17 ಶಾಸಕರು ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಜೀನಾಮೆ ಸಾಧ್ಯತೆ

 

ಬೆಂಗಳೂರು,ಆ.17- ರಾಜ್ಯ ಸಮ್ಮಿಶ್ರ ಸರ್ಕಾರದ ಮೇಲೆ ಮುನಿಸಿಕೊಂಡಿರುವ 17 ಶಾಸಕರು ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಜೀನಾಮೆ ಸಲ್ಲಿಸುವ ಸಾಧ್ಯತೆಯಿದ್ದು, ಮೈತ್ರಿ ಸರ್ಕಾರ ಪತನಗೊಳಿಸುವ ಯತ್ನಕ್ಕೆ ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಸಚಿವ ಸ್ಥಾನ ಬೇಡಿಕೆ, ನಿಗಮ ಮಂಡಳಿಗೆ ತಮ್ಮವರ ನೇಮಕ, ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಲ್ಲಾಗುತ್ತಿರುವ ವಿಳಂಬ, ಸಮಗ್ರ ರಾಜ್ಯದ ಅಭಿವೃದ್ಧಿಗೆ ರಾಜ್ಯ ಸರ್ಕಾರ ಶ್ರಮಿಸುತ್ತಿಲ್ಲ ಎಂಬ ಕಾರಣಗಳನ್ನೊಡ್ಡಿ ಸರ್ಕಾರದಿಂದ ಹೊರಬರಲು 17 ಶಾಸಕರು ತೀರ್ಮಾನಿಸಿದ್ದಾರೆ ಎನ್ನಲಾಗುತ್ತಿದೆ.
ಸ್ಥಳೀಯ ಸಂಸ್ಥೆಗಳ ಚುನಾವಣೆ ನಂತರ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಲು ಈ ಶಾಸಕರು ತೀರ್ಮಾನಿಸಿದ್ದಾರೆ ಎನ್ನುವ ಮಾಹಿತಿಯೂ ಇದೆ.
ಸರ್ಕಾರ ರಚನೆಗೆ ಕಸರತ್ತು ನಡೆಸಿ ಬಿಜೆಪಿ ವಿಫಲವಾಗಿದ್ದರೂ, ಮತ್ತೊಮ್ಮೆ ರಾಜ್ಯದಲ್ಲಿ ಅಧಿಕಾರ ಹಿಡಿಯಲು ಯತ್ನಿಸುತ್ತಿರುವ ಹಿಂದೆ ಕೇಂದ್ರ ಚುನಾವಣೆಯ ನೆರಳಿದೆ. ಕಾಂಗ್ರೆಸ್ ಮಿತ್ರಪಕ್ಷಗಳ ಮಹಾಘಟಬಂಧನ ಯಶಸ್ವಿಯಾದರೆ, ಬಿಜೆಪಿ ಮೈತ್ರಿಕೂಟ ಎನ್‍ಡಿಎಗೆ ಲೋಕಸಭೆ ಚುನಾವಣೆಯಲ್ಲಿ 50ರಿಂದ 80 ಸ್ಥಾನಗಳ ಹೊಡೆತ ಬೀಳಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದರಿಂದ ರಾಜ್ಯದಲ್ಲಿರುವ ಸಮ್ಮಿಶ್ರ ಸರ್ಕಾರ ಪತನಗೊಳಿಸಿದರೆ ಮಹಾಘಟಬಂಧನದಲ್ಲಿ ಒಡಕು ಮೂಡಲಿದೆ. ಚುನಾವಣೆ ಹೊಸ್ತಿಲಲ್ಲಿ ಮಹಾಘಟ ಬಂಧನಕ್ಕೆ ಹೊಡೆತ ಕೊಟ್ಟು ಪ್ರತಿಪಕ್ಷಗಳ ಬಲಪ್ರದರ್ಶನಕ್ಕೆ ಹೊಡೆತ ಕೊಡುವುದು ಒಂದು ಆಲೋಚನೆ ಎನ್ನಲಾಗಿದೆ.
ಅದಾಗಲೇ ಸಚಿವ ಸ್ಥಾನ ಆಕಾಂಕ್ಷಿಗಳು, ನಿಗಮ ಮಂಡಳಿ ಮೇಲೆ ಕಣ್ಣಿಟ್ಟು ಸಿಗುವ ಭರವಸೆ ಕಳೆದುಕೊಂಡವರು ಪಕ್ಷಕ್ಕೆ ಒಂದು ದಿನ ರಾಜೀನಾಮೆ ಸಲ್ಲಿಸುವ ಸಾಧ್ಯತೆ ಇದೆಯಂತೆ. ಇವರೆಲ್ಲಾ ಬಿಜೆಪಿಗೆ ಬೆಂಬಲಿಸುವ ಸಾಧ್ಯತೆ ಕಡಿಮೆ ಇದ್ದರೂ, ಸರ್ಕಾರವನ್ನು ಬೀಳಿಸುವ ಉದ್ದೇಶವಂತೂ ಇದೆ ಎನ್ನಲಾಗುತ್ತಿದೆ.
224 ಶಾಸಕರ ಬಲದ ವಿಧಾನಸಭೆಯಲ್ಲಿ ಸದ್ಯ 222 ಶಾಸಕರಿದ್ದಾರೆ. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾದ ರಾಮನಗರ ಕ್ಷೇತ್ರಕ್ಕೆ ಹಾಗೂ ಕಾಂಗ್ರೆಸ್ ಶಾಸಕ ಸಿದ್ದು ನ್ಯಾಮಗೌಡ ನಿಧನದಿಂದ ತೆರವಾಗಿರುವ ಜಮಖಂಡಿ ಕ್ಷೇತ್ರಕ್ಕೆ ಚುನಾವಣೆ ಆಗಬೇಕಿದೆ. ಹೀಗಿರುವಾಗ 17 ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದರೆ ಶಾಸಕರ ಬಲ 205ಕ್ಕೆ ಕುಸಿಯಲಿದೆ. ಬಹುಮತ ಸಾಬೀತಿಗೆ ಆಗ 103 ಶಾಸಕರಿದ್ದರೆ ಸಾಕು. ಬಿಜೆಪಿ ಸರಳ ಬಹುಮತ ಗಳಿಸಲು ಅಷ್ಟು ಸಾಲುತ್ತದೆ.
ಬಿಜೆಪಿ ಹೈಕಮಾಂಡ್ ಮಟ್ಟದ ನಾಯಕರೊಬ್ಬರು ಅತೃಪ್ತ ಶಾಸಕರ ಜತೆ ನಿರಂತರ ಮಾತುಕತೆಯಲ್ಲಿದ್ದಾರೆ ಎಂಬ ಮಾಹಿತಿಯಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ