ್ತೂರು ವಿಮಾನ ನಿಲ್ದಾಣಗಳಿಗೆ ಹೆಚ್ಚುವರಿ ವಿಮಾನಗಳನ್ನು ಅಳವಡಿಸಿವೆ. ಒಂಬತ್ತು ವಿದೇಶಿ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳ ಸೇವೆಯ ಅವಧಿಯನ್ನು ಮರುಹೊಂದಿಸಲಾಗಿದೆ ಎಂದು ಕೇಂದ್ರ ವಿಮಾನಯಾನ ಸಚಿವ ಸುರೇಶ್ ಪ್ರಭು ಟ್ವೀಟ್ ನಲ್ಲಿ ತಿಳಿಸಿದ್ದಾರೆ.