ಬೆಂಗಳೂರು, ಆ.15-ದೇಶದ ಮೂಲ ಸಿದ್ಧಾಂತವನ್ನೇ ಬದಲಾವಣೆ ಮಾಡಿ ಮೂಲಭೂತ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.
ಕೆಪಿಸಿಸಿ ಕಚೇರಿಯಲ್ಲಿಂದು 72ನೇ ಸ್ವಾತಂತ್ರ್ಯದಿನಾಚರಣೆ ಅಂಗವಾಗಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ದೇಶವನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯುವ ಜವಾಬ್ದಾರಿ ಕಾಂಗ್ರೆಸ್ ಮೇಲಿದೆ. ದುಷ್ಟ ಪಕ್ಷಗಳು ಹಾಗೂ ಸಂಘಟನೆಗಳ ವಿರುದ್ಧ ನಾವು ಹೋರಾಡಬೇಕಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ಪಕ್ಷವನ್ನು ಸದೃಢಗೊಳಿಸಿ ದೇಶದಲ್ಲಿ ಮರುಸ್ಥಾಪಿಸಬೇಕಿದೆ ಎಂದರು.
ದೇಶದ ಮೇಲೆ ಆತಂಕದ ಕರಿ ಛಾಯೆ ಆವರಿಸಿದೆ. ಜಾತ್ಯತೀತೆ, ಸಮಗ್ರತೆಯಂತಹ ಮೂಲಸಿದ್ಧಾಂತಗಳನ್ನು ಬದಲಾವಣೆ ಮಾಡುವ ಧೋರಣೆಯಡಿ ಕೇಂದ್ರ ಸರ್ಕಾರ ಕೆಲಸ ಮಾಡುತ್ತಿದೆ. ನರೇಂದ್ರ ಮೋದಿಯವರು ದೇಶದ 175 ಕೋಟಿ ಜನರಿಗೆ ಪ್ರಧಾನಿಯಾಗಬೇಕಿತ್ತು. ಆದರೆ ಕೆಲವೇ ಕೆಲವು ಉದ್ಯಮಿಗಳಿಗೆ, ಶ್ರೀಮಂತರಿಗೆ ಅವರು ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಜನರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ದಲಿತರು, ಮಹಿಳೆಯರ ಮೇಲೆ ಹಲ್ಲೆಗಳಾಗುತ್ತಿವೆ. ದೇಶ ಪ್ರೇಮವನ್ನು ಜನರಿಂದ ಕೇಂದ್ರ ಸರ್ಕಾರ ಕಿತ್ತುಕೊಳ್ಳುತ್ತಿದೆ ಎಂದು ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಂಸದ ವೀರಪ್ಪ ಮೊಯ್ಲಿ, ಮಾಜಿ ಸಚಿವರಾದ ರೋಷನ್‍ಬೇಗ್, ಎಚ್.ಎಂ.ರೇವಣ್ಣ, ರಾಜ್ಯಸಭಾ ಸದಸ್ಯ ಕೆ.ಜಿ.ರಾಮಮೂರ್ತಿ, ಮೇಯರ್ ಸಂಪತ್‍ರಾಜ್ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.