ತಿರುವನಂತಪುರಂ:ಆ-17: ಕೇರಳದಲ್ಲಿ ವರುಣನ ರೌದ್ರಾವತಾರಕ್ಕೆ 324 ಜನ ಸಾವನ್ನಪ್ಪಿದ್ದು, 100 ವರ್ಷಗಳಲ್ಲಿ ಕಂಡರಿಯದ ಭೀಕರ ಪ್ರವಾಹಕ್ಕೆ ರಾಜ್ಯ ಸಂಪೂರ್ಣ ತತ್ತರಗೊಂಡಿದೆ.
ರಾಜ್ಯದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಈ ವರೆಗೆ 324 ಜನ ಸಾವನ್ನಪ್ಪಿದ್ದಾರೆ. ಈಗಾಗಲೇ 2 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ಹಲವೆಡೆ ಭೂಕುಸಿತ ಉಂಟಾಗಿದ್ದು, ರಾಜ್ಯದ ಬಹುತೇಕ ಪ್ರದೇಶಗಳು ಜಲಾವೃತಗೊಂಡಿದ್ದು, ರಸ್ತೆ ಸಂಪರ್ಕ ಕೂಡ ಕಡಿತಗೊಂಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಸಿಎಂ ಪಿಣರಾಯಿ ವಿಜಯನ್, ಕೇರಳ ಕಳೆದ 100 ವರ್ಷಗಳಲ್ಲೇ ಅತ್ಯಂತ ಭೀಕರ ಪ್ರವಾಹ ಎದುರಿಸುತ್ತಿದ್ದು, 80 ಡ್ಯಾಮ್ ಗಳ ಗೇಟ್ ಅನ್ನು ತೆರೆಯಲಾಗಿದೆ. ಪ್ರವಾಹದಿಂದ 324 ಮಂದಿ ಜೀವ ಕಳೆದುಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಅಲ್ಲದೇ ರಾಜ್ಯದಲ್ಲಿ 1,500 ನಿರಾಶ್ರಿತ ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, 2, 23,139 ಜನರು ಆಶ್ರಯ ಪಡೆದಿದ್ದಾರೆ. ರಕ್ಷಣಾ ಸಚಿವರೊಂದಿಗೆ ಮಾತನಾಡಿದ್ದು, ಹೆಚ್ಚಿನ ಹೆಲಿಕಾಪ್ಟರ್ಗಳ್ನು ಒದಗಿಸುವಂತೆ ಮನವಿ ಮಾಡಲಾಗಿದೆ. ಕೆಲ ಪ್ರದೇಶಗಳಲ್ಲಿ ಏರ್ ಲಿಫ್ಟಿಂಗ್ ಮೂಲಕವೇ ರಕ್ಷಣೆಗೆ ಅವಕಾಶವಿದ್ದು, ಸಾವಿರಾರು ಜನರು ಈಗಲೂ ಪ್ರವಾಹದಲ್ಲಿ ಸಿಲುಕಿಕೊಂಡಿದ್ದಾರೆ. ಕೆಟ್ಟ ಪ್ರವಾಹಕ್ಕೆ ಸಿಲುಕಿರುವ ಪ್ರದೇಶಗಳಿಗೆ ಇನ್ನು 11ಕ್ಕೂ ಹೆಚ್ಚಿನ ಹೆಲಿಕಾಪ್ಟರ್ಗಳನ್ನು ಕಳಿಸಲು ಚಿಂತಿಸಲಾಗಿದೆ ಎಂದು ತಿಳಿಸಿದ್ದಾರೆ.
ಅಲಾಪುಜಾ, ಎರ್ನಾಕುಲಂ, ತಿಸ್ಸಾರ್ ಮತ್ತು ಪಥಾನಮ್ತಿತ್ತಾ ಜಿಲ್ಲೆಗಳಲ್ಲಿ ಎಚ್ಚರಿಕೆ ಘೋಷಿಸಲಾಗಿದ್ದು, ಈಗಾಗಲೇ ಎಲ್ಲ ರಸ್ತೆ ಸಂಪರ್ಕ ಕಡಿತಗೊಂಡಿದೆ. ನಿರಾಶ್ರಿತ ಶಿಬಿರಗಳಿಗೂ ನೀರು ನುಗ್ಗುವ ಪರಿಸ್ಥಿತಿಗೆ ತಲುಪಿದ್ದು, ಸ್ಥಳದಲ್ಲಿ ಹಲವು ದೋಣಿ ಮತ್ತು ನಾಲ್ಕು ಚಾಪರ್ಸ್ಗಳನ್ನು ನಿಯೋಜಿಸಲಾಗಿದೆ.
ಇದುವರೆಗೆ 4 ಸಾವಿರ ಜನರನ್ನು ರಕ್ಷಿಸಲಾಗಿದ್ದು, ಸಂತ್ರಸ್ತರ ರಕ್ಷಣೆಗೆ ಭಾರತೀಯ ಸೇನೆಯ ಕಾಲ್ದಳ, ವಾಯುದಳ ಮತ್ತು ನೌಕಾದಳಗಳ ಸಿಬ್ಬಂದಿಗಳು ನಿರಂತರವಾಗಿ ಶ್ರಮಿಸುತ್ತಿದ್ದಾರೆ.
Kerala flood,324 death,CM Pinarayi Vijayan tweets