ಮಹಾಮಳೆಗೆ ಮುಳುಗಿದ ಕೊಡಗು: ಹಾಸನ, ಕರಾವಳಿಯಲ್ಲೂ ಜನಜೀವನ ಅಯೋಮಯ!

ಬೆಂಗಳೂರು: ಭಾರೀ ಮಳೆಗೆ ಕೊಡಗು ಭಾಗಶಃ ಮುಳುಗಿದಂತೆ ಭಾಸವಾಗುತ್ತಿದೆ. ಅಲ್ಲದೆ ಮಲೆನಾಡು ಹಾಗೂ ಕರಾವಳಿ ಭಾಗದ ಹಲವು ಜಿಲ್ಲೆಗಳು ಮಳೆಗೆ ತತ್ತರಿಸಿವೆ. ಹಾಸನ ಜಿಲ್ಲೆಯ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಅಂತೆಯೇ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಶರಾವತಿ ನದಿ ತೀರದ ಜನತೆ ಪ್ರವಾಹ ಭೀತಿ ಎದುರಿಸುತ್ತಿದ್ದಾರೆ.
ಜಿಲ್ಲೆಯಾದ್ಯಂತ ಮಳೆಯಿಂದ ಜನರು ಪರದಾಡುವಂತಾಗಿದೆ. ಪ್ರವಾಹದಲ್ಲಿ ಸಿಲುಕಿಕೊಂಡವರನ್ನು ರಕ್ಷಿಸುವುದಕ್ಕಾಗಿ ಕಾರವಾರದಿಂದ ರಕ್ಷಣಾ ಪಡೆ ಜಿಲ್ಲೆಗೆ ಧಾವಿಸಿದೆ. ಕಾರವಾರದಿಂದ ಸುಮಾರು 70 ಯೋಧರು ಮತ್ತು ಮಂಗಳೂರಿನಿಂದ 80 ಯೋಧರು ಆಗಮಿಸಿದ್ದು, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ಸತತ ಎರಡು ಗಂಟೆಗಳ ಕಾರ್ಯಾಚರಣೆ ನಡೆಸಿದ ಬಳಿಕ ರಕ್ಷಣಾ ಪಡೆಯು 20 ಗ್ರಾಮಸ್ಥರನ್ನು ಸುರಕ್ಷಿತ ಸ್ಥಳಕ್ಕೆ ಕರೆತಂದಿದೆ. ಕೊಡಗು ತಾಲೂಕಿನ ಮುಕ್ಕೋಡ್ಲು ಗ್ರಾಮದ ಕೋಟೆಬೆಟ್ಟ ಕುಸಿಯುತ್ತಿರುವುದರಿಂದ ಹತ್ತಿರದ 30 ಮಂದಿ ಅಪಾಯಕ್ಕೆ ಸಿಲುಕಿದ್ದರು.

ಮಡಿಕೇರಿ ತಾಲೂಕು ಮಾದಾಪುರ ವ್ಯಾಪ್ತಿಗೆ ಬರುವ ಹಟ್ಟಿ ಹೊಳೆ, ಕಣಿವೆ, ಮಾದಾಪುರ, ಹಾಲೇರಿಯಲ್ಲಿ ಭಾರಿ ಪ್ರಮಾಣದ ನೀರು ಏರಿಕೆ ಕಂಡಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಎಲ್ಲಿ ನೋಡಿದರೂ ಭೂಕುಸಿತ, ಮನೆಗಳು ಮುಳುಗಡೆ ಆಗಿರುವುದೇ ಗೋಚರಿಸುತ್ತಿದೆ. ಮಳೆಯಿಂದಾಗಿ ಜನ ತಮ್ಮ ಜೀವ ಕೈಯಲ್ಲಿ ಹಿಡಿದು ಬದುಕುವಂತಾಗಿದೆ.

ಇನ್ನು ಜಿಲ್ಲೆಯ ಜೋಡುಪಾಲದಲ್ಲಿ ಗುಡ್ಡ ಕುಸಿತ ಉಂಟಾಗಿದ್ದು, ಅಲ್ಲಿ ಸಿಲುಕಿದ್ದ 180 ಮಂದಿಯನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ರಕ್ಷಿಸಿದ್ದಾರೆ.
ಹಲವೆಡೆ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ಜೋಡುಪಾಲ, ಮದೆನಾಡು, ದೇವರಕೊಲ್ಲಿ ಹಾಗೂ ಅರೆಕಲ್ಲು ಭಾಗದ ನಿರಾಶ್ರಿತರನ್ನು ಸಂಪಾಜೆಯ ನಿರಾಶ್ರಿತರ ಗಂಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಹಾಸನದಲ್ಲಿ ಭಾರೀ ಮಳೆ:

ಕಳೆದ ಮೂರ್ನಾಲ್ಕು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಹಾ ಮಳೆಗೆ ಹಾಸನದ ಅರಕಲಗೂಡು ಮತ್ತು ಸಕಲೇಶಪುರ ಅಕ್ಷರಶಃ ನಲುಗಿದೆ. ಹಾರಂಗಿ ಜಲಾಶಯದಿಂದ ಬಿಡಲಾಗುತ್ತಿರುವ 80 ಸಾವಿರ ಕ್ಯೂಸೆಕ್ ನೀರಿನಿಂದ ನದಿ ಪ್ರಾತ್ರದ ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಮೇಶ್ವರ ದೇವಾಲಯದ ಪಕ್ಕದಲ್ಲಿಯೇ ಹರಿಯುವ ಕಾವೇರಿ ನದಿ 57 ವರ್ಷದ ಬಳಿಕ ತುಂಬಿ ಹರಿಯುತ್ತಿದ್ದು, ಸುತ್ತಮುತ್ತಲಿನ ಪ್ರದೇಶ ನೀರಿನಿಂದ ಮುಳುಗಡೆಯಾಗಿದೆ.
ಈಗಾಗಲೇ ರಾಮನಾಥಪುರದ ಕಾವೇರಿ ನದಿಯಲ್ಲಿ ಸುಮಾರು 70 ಅಡಿಗಳಷ್ಟು ನೀರು ಹರಿಯುತ್ತಿದ್ದು, ಸೇತುವೆ ಮೇಲೆ ನೀರು ಹರಿಯುವ ಸಾಧ್ಯತೆ ಕೂಡಾ ಇದೆ. ಮುಳುಗಡೆ ಸಂತ್ರಸ್ತರನ್ನು ಸಮುದಾಯ ಭವನಕ್ಕೆ ಸ್ಥಳಾಂತರಿಸಿ ಗಂಜಿ ಕೇಂದ್ರ ಸಹ ತೆರೆಯಲಾಗಿದೆ.
ಉತ್ತರ ಕನ್ನಡದ ಹೊನ್ನಾವರದಲ್ಲೂ ನೆರೆ ಭೀತಿ:

ಶರಾವತಿ ನದಿ ತೀರದ ಪ್ರದೇಶದಲ್ಲಿ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಲಿಂಗನಮಕ್ಕಿ ಜಲಾಶಯದ ಹೆಚ್ಚುವರಿ ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಹೀಗಾಗಿ ಜಿಲ್ಲೆಯ ಹೊನ್ನಾವರದಲ್ಲಿ ಪ್ರವಾಹ ಭೀತಿ ಎದುರಾಗಿದೆ.
43,500 ಕ್ಯೂಸೆಕ್ ನೀರನ್ನು ಹೊರಬಿಡಲಾಗಿದ್ದು, ನದಿಯಂಚಿನ ಬಳ್ಕೂರು, ಮಗೋಡು ಜನವಸತಿ ಪ್ರದೇಶಕ್ಕೆ ನೀರು ನುಗ್ಗಿದ್ದು, ಕೃಷಿ ಜಮೀನು ಜಲಾವೃತಗೊಂಡಿದೆ. ಗೆರುಸೊಪ್ಪ ಬಸ್ ನಿಲ್ದಾಣ, ಅಂಗಡಿಗಳು ಮುಳುಗಡೆಯಾಗಿವೆ. ಅಲ್ಲದೆ ನದಿಯಂಚಿನ ಮನೆಗಳು ಜಲಾವೃತಗೊಂಡಿವೆ. ಇನ್ನಷ್ಟು ಮುಳುಗಡೆಯಾಗುವ ಆತಂಕ ಎದುರಾಗಿದೆ. ಅಲ್ಲದೆ ಜಿಲ್ಲೆಯ ಹಲವೆಡೆ ಭಾರೀ ಮಳೆ ಮುಂದುವರೆದಿದೆ.
ದಕ್ಷಿಣ ಕನ್ನಡದಲ್ಲೂ ನಿಲ್ಲದ ಮಳೆ:
ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಳೆಯ ಆರ್ಭಟ ಮುಂದುವರೆದಿದೆ. ಇನ್ನು ಭಾರೀ ಮಳೆ ಹಿನ್ನೆಲೆ ಕೇರಳದ ಹಲವೆಡೆ ರೈಲ್ವೆ ಹಳಿಗಳಿಗೆ ನೆರೆ ನೀರು ನುಗ್ಗಿ ರೈಲು ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಮಂಗಳೂರು ರೈಲ್ವೆ ನಿಲ್ದಾಣವನ್ನು ಸಂಪರ್ಕಿಸುವ 12 ರೈಲುಗಳ ಪ್ರಯಾಣ ರದ್ದಾಗಿದೆ.

 

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ