ಬಕ್ರೀದ್ ಹಬ್ಬದ ಹೆಸರಿನಲ್ಲಿ ಗೋವು, ಒಂಟೆಗಳನ್ನು ಹತ್ಯೆಗೆ ತಡೆ: ಗೋ ರಕ್ಷಣಾ ಸಂಘಟನೆ ಒತ್ತಾಯ

ಬೆಂಗಳೂರು,ಆ.17- ಬಕ್ರೀದ್ ಹಬ್ಬದ ಹೆಸರಿನಲ್ಲಿ, ಗೋವು, ಒಂಟೆಗಳನ್ನು ಹತ್ಯೆ ಮಾಡುವುದನ್ನು ತಡೆಗಟ್ಟಬೇಕು ಎಂದು ಗೋ ರಕ್ಷಣಾ ಸಂಘಟನೆಯ ಸದಸ್ಯರು ಒತ್ತಾಯಿಸಿದರು.
ನಗರದ ಪುರಭವನದ ಮುಂದೆ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳು ಯಾವುದೇ ಪ್ರಾಣಿ ವಧೆ ಮಾಡದೆ ಅಹಿಂಸಾ ಮಾರ್ಗದಲ್ಲಿ ಬಕ್ರೀದ್ ಆಚರಣೆ ಮಾಡುವಂತೆ ಮನವಿ ಮಾಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮೀಜಿ ಅವರು, ಗೋವುಗಳ ಹತ್ಯೆಯನ್ನು ತಡೆಗಟ್ಟಬೇಕೆಂದು 2000ರಲ್ಲಿ ಹೈಕೋರ್ಟ್, 2006ರಲ್ಲಿ ಸುಪ್ರೀಂಕೋರ್ಟ್ ಆದೇಶ ನೀಡಿವೆ. ಆದರೂ ಕಾನೂನು ಬಾಹಿರವಾಗಿ ಲಕ್ಷಾಂತರ ಗೋವುಗಳನ್ನು ಹತ್ಯೆ ಮಾಡಲಾಗುತ್ತಿದೆ. ಅದರಲ್ಲೂ ಹಬ್ಬದ ಸಂದರ್ಭದಲ್ಲಿ ಗೋವು ಮತ್ತು ಒಂಟೆಗಳ ಸಾಗಾಣಿಕೆ ಮತ್ತು ಹತ್ಯೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರ ಕೂಡಲೇ ಎಲ್ಲ ಜಿಲ್ಲಾಧಿಕಾರಿಗಳಿಗೂ ಸೂಚನೆ ನೀಡಿ ಜಾನುವಾರುಗಳ ಹತ್ಯೆಯನ್ನು ತಡೆಯಬೇಕು. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿರುವ ಜಿಲ್ಲಾ ಸಮಿತಿಗಳ ಸಭೆಗಳನ್ನು ನಡೆಸಿ ಗೋ ಸಾಗಾಣಿಕೆ ಹಾಗೂ ಹತ್ಯೆ ತಡೆಗೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ರಾಜ್ಯ ಸರ್ಕಾರ ಈ ವಿಷಯವನ್ನು ನಿರ್ಲಕ್ಷ್ಯ ಮಾಡಿದರೆ ತಾವು ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ